Friday, March 26, 2010
ನುಡಿ ಸೇವಕನಿಗೊಂದು ಹಿಡಿ ನಮನ...
""..ಹೌದೇ, ಅವರು ಹೋದರೇ, ಇಷ್ಟು ಬೇಗ.. ಏನಾಗಿತ್ತು ಅವರಿಗೆ .."" ಎಂದು ಜನ ಕೇಳುವಂತಾ 62ರ ವಯಸ್ಸಿನಲ್ಲಿ , ನಿನ್ನೆ ನಿರ್ಗಮಿಸಿದ ಉಳ್ಳೂರುಗುತ್ತು ವಾಮನ ಶೆಟ್ಟರ ಕುರಿತಾಗಿ ಯೋಚಿಸುವಾಗ , ಸರಿ ಸುಮಾರು ಒಂದೂವರೆ ದಶಕದ ಹಿಂದೆ ಮೊದಲಾಗಿ ವೇದಿಕೆಯ ಮೇಲಿಂದ ಭಾಷಣವೊಂದನ್ನು ನೀಡುತ್ತಾ ಪರಿಚಯವಾದಾಗ ಮೊದಲ ನೋಟದ ವ್ಯಕ್ತಿತ್ವ ನಂಬಲೇಬೇಕಾದ್ದೇನು ಅಲ್ಲ ಎಂಬ ವಿಚಾರ ನಿಚ್ಚಳವಾಯಿತು.
ಪತ್ರಿಕೆಗಳು ತಮ್ಮ ವರದಿಗಳಲ್ಲಿ ಅವರಿಗೆ ಶಿಕ್ಷಣ ತಜ್ಞ ವಿಜ್ಞಾನಿ ಎಂಬ ವಿಶೇಷಣಗಳನ್ನು ನೀಡುತ್ತಿದ್ದವು. ಹಾಗೆ ನೋಡಿದರೆ, ಅವರೇನೂ ಶಿಕ್ಷಣ ಕ್ಷೇತ್ರದಲ್ಲೋ , ಪರಿಸರ ಅಥವಾ ವಿಜ್ಞಾನದ ವಿಷಯದಲ್ಲೋ ಅಂಥಾ ಪರಿಣತರಾಗಿರಲಿಲ್ಲ. ಆದರೆ ತಿಳಿದವರನ್ನು ಗೌರವಿಸುವ ಸರಳತೆ, ವಿನಯ ಇವರಲ್ಲಿತ್ತು. ಎಲ್ಲ ವಿಚಾರಗಳಲ್ಲೂ ಸಾಮಾನ್ಯ ಜ್ಞಾನವನ್ನು ರೂಢಿಸಿಟ್ಟುವ ಕೊಳ್ಳುವ ಜಾಯಮಾನ ಅವರಲ್ಲಿತ್ತು. ಹಾಗಾಗಿ ಅವರಿಗೆ ವಿಜ್ಞಾನದ ಒಗಟುಗಳ ಬಗೆಗೆ, ಸುತ್ತಲ ಪರಿಸರದ ಬಗೆಗೆ, ಶಿಕ್ಷಣದ ಬಗೆಗೆ ತನ್ನದಾದ ಸ್ಪಷ್ಟ ನಿಲುವೊಂದಿತ್ತು. ಕಾರ್ಖಾನೆಗಳ ಮಾಲೀಕರಾಗಿ "ಧಣಿ"ಯ ಅಂತಸ್ತಿದ್ದರೂ ತನ್ನ ಶಾಲೆಯಲ್ಲಿ ಗುಮಾಸ್ತರಾಗಿ, ಮಾಸ್ತರರಾಗಿ ದುಡಿವ ಸಿಬ್ಬಂದಿಯ ಸಾಹಿತ್ಯ ಪ್ರೀತಿಯನ್ನು ಗುರುತಿಸಿ ಪ್ರೋತ್ಸಾಹಿಸುವ, ಗೌರವಿಸುವ ಸಂಸ್ಕಾರ ವಿತ್ತು. ಮಹಾರಾಷ್ಟ್ರದ ಮುಖ್ಯ ಜಿಲ್ಲೆಗಳಲ್ಲೊಂದಾದ ಥಾಣೆಯ ಮಾಜಿವಾಡದಲ್ಲಿ ಕನ್ನಡಿಗರ ಶಾಲೆಯೊಂದನ್ನು ""ಕನ್ನಡ ಶಿಕ್ಷಣ ಕೊಡುವ ಶಾಲೆ "" ಯನ್ನಾಗಿಯೇ ಉಳಿಸಿಕೊಳ್ಳುವ ಹಟ, ಉಳಿಸಿಕೊಂಡ ಕೆಚ್ಚು ಅವರಲ್ಲಿತ್ತು.
ರಾಸಾಯನಿಕ ಪದಾರ್ಥಗಳನ್ನು ತಯಾರಿಸುವ ಉದ್ಯಮದಿಂದ ಕನ್ನಡದ ಕೈಂಕರ್ಯಕ್ಕಿಳಿದ ನುಡಿ ಸೇವೆಯ ಆರಂಭದ ದಿನಗಳ ಅವರ ಮಾತುಗಳಲ್ಲಿ ಕೌಶಲ್ಯಕ್ಕಿಂತಲೂ ಹೆಚ್ಚು ಉದ್ವೇಗವಿರುತ್ತಿತ್ತು... 90 ರ ದಶಕದ ಕೊನೇ ಭಾಗದಲ್ಲಿ, ಡೊಂಬಿವಲಿಯ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ಮುಂಬಯಿ ಕನ್ನಡದ ಕುರಿತಾದ ಅವರ ಮಾತಿನ ಕೊನೆಯಲ್ಲಿ , ಕಿವಿಯಲ್ಲಿ . "" ನಿಮಗೆ ಕಟ್ಟುವ ಹಟ, ಉಮೇದು, ಉತ್ಸಾಹವಿದೆ.. ಆದರೆ ಮಾತಿನಲ್ಲಿ ಉದ್ವೇಗ ವಿರದಂತೆ ನೋಡಿಕೊಳ್ಳಿ.ಹಾಗಾಗದಿದ್ದರೆ , ವಿಚಾರಗಳು ಆವೇಶದ ಒಯ್ಲಿನಲ್ಲಿ ಕೊಚ್ಚಿ ಹೋಗುತ್ತದೆ.." ಅಂದಿದ್ದೆ. ಅವರು ನಕ್ಕು ತಲೆಯಾಡಿಸಿದ್ದರು. ಕನ್ನಡದಲ್ಲಿ ಪತ್ರಿಕೆಗಳಿಗೆ ಬರೆಯುವ ಪ್ರಯತ್ನ ಅವರು ಮಾಡಿದ್ದರು . ಉದ್ವೇಗ , ಆವೇಶಗಳಿಂದ ಕನ್ನ್ನಡದ ವೇದಿಕೆಗಳಲ್ಲಿ ಆಗಾಗ ಮಾತಾಡುತ್ತಿದ್ದರು. ಆದರೆ, ಅಲ್ಲಿ ಸಿಗದ ಪ್ರಭುತ್ವವನ್ನು ಕನ್ನಡ ಭಾಷಾ ಶಿಕ್ಷಣದ ಮೇಲಿನ ಅದಮ್ಯ ಪ್ರೀತಿ, ಅಭಿಮಾನಗಳ ಮೂಲಕ ಸರಿದೂಗಿಸಿದ್ದರು. ಒಳ್ಳೆಯ , "ಆಡಳಿತದ ಚುಕ್ಕಾಣಿ ಹಿಡಿದ ಮಂದಿಯೂ"" ತಲೆದೂಗುವಂತಾ ಮರಾಠಿಯಲ್ಲಿ ಮಾತಾಡಿ, ತಾನು ಅಧ್ಯಕ್ಷನಾಗಿದ್ದ ಮಾಜಿವಾಡದ ಆದಿ ಶಕ್ತಿ ಕನ್ನಡ ಪ್ರಾಥಮಿಕ -ಪ್ರೌಢ ಶಾಲೆಗಳೆರಡಕ್ಕೂ ಸರಕಾರದ ಗ್ರಾಂಟು (ಅನುದಾನ) ದೊರಕಿಸಿಕೊಟ್ಟಿದ್ದ್ದರು. ರಾಷ್ಟ್ರೀಯ ನಾಯಕರ ದಿನಗಳು, ನಾಯಕರ ಜಯಂತಿ ಉತ್ಸವಗಳು, ಹಬ್ಬ , ಇತ್ಯಾದಿಗಳನ್ನ್ನು ಸದಾ ತನ್ನ ಅವಳಿ ಶಾಲೆಗಳಲ್ಲಿ ಆಚರಿಸುವ ಮೂಲಕ ವಾಮನ ಶೆಟ್ಟರು ಥಾಣೆಯ ಈ ಭಾಗದಲ್ಲಿ ಕನ್ನಡಿಗರ ಒಗ್ಗಟ್ಟಿಗೆ, ನಾಡು ನುಡಿಯ ಜೀವಂತಿಕೆಗೆ ಕಾರಣರಾಗಿದ್ದರು.ಕೆಡುತ್ತಿದ್ದ ಆರೋಗ್ಯದ ನಡುವೆಯೂ ಶಾಲೆಯ ಎಲ್ಲ ಕಾರ್ಯಕ್ರಮಗಳಲ್ಲಿ ಸ್ವತಹಾ ತಪ್ಪದೆ ಭಾಗವಹಿಸಿ, ಹುದ್ದೆಯನ್ನೇರಿದ ಕಾಟಾಚಾರಕ್ಕೆ ಕನ್ನಡದ ಮಾತಾಡುವ ಮಂದಿಗೆ ಮೇಲ್ಪಂಕ್ತಿಯಾಗಿದ್ದರು.
ಅವರ ನಿಲುವುಗಳನ್ನು ಆಕ್ಷೇಪಿಸುವುದು ಸುಲಭವಿರಬಹುದು . ಸಾರ್ವಜನಿಕ ಬದುಕಿಗೆ ತೋರಿದ ಬದ್ದತೆ, ತೋರಿದ ಛಲ, ನಡೆಸಿದ ನಾಡ ಸೇವೆಯ ಮಾದರಿಯನ್ನನುಸರಿಸುವುದು ಕಷ್ಟ. ತನ್ನ ನಿಲುವು ತಪ್ಪೆಂದು ತಿಳಿದಾಗ ಹಿಂಜರಿಕೆ ಇಲ್ಲದೆ ಅದನ್ನು ಬದಲಿಸಿಕೊಳ್ಳುತ್ತಿದ್ದ , ವಾಮನ ಶೆಟ್ಟರದು, ವ್ಯಕ್ತಿತ್ವ, ಯೋಚನೆ , ಕೊನೆಗೆ ಸಾಂಸಾರಿಕ ಬದುಕಲ್ಲೂ ಸ್ವಲ್ಪ ಭಿನ್ನ ರೂಪ . ಅದು ಅವರ ಸಾವಲ್ಲೂ ಪ್ರತಿಫಲಿಸಿದಂತಿದೆ. ಒಂದೊಮ್ಮೆ ತಾವು ತೀರ ಭಿನ್ನಾಭಿಪ್ರಾಯ ಹೊಂದಿದ್ದ , ದ.ಕ.ಜಿಲ್ಲೆಯ ಅಭಿವೃದ್ದ್ದಿಯ ಕಾರಣ ಹೊತ್ತು ಹುಟ್ಟಿದ ಜಯಶ್ರೀ ಕೃಷ್ಣ ಪರಿಸರ ಪ್ರೇಮೀ ಸಮಿತಿಯ ಜೊತೆಗೆ ಬಳಿಕ ಸಹಮತಕ್ಕೆ ಬಂದ ಅವರು ಅದೇ ವೇದಿಕೆಯಲ್ಲಿ ಅಂತ್ಯ ಕಂಡದ್ದು ... ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಮಾತಾಡುತ್ತಲೇ ಕುಸಿದ ಅವರ ದೇಹಕ್ಕೆ ಕರ್ನಾಟಕದ ಕರಾವಳಿಯನ್ನು ಪ್ರತಿನಿ-ಸುವ ಕ್ರಿಶ್ಚಿಯನ್, ಮುಸ್ಲಿಮ್, ಕೊಂಕಣಿ, ಬಂಟ ಬಿಲ್ಲವ , ಮೊಗವೀರ ಹೀಗೆ ಎಲ್ಲ ಜಾತಿ ಧರ್ಮಗಳ ಸಂಘದ ಪ್ರತಿನಿ-ಗಳ ಕೈಗಳು ಆಧಾರವಾದವು . ಅಪರೂಪಕ್ಕೆ ದೇಶದ ನಾಯಕರುಗಳಿಗೆ ಸಿಗುವಂತಾ ಗೌರವವಿದು.
*****
ನೇರಾ ನೇರ ಹೇಳುವುದಾದರೆ , ಮಹಾನ್ ಶಿಕ್ಷಣ ತಜ್ಞರೆಂದು ಬಿರುದುಕೊಟ್ಟು , ಮರೆತು ಬಿಡುವುದಕ್ಕಿಂತ , ಮಹಾರಾಷ್ಟ್ರದ ಮಣ್ಣಲ್ಲಿ ಕನ್ನಡ ನುಡಿಯ ಶಿಕ್ಷಣಕ್ಕಾಗಿ ತನ್ನ ಛಲ, ಶ್ರಮ, ಸಮಯ ,ಜ್ಞಾನ ಮತ್ತು ಹಣವನ್ನು ಮೀಸಲಿಟ್ಟ ಶಿಕ್ಷಣ ಪ್ರೇಮಿ , ನುಡಿ ಸೇವಕನೆಂದು ಸರಳವಾಗಿ ಕರೆದು ಅವರನ್ನು ನೆನಪಿಟ್ಟುಕೊಳ್ಳುವುದು ನನಗಿಷ್ಟ.
*************** *
Sunday, February 7, 2010

ಮು೦ಬೈ ರಸ್ತೆ ಬದಿಯ ಅತಿಥೇಯ… ಈ “ಬೆ೦ಚ್ ಮೆನ್”….!
ಎಲ್ಲ ಕಾಲಕ್ಕೂ ಜನ ನಿರಂತರವಾಗಿ ನಡೆಸಿಕೊಂಡು ಬಂದಿರುವ ಒಂದು ಕೆಲಸವೆಂದರೆ ಕಾಲ ಕೆಟ್ಟುಹೊಯಿತೆಂದು ಆಡಿಕೊಳ್ಳುತ್ತಾ ಬಂದಿರುವುದು. ನಡುವೆ ಇವ್ಯಾವುದಾರ ಪರಿವೆಯೂ ಇಲ್ಲದೆ , ಕೆಟ್ಟು ಹೋಗುವ ಕಾಲದೊಂದಿಗೆ ಕೆಡದೆ ಬದುಕಿನ ಸಾಫಲ್ಯಕ್ಕೆ , ಅರ್ಥವಂತಿಕೆಗೆ ,ಕಾರಣವಾಗುತ್ತಾ , ಬದುಕುವವರು ಕೆಲವರು. ತಮ್ಮ ಇರವಿಗೆ , ತಮಗೆ ದೊರೆತ ಅರಿವಿಗೆ , ತಾವು ಕಂಡು ತಮ್ಮ ವ್ಯಕ್ತಿತ್ವದಲ್ಲಿ ಅರಗಿಸಿಕೊಂಡ ಮನುಷ್ಯತ್ವಕ್ಕೆ ಇಂಬು ನೀಡುವ ಇಂತವರು ಸಂಖ್ಯೆಯಲ್ಲಿ ಕಡಿಮೆ ಇರಬಹುದು , ಆದರೆ ಇವರು ಮಾಡುವ ಕೆಲಸ ದೊಡ್ಡದು. . ಇವರೆಂದೂ ಕಾಲದ ಬಗೆಗೆ ಗೊಣಗಿದ್ದನ್ನಾಗಲೀ, ಬದಲಾಗುತ್ತಿರುವ ವೌಲ್ಯಗಳ , ಮನುಷ್ಯರ ಕುರಿತು , ಆಡಿದ್ದನ್ನಾಗಲೀ ನೀವು ಕೇಳಲಾರಿರಿ. ತಮ್ಮ ಕೆಲಸ ಮುಗಿಯುತ್ತ ಲೇ ಸದ್ದಿಲ್ಲದೆ ಅಲ್ಲಿಂದ ಬದಿಗೆ ಸರಿದು ನಿಲ್ಲುತ್ತಾರವರು..
ಕೊಡು ಪಡೆದುಕೊಳ್ಳುವವರಿಬ್ಬರೂ ಹೆಚ್ಚುತ್ತಿರುವ ಕಾಲವಿದು . ಕೊಟ್ಟವನಿಗೆ ಕೊಟ್ಟದ್ದನ್ನು ಹೇಳಿ ಕೊಳ್ಳುವ ಚಪಲ ಹೆಚ್ಚಿರುವಂತೆಯೇ ಪಡೆದವನಿಗೂ ಕೊಟ್ಟವನ ಬಗೆಗೆ ತಾರೀಪು ಮಾಡಿದಷ್ಟೂ ಸಾಕೆನಿಸುತ್ತಿಲ್ಲ. ಕಾರಣ ಅದರಿಂದ ಅವನ ಮುಂದಿನ ದಿನಗಳ "ಹಸಿವೆ" ಗೂ ನಿರಂತರ ದಾರಿಯಾಗುತ್ತದೆ. ಈ ಮಧ್ಯೆ ನಿಜಾರ್ಥದಲ್ಲಿ , ಡಿವಿಜಿ ಹೇಳಿದಂತೆ "ಬೆಳಕೀವ ಸೂರ್ಯ ಚಂದ್ರರದೊಂದು ಸದ್ದಿಲ್ಲ, ಇಳೆಯಿಂದ ಮೊಳಕೆವೊಡೆವಂದು ತುತ್ತೂರಿ ದನಿಯಿಲ್ಲ.." ಎಂಬಂತೆ ಸದ್ದಿಲ್ಲದೆ, ಸುದ್ದಿ ಮಾಡದೆ ಬೆಳಕಿತ್ತವರು ಯಾರ ಗಮನಕ್ಕೂ ಬರುತ್ತಿಲ್ಲ, ಅಥವಾ ಬಂದರೂ ನಮಗದು ಅಷ್ಟಾಗಿ ಮುಖ್ಯವೆನ್ನಿಸುತ್ತಿಲ್ಲವೇನೋ..
ಹತ್ತಿರದ ಸಂಬಂಧಿಕರೊಬ್ಬರು ಮೃತರಾಗಿದ್ದ ವೇಳೆ ಅವರ ಅಂತ್ಯಕ್ರಿಯೆಗಾಗಿ ದುಃಖ ತಪ್ತರಾಗಿ ಸ್ಮಶಾನಕ್ಕೆ ಹೋದದ್ದನ್ನು ನೆನಪಿಸಿಕೊಳ್ಳಿ. ದೇಹದ ಅಂತಿಮ ಕ್ರಿಯೆಯನ್ನು ಪೂರ್ತಿ ಗೊಳಿಸುವ ಮುನ್ನ , ತೀರಾ ಬಂಧುವಿನ ಆಗಮನಕ್ಕಾಗಿ ಕಾದು ಸುಸ್ತಾಗಿರುತ್ತೀರಿ . ಆಗ ಅಲ್ಲೆರಡು ಕಂದು ಬಣ್ಣದ ಬೆಂಚುಗಳು ನಿಮ್ಮ ಸುಸ್ತಾದ ಬೆನ್ನೆಲುಬಿಗೊಂದು ಕ್ಷಣದ ಆರಾಮ ನೀಡಲು ಕಾಯುತ್ತಿರುತ್ತದೆ. ಕ್ರಿಯೆಗಳೆಲ್ಲ ಮುಗಿದು ಮನ ಭಾರವಾಗಿ,ಇನ್ನೇನು ಮನೆಯತ್ತ ಮುಖ ಮಾಡುವ ಮೊದಲು ಕೈ ಕಾಲಿಗೊಂದಿಷ್ಟು ನೀರ ಸಿಂಚನ ನೀಡಲು ಅತ್ತಿತ್ತ ನೋಡಿದರೆ ಅಲ್ಲೊಂದು ನೀರಿನ ಟ್ಯಾಂಕಿ. ಮುಖ ತೊಳೆದು ಒಂದು ಜೀವದ ಯಾತ್ರೆ ಮುಗಿಯೆತೆಂದು , ಆ ಜೀವಕ್ಕೆ ಮನದಲ್ಲೇ ನಮಿಸಿ ಹೊರಡುತ್ತೀರಿ. ಇತ್ತ ರೈಲು ಹತ್ತಲು ರೈಲ್ವೇ ನಿಲ್ದಾಣಕ್ಕೆ ಬಂದರೆ ಆಗ ತಾನೇ ಹೊರಟ ಬಂಡಿಯ ಬಾಲ ಕಾಣಿಸುತ್ತದೆ. ಸರಿ ಇನ್ನೊಂದಕ್ಕೆ ಕಾಯೋಣವೆನ್ನುತ್ತ ಆತ್ತಿತ್ತ ನೋಡುವರೇ ಅದೇ , ಅದೇ ಕಂದು ಬಣ್ಣದ ಸಿಮೆಂಟಿನ ಬೆಂಚು ಬೆನ್ನಿಗಾಸರೆ.
ಹದಿನೈದು ವರ್ಷಗಳ ಹಿಂದೊಮ್ಮೆ ಸಯನ್ ಸ್ಟೇಶನ್ನಿನ ಪ್ಲಾಟ ಫಾರಂ ನಂಬರ್ ೧ ರಲ್ಲಿ ಒಂದಷ್ಟು ಜನ ಸುತ್ತ ಜಮಾಯಿಸಿದಂತೆ ಕಂಡು ಬಂದಿತ್ತು. ಪಕ್ಕದ ರೈಲ್ವೇ ಕ್ವಾರ್ಟರ್ಸ್ ನಲ್ಲೇ ಇದ್ದ ವಸತಿಯಿಂದ ಇಳಿದುಬಂದು ನೋಡಿದರೆ ಕೆಲ ರೈಲ್ವೇ ಯಾತ್ರಿ ಹೆಂಗಸರು ಬಸುರಿ ಹೆಣ್ಣೊಬ್ಬಳಿಗೆ ನೆರವಾಗುತ್ತ್ತಿದ್ದರು . ಅದು ಸುಮಾರು ಬೆಳಗ್ಗಿನ ೬ ರ ವೇಳೆ . ಹೆರಿಗೆಗೆಂದು ವಿದ್ಯಾವಿಹಾರದಿಂದ ಸಯನ್ ಆಸ್ಪತ್ರೆಗೆ ದಾಖಲಾಗಲು ಹೊರಟಿದ್ದ ಜೋಪಡಾ ನಿವಾಸಿ ಹೆಣ್ಣು ಮಗಳು ರೈಲಿಂದ ಇಳಿಯುತ್ತಲೇ ಬಸಿರ ಭಾರ ತಾಳಲಾರದೆ ಕುಸಿದು ಬಿಟ್ಟಿದ್ದಳು. ಬಳಿ ಇದ್ದ ಪ್ರಯಾಣಿಕರು ಆಕೆಯನ್ನು ಎತ್ತಿ ಜತನದಿಂದ ಸಿಮೆಂಟಿನ ಬೆಂಚಿನ ಮೇಲೆ ಮಲಗಿಸಿದರು. ಪ್ರಸವದ ಬಳಿಕ ಈ ಹಠಾತ್ ಹೆರಿಗೆಗೆ ನೆರವಾದ ಆ ಹೃದಯವಂತರಲ್ಲೊಬ್ಬ ಹೆಂಗಸು ಪಕ್ಕದಲ್ಲೇ ತಂಪು ನೀರಿನ ನಳ್ಳಿಯಿಂದ ನೀರನ್ನು ತಂದು ಬೆಂಚನ್ನು ನೆಲವನ್ನು ತೊಳೆದದ್ದು ಮೊನ್ನೆ ನಡೆದಂತೆ ಕಣ್ಣೊಳಗೆ ಕಟ್ಟಿದೆ. ಆಗಲೇ ಕಂಡದ್ದು, ಮುಂಬಯಿಯ ಜನ ಸಾಮಾನ್ಯನ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಈ ಕಂದು ಬಣ್ಣದ ಬೆಂಚು ಮತ್ತು ನೀರಮನೆ (ಪೀಯೂಸ್) ಯ ಅರ್ಥಪೂರ್ಣ ಅನುಸಂಧಾನ .ಜೊತೆಗೆ ಇದರ ಹಿಂದಿರುವ ಒಂದು ಹೂ ಮೊಗ್ಗೆಯಂತಾ ಮನಸ್ಸು.
ಹಾಗೆ ನೋಡಿದರೆ ಇದು ಒಂದು ಬೆಂಚು ನೀರ ಮನೆ ಯ ಕಥೆಯಲ್ಲ. ಮುಂಬಯಿ ಎಂಬ ಮಹಾ ಶಹರದಲ್ಲಿ ನಿರಂತರವಾಗಿ ಕಳೆದ ಅರ್ಧಶತಮಾನದಿಂದ (೧೯೫೯-2009) ನಡೆದುಬಂದ ಮಹಾ "ದಾನ ಯಜ್ಞ ' ವೊಂದರ ಯಶೋಗಾಥೆ...
...ಅನಾಥ ಮಕ್ಕಳು , ನೊಂದ ಮಹಿಳೆಯರು ,ಬದುಕಿನ ಸಂಜೆಯಲ್ಲಿರುವ ವೃದ್ದರು ,ಅಶಕ್ತ ವಿಕಲಾಂಗರು , ಬಿದ್ದ ಬದುಕಿನ ಜಟಕಾಬಂಡಿಯನ್ನೆತ್ತಿ ಮತ್ತೆ ಜೀವನದ ಓಟದಲ್ಲಿ ಸಾಗಲೆತ್ನಿಸುವವರು....ಓಹ್..!!! ನೂರು ಸಾವಿರ ಬಗೆಯಲ್ಲಿ , ವಿಧದಲ್ಲಿ ಲಕ್ಷೋಪಲಕ್ಷ ಜನರ ಬದುಕಿಗೆ ಆಸರೆಯಾದ ಕಥೆ... ಇಲ್ಲ , ಇನ್ನೇನು ಬೆಳಕು ನಂದಿಯೇ ಹೋಯಿತು ಎಂದು ನಿಡುಸುಯ್ದಾಗ ಜೀವದ ಬೆಂಕಿ ಆರದಂತೆ ತೈಲ ಎರೆದ, ಎರೆಯುತ್ತಲೇ ಇರುವ ಕೈಯ ಕಥೆ.. !
ಸಮುದ್ರದ ಬದಿಯ ಕೊಲಬಾದಿಂದ ಹಿಡಿದು ಪಶ್ಚಿಮದಲ್ಲಿ ಮುಂಬಯಿ ಶಹರದ ಕೊನೆಯ ಉಪನಗರ ದಹಿಸರ್ ವರೆಗೆ ಇತ್ತ ವಿಟಿ ಯಾನೆ ಛತ್ರಪತಿ ಶಿವಾಜಿ ನಿಲ್ದಾಣದಿಂದ ಥಾಣೆ ಯ ವರೆಗೆ ರೈಲ್ವೇ ನಿಲ್ದಾಣಗಳು , ಪಾರ್ಕುಗಳು, ಸಾರ್ವಜᅵನಿಕ ಆಸ್ಪತ್ರೆಗಳು, ಜಿಲ್ಲಾ ಕಚೇರಿ, ಕೋರ್ಟು ಆವರಣಗಳು, ಶ್ಮಶಾನಗಳು, ಶಾಲೆ ಕಾಲೇಜು ಬಯಲುಗಳು, ಮಂದಿರಗಳು, ನಗರ ಪಾಲಿಕೆಗಳ, ಎಲ್ಲ ಬಸ್ ನಿಲ್ದಾಣಗಳು ಹೀಗೆ ಜನ ಸಾಮಾನ್ಯ ಭೇಟಿ ನೀಡುವ ಎಲ್ಲೆಡೆ ೨೧ ಸಾವಿರಕ್ಕೂ ಹೆಚ್ಚು ಕಂದು ಬಣ್ಣದ 'ತ್ರೀ ಸೀಟರ್ " ಸಿಮೆಂಟಿನ ಬೆಂಚುಗಳು ೧೨೫ ಕ್ಕೂ ಮಿಕ್ಕಿದ ತಂಪು ನೀರ ಮನೆ (ಪೀಯೂಸ್) ಗಳು....
ಆರೋಗ್ಯ ವಿಭಾಗದಲ್ಲಿ, ನಗರದ ವಿ ಎನ್ ದೇಸಾಯಿ , ನಾನಾವಟಿ , ಬೊಯಿಸರ್ , ತಾರಾಪುರ್ ಮತ್ತು ಅಮರಾವತಿ ಸೇರಿದಂತೆ ೮ ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಬೆಂಕಿ ಅವಘಡ ಮತ್ತು ನೇತ್ರ ಚಿಕಿತ್ಸಾ ವಾರ್ಡ್ ಗಳು... ೨೭ ಆಸ್ಪತ್ರೆಗಳಿಗೆ ಅಂಬುಲೆನ್ಸ್ ಗಳು.. ೫೫ ನೇತ್ರ ಚಿಕಿತ್ಸಾ ಶಿಬಿರಗಳು, ೬ ಸಾವಿರ ಉಚಿತ ಕನ್ನಡಕಗಳು, ಕಾಲಿಲ್ಲದವರಿಗೆ ಗಾಗಿ ೬೦೦ ಜೈಪುರ ಕಾಲುಗಳು, ವಿಕಲಾಂಗರಿಗಾಗಿ ೧೭೫೪ ತ್ರಿಚಕ್ರ ಸೈಕಲ್ ಗಳು.. ೪೮೦ ಪಿ ಸಿ ಓ (ಟೆಲಿಫೋನ್ ಬೂತು) ಗಳು..ಕಣ್ಣಿಲ್ಲದವರಿಗಾಗಿ ೩೫೦ ಬ್ರೈಲ್ ವಾಚುಗಳು..ಕುರುಡರ ಆರೋಗ್ಯ ತಪಾಸಣೆಗಾಗಿಯೇ ವಿಶೇಷ ಟ್ರಸ್ಟ್ , ಆಸ್ಪತ್ರೆಯ ಸ್ಥಾಪನೆ..
ಆರ್ಥಿಕ ದುರ್ಬಲᅵ ಮಕ್ಕಳ ವಸತಿ ಕಲಿಕೆಗಾಗಿ ೫೦ ಕ್ಕೂ ಮಿಕ್ಕಿದ ಬಾಲಮಂದಿರ , ಬಾಲವಾಡಿ, ಎಲ್ಲರ ಮರುಕಕ್ಕೆ ಪಾತ್ರರಾದರೂ ಯಾರ ನೆರವೂ ದೊರಕದ ಕೊಳೆಗೇರಿಯಲ್ಲಿ ಮತ್ತು ವೇಶ್ಯಾ ಗಲ್ಲಿಗಳಲ್ಲಿ ಜನಿಸಿದ ಮಕ್ಕಳನ್ನು ಹುಡುಕಿ ಶಾಲೆಗೆ ತರುವುದಕ್ಕಾಗಿಯೇ ಹತ್ತಾರು ಮೊಬೈಲ್ ವ್ಯಾನುಗಳು, ೧೧ ಹಾಸ್ಟೆಲುಗಳು , ವಾರಕ್ಕೊಮ್ಮೆ ನಡೆಯುವ ೭೦ ಕ್ಕೂ ಹೆಚ್ಚಿನ ವೈದ್ಯಕೀಯ ತಪಾಸಣಾ ಶಿಬಿರಗಳು...
ಮಹಿಳೆಯರ ಪುನರ್ವಸತಿ ಮತ್ತು ಕಲ್ಯಾಣಕ್ಕಾಗಿ "ಶೆಲ್ಟರ್" ಎಂಬ ವಿಶೇಷ ಯೋಜನೆ, ೧೭ ಪುನರ್ವಸತಿ ಉಚಿತ ಹಾಸ್ಟೆಲ್ ೩೪೦೦ ಕ್ಕೂ ಮೀರಿದ ಹೊಲಿಗೆ ಯಂತ್ರ ವಿತರಣೆ.. ಪ್ರತಿ ವಾರ ವೃತ್ತಿ ಕಲಿಕೆ ಮತ್ತು ಅನುಭವ ಕಾರ್ಯಾಗಾರ, ಮಹಿಳೆಯರಿಗಾಗಿಯೇ ೩೧ ವೃದ್ದಾಶ್ರಮ ಮತ್ತು ಅನಾಥಾಶ್ರಮ ಗಳು...
ಉಪನಗರ ಮಲಾಡ್ ನಲ್ಲಿ ಸರಾಫ್ ಗರ್ಲ್ಸ್ ಕಾಲೇಜು, ಹೈಸ್ಕೂಲು, ಘನಶಾಮ್ ದಾಸ್ ಪಾರ್ಕ್ , ನಗರ ಪಾಲಿಕೆ ವ್ಯಾಪ್ತಿಯಲ್ಲಿ ೪೭ ಸಾರ್ವಜᅵನಿಕ ಶೌಚಾಲಯಗಳು, ಬಡವರ ಮದುವೆ ಸಮಾರಂಭಗಳಿಗಾಗಿಯೇ ಮೀಸಲಾದ ೧೧ ಕಮ್ಯೂನಿಟಿ ಹಾಲ್ ಗಳು..೮೫ ಶಾಲೆಗಳಿಗೆ ಉಚಿತ ಗ್ರಂಥಾಲಯಗಳು...!
ಸುಮಾರು ಮುನ್ನೂರಕ್ಕೂ ಹೆಚ್ಚಿನ ವಿಭಾಗಗಳಲ್ಲಿ ಪ್ರತಿ ವರ್ಷ ಪ್ರತಿ ದಿನ ಪ್ರತಿ ತಾಸು ಎಂಬಂತೆ ನಡೆಯುತ್ತಿರುವ ಈ ಚತುರ್ ವಿಧದ ದಾಸೋಹವನ್ನು ಎಷ್ಟು ಲೆಕ್ಕ ಹಾಕುತ್ತೀರಿ..ಹೇಗೆ ಲೆಕ್ಕ ಹಾಕುತ್ತೀರಿ..?
****
ಆಗ ತಾನೇ ಅವರು ಎಸ್ ಎಸ್ ಸಿ ಮುಗಿಸಿ ಕೈಗಾರಿಕಾ ಡಿಪ್ಲೊಮಾವೊಂದನ್ನು ಪೂರೈಸಿ ವರ್ಲಿಯᅵಲ್ಲಿ ಸುಪರ್ ಟೆಕ್ಸ್ ಸರೆಕ್ಸ್ ಗ್ರೂ ಪ್ ಆರಂಭಿಸಿದ್ದರು. ಅವರ ಹೆಸರು ಮಹಾವೀರ್ ಸರಾಫ್ , ವಯಸ್ಸು ಇನ್ನೂ ಇಪ್ಪತ್ತೈದು !ಉದ್ಯಮದ ಜೊತೆಗೇ ಅದೇ ವರ್ಷ ಜನತಾ ಜನಾರ್ದನನ ಸೇವೆಗೂ ನಾಂದಿ . ತಂದೆ ಘನ ಶ್ಯಾಮ್ ದಾಸ್ ಮತ್ತು ದುರ್ಗಾದೇವಿ ಸರಾಫ್ ಇವರ ಹೆಸರಲ್ಲಿ ೧೯೫೯ ರಲ್ಲಿ ಆರಂಭವಾದ ಈ ಬೃಹತ್ ಸೇವಾ ಕೈಂಕರ್ಯಕ್ಕೆ ಮುಂದೆ ಮಹಾವೀರ ಪ್ರಸಾದ್ ಟ್ರಸ್ಟ್ , ಕಿರಣ್ ದೇವಿ ಹಾಗೂ ಸುಪರ್ ಟೆಕ್ಸ್ ಫೌಂಡೇಶನ್ ಗಳೂ ಸೇರಿ ಪಂಚ ಮುಖಗಳಿಂದ ಸೇವಾ ಯಜ್ಞ ನಡೆದಿದೆ. ಆದರೆ ಈ ಐದೂ ಮುಖಗಳ ಹಿಂದಿನ ಮನುಷ್ಯ ಮುಖವೊಂದೇ ... ಮಹಾವೀರ್ ಸರಾಫ್ !
****
ಕೋರ್ಪೊರೇಟ್ ಜಗತ್ತಿನಲ್ಲಿ ಅವರ ಉದ್ಯಮಕ್ಕೆ ಒಳ್ಳೆಯ ಹೆಸರಿದ್ದರೂ ಅದೇನೂ ಅಂಬಾನಿ, ಟಾಟಾ ಬರುವಂತಾದ್ದಲ್ಲ. ಆದರೆ ದಾನ ಕಾರ್ಯದ ಹಣದ ವೌಲ್ಯ ೪೦೦ ಕೋಟಿಗೂ ಹೆಚ್ಚು . ಬದಲಿಗೆ ಯಾವನಾದರೂ ರಾಜಕಾರಣಿಗೆ ಒಂದೆರಡು ಕೋಟಿ ಕೊಡುತ್ತಿದ್ದರೆ ಅವರು ಮಲ್ಯ ಬಜಾಜ್ ಗಳಂತೆ ಸಂಸತ್ತಿಗೆ ಹಿಂಬಾಗಿಲ ಪ್ರವೇಶ (ರಾಜ್ಯ ಸಭಾ ಸದಸ್ಯತ್ವ) ಪಡೆಯಬಹುದಿತ್ತು. ಸ್ವಂತದ ಹಡಗು , ವಿಮಾನಗಳಲ್ಲಿ ಪಿಕ್ ನಿಕ್ ಮಾಡಬಹುದಿತ್ತು.
ಆದರೆ ಅವರು ಮುಂಬಯಿಯ ಉದ್ದಗಲದ ಜನ ಸಾಮಾನ್ಯನೆಡೆಗೆ ಹೊರಳಿದರು.ಉಕ್ಕುವ ಯೌವನದ ದಿನಗಳಲ್ಲಿ ಐಶಾರಾಮದ ಬದುಕಿನ ಬದಲು ನಗರದ ಆಸ್ಪತ್ರೆ ಸಾರ್ವಜᅵನಿಕ ಕಚೇರಿಗಳ ಸ್ತಿತಿಗತಿಯನ್ನು ಅಧ್ಯಯನ ಮಾಡಿದರು.ಶಾಲೆ ಗಳ ಆವರಣ ಸುತ್ತಿದರು. ವೃದ್ದರನ್ನು ಅಶಕ್ತರನ್ನು ಕಂಡರು. ಇವರೆಲ್ಲರ ಆರೈಕೆಗಾಗಿಯಾದರೂ ತನ್ನ ಬಳಿ ಸಂಪತ್ತು ಬೇಕೆಂದು ಭಾವಿಸಿದರು. ಉದ್ಯಮದಲ್ಲಿ ಪರಿಶ್ರಮ ಬುದ್ದಿಮತ್ತೆ ಎರಡನ್ನೂ ಪ್ರಯೋಗಿಸಿ ಬೆಳೆದರು. ಜೊತೆಗೆ ತನ್ನ ಕನಸನ್ನೂ ಕೂಡ..!
ಕೆಲ ವರ್ಷಗಳ ಹಿಂದೆ ಲಿಮ್ಖಾ ಬುಕ್ ಅಫ್ ಗಿನ್ನೆಸ್ ರೆಕಾರ್ಡ್ಸ್ ಗೆ ಆಯ್ಕೆಯಾಗುವಾಗ ಈ ಮಹಾನುಭಾವನಿಗೆ . ಆ ಸಂಸ್ಥೆ ಕೊಟ್ಟ ಬಿರುದು ಭಾರತದ "ರಸ್ತೆ ಬದಿಯ ಅತಿಥೇಯ "! ಇನ್ನೊಂದು ಸಂಸ್ಥೆ ಪ್ರೀತಿಯಿಂದ ಕರೆದದ್ದು ಭಾರತದ " ಬೆಂಚ್ ಮ್ಯಾನ್" . ತಾನು ಆರ್ ಸಿ ಸಿ ಬೆಂಚು, ನೀರಮನೆಗಳಿಂದ ಹಿಡಿದು ದಾನ ಕೊಟ್ಟ ಎಲ್ಲ ಪರಿಕರಗಳನ್ನು ಆಗಾಗ ಗಮನಿಸಿ ತಾನೇ ರಿಪೇರಿ ಮಾಡುವುದು ಇಲ್ಲ ಹೊಸತನ್ನೇ ಅಲ್ಲಿ ಹಾಕಿ ಬಿಡುವುದು ಅವರ ಇನ್ನೊಂದು ವೈಖರಿ.
ಇಷ್ಟಕ್ಕೂ ಸರಾಫ್ ಅವರ ದುಡ್ಡೇನೂ ಮಠ ಮದಿರಗಳಿಗೆ ಬರುವಂತೆ ಭಕ್ತರ ಹರಿಕೆಯ ಹಣವೋ , ಸಂತರೆಂದು ಹೇಳಿಕೊಳ್ಳುವವರ ಪಾದಕ್ಕೆ ಬಿದ್ದ ಕಾಣಿಕೆಯೋ ಅಲ್ಲವಲ್ಲಾ... ನಮ್ಮ ನಿಮ್ಮಂತೇ ಬೆಳಗ್ಗೆ ಎದ್ದು ದುಡಿವ , ೭೬ ರ ಇಳಿ ಹರಯದಲ್ಲೂ ತಪ್ಪದೆ ಕಚೇರಿಗೆ ಹೋಗುವ , ದುಡಿಮೆಯ ಫಲ. ಅದಕ್ಕಾಗಿಯೇ , ಅವರ ಸೇವೆಯೂ ಅಷ್ಟೇ ,.. ನೇರವಾಗಿ ಜನತಾ ಜನಾರ್ಧನನಿಗೆ, ಮಧ್ಯೆ "ಮಧ್ಯವರ್ತಿ" ಗಳಿಲ್ಲ. .ಹಾಗಾಗಿಯೇ ಅವರು ಸಮಾಜದ ಕಟ್ಟಕಡೆಯ ಮನುಷ್ಯನ ಗೆಳೆಯ!!
ಬಡಬಗ್ಗರ ಸೇವೆಯಲ್ಲಿ ಒಂದು ಸರಕಾರಕ್ಕೆ ಪರ್ಯಾಯᅵ ಹೆಸರು ಮಹಾವೀರ್ ಸರಾಫ್ . ಆದರೆ ಅಲ್ಲಿ ಪ್ರಜೆಯ ದುಡ್ಡು ಪ್ರಜೆಗೆ ಇಲ್ಲಿ ವ್ಯಕ್ತಿಯ ಮನೆಯ ದುಡ್ಡು ಪ್ರಜೆಯ ಹಿತಕ್ಕೆ . ತನ್ನ ಮೂವರು ಗಂಡು ಮಕ್ಕಳನ್ನೂ ಈ "ಬಹುಜನ ಹಿತಾಯ ಸುಖಾಯ" ಕೆಲಸದಲ್ಲಿ ತೊಡಗಿಸಿರುವ ಸರಾಫ್ ಸದಾ ತೆರೆಯ ಮರೆಯಲ್ಲುಳಿಯ ಬಯಸುತ್ತಾರೆ. ಗಿನ್ನೆಸ್ ರೆಕಾರ್ಡ್ ವ್ಯವಸ್ಥಾಪಕರು ಬಹು ಒತ್ತಾಯ ಮಾಡಿದ ಬಳಿಕವಷ್ಟೇ ಅವರು ತನ್ನ ಪ್ರಸಿದ್ದ ತ್ರೀ ಸೀಟರ್ ಬೆಂಚಿನ ಮೇಲೆ ಕುಳಿತು ಛಾಯಾಚಿತ್ರಕ್ಕೆ ಅವಕಾಶ ನೀಡಿದರು. ಇಷ್ಟೆಲ್ಲ ಕೆಲಸದ ಬಗೆಗೆ ಕೇಳಿದರೆ ಅವರು ಹೇಳುವ ಮಾತೇನು ಗೊತ್ತಾ..."" ಕುಟುಂಬ ಬಹಳ ಕಷ್ಟದ ದಿನಗಳಲ್ಲಿದ್ದಾಗಲೂ ನನ್ನ ಅಮ್ಮ ನೆರಯ ಬಡ ಮಕ್ಕಳ ಶಾಲೆಯ ಫೀ ಕಟ್ಟುತ್ತಿದ್ದಳು..ನನಗವಳು ಏನೂ ಹೇಳಿಲ್ಲ...ಆದರೆ ನಾನವಳು ಹೇಳದೆಯೇ ಕಾಯಕವನ್ನು ಮುಂದುವರಿಸುತ್ತಿದ್ದೇನೆ, ಇನ್ನು ಜನರ ಕೃತಜ್ಞತೆಯ ಚಿಂತೆ ನನಗೇಕೆ....""
****
ಇನ್ನೆಂದಾದರೂ ರೈಲು ನಿಲ್ದಾಣದಲ್ಲೋ, ಪಾರ್ಕುಗಳಲ್ಲೋ ಆ ಕಂದು ಬಣ್ಣದ ಬೆಂಚಲ್ಲಿ ಕೂತಾಗ ಸರಾಫ್ ಟ್ರಸ್ಟ್ ನ ಹೆಸರು ಕಂಡಲ್ಲಿ , ಆಪ್ತವಾಗೊಮ್ಮೆ ಸವರಿ ಕೊಳ್ಳಿ.. ..ಬೆರಳ ತುದಿಗಂಟಿದ ಪ್ರೀತಿಯ ಹುಡಿಯನ್ನು ಎದೆಗೊತ್ತಿಕೊಳ್ಳಿ..
******
Sunday, January 31, 2010
ಬಿ ಎಂ ಎ೦ಬ ಬಹುಶ್ರುತ ...ಈಗ ಪದ್ಮ ಪುರಸ್ಕೃತ

ದೇಶ ಕಂಡ ಮಹಾನ್ ಚಿಂತಕ ನಾನೀ ಪಾಲ್ಖೀವಾಲ ಇವರನ್ನು , "ಹೃದಯವಂತ ಹೃದಯ ತಜ್ಞ" ಎಂದು ಕರೆದಿದ್ದರು ! ರಾಷ್ಟ್ರಪತಿ ಭವನದಲ್ಲಿ ಸಂತನಂತೇ ಬದುಕಿದ ಕನಸುಗಾರ , ಭಾರತ ರತ್ನ ಡಾ/ ಅಬ್ದುಲ್ ಕಲಾಂ ತಾವು ಹೋದಲ್ಲೆಲ್ಲ , ಇವರು ಜನತೆಯ ಆರೋಗ್ಯದ ಕುರಿತಾಗಿ ಬರೆದ ಕಿರು ಪುಸ್ತಿಕೆಗಳ ಬಗೆಗೆ ಹೇಳುತ್ತಿದ್ದರು. ಅಷ್ಟೇ ಅಲ್ಲ. . ."ಸಮಸ್ತ ಮಾನವ ಜನಾಂಗಕ್ಕೆ ನೋವಿಂದ ಮುಕ್ತಿ ಕೊಡಬೇಕೆಂಬ ನಿಮ್ಮ ಕಳಕಳಿಗೆ ಯಶ ದೊರೆಯಲೆಂದು' ಕಲಾಂ ಇವರನ್ನು ಹುರಿದುಂಬಿ ಸುತ್ತಿದ್ದರು .
ವಿದ್ಯಾರ್ಥಿಯಾಗಿ, ಪ್ರಾಧ್ಯಾಪಕನಾಗಿ, ಮೇರು ಉಪನ್ಯಾಸಕನಾಗಿ, ಶಿಕ್ಷ ಣ ತಜ್ಞನಾಗಿ, ಆರೋಗ್ಯದ ಸಲಹಾಕಾರನಾಗಿ, ತತ್ವವೇತ್ತನಾಗಿ....ದಕ್ಷಿಣ ಅಮೇರಿಕಾವೊಂದನ್ನು ಹೊರತು ಪಡಿಸಿ ಇವರು ಮೆಟ್ಟದ ಜಗತ್ತಿನ ದೇಶಗಳಿಲ್ಲ. ಸಂಸ್ಕೃತದಿಂದ ತೊಡಗಿ, ಸಾಕ್ರೆಟಿಸನ ವರೆಗೆ, ಆಯುರ್ವೇದದಿಂದಾರಂಭಿಸಿ ಆರ್ಯ ವೃತ್ತಾಂತದ ವರೆಗೆ , ಅಗಸ್ತ್ಯನಿಂದಾರಂಭಿಸಿ, ಅಗಸ್ಟಸ್ ಹಿಕ್ಕಿಯವರೆಗೆ ಇವರು ತಟ್ಟದ ಜ್ಞಾನದ ಶಾಖೆಗಳಿಲ್ಲ. ಅದು ಭಾಷಣವಿರಲಿ, ಲೇಖನವಿರಲಿ, ಇವರು ಮುಟ್ಟದ ಹೃದಯಗಳಿಲ್ಲ. ಮಾತಿಗೆ ನಿಂತರೆ ಮೂವತ್ತೇ ಜನರ ಪುಟ್ಟ ಗುಂಪಿರಲಿ, ಮೂರು ಸಾವಿರದ ಸಂದೋಹವಿರಲಿ, ಅಲಿಸಿದ ಜನ ಮಂತ್ರಮುಗ್ದ . ಮಾತು ಮುಗಿಸಿದ ಇವರ ಮುಖದೊಳಗೋ , ಇನ್ನ್ನಷ್ಟೇ ಮಾತು ಆರಂಭಿಸ ಹೊರಟ ಭಾವ -ಸ್ನಿಗ್ದ !
ಮನುಷ್ಯರ ಬಗೆಗೆ ಈತನಿಗೆ ತರ -ತಮಗಳಿಲ್ಲ. ಉಳ್ಳವನಿಗೊಂದು -ಇಲ್ಲದವನಿಗೊಂದು ಎಂಬ ಸರಿ -ಬೆಸಗಳಿಲ್ಲ. ಹರಿವ ಜಲದಂತೆ ಎಲ್ಲರೆದೆಯಲ್ಲಿ ಆವರಿಸಿಕೊಳ್ಳುವ ಜೀವದ್ರವ ಈ ' ಮನುಕುಕುಲ ಮಿತ್ರ ' . ಆಧುನಿಕ ವೈದ್ಯಪದ್ದತಿಯ ತವರೆಂಬ ಹೆಗ್ಗಳಿಕೆಯ ಬ್ರಿಟನ್ನಿಗೇ ವಿವಿಧ ನೆಲೆಗಳಲ್ಲಿ ವೈದ್ಯಕೀಯ ಕಲಿಸಿದ ಮೇಧಾವಿ. ಅದರೆ ತನ್ನ ಬಳಿ ರೋಗಿಯಾಗಿ ಬಂದವನಿಗಾದರೋ, ಮಲ್ಲಿಗೆ ನಗು ಬೀರಿ, ಅಣ್ಣ, ಅಕ್ಕ ಎಂಬ ಕಕ್ಕುಲಾತಿ ತೋರಿ, ನೋಟದಲ್ಲೇ ಅರ್ಧ ಕಾಯಿಲೆಯನ್ನೋಡಿಸಿ ಬಿಡುವ ಗೆಳೆಯ, ಸದಾ ನಿಗರ್ವಿ .
ಹುಟ್ಟಿದ್ದು ಜಿಲ್ಲೆಯಾಗುವುದಕ್ಕಿಂತ ಮುಂಚಿನ ಉಡುಪಿಯ ಬೆಳ್ಳೆಯಲ್ಲಿ(1938 ). ಬಾಲ್ಯ ಕಳೆದದ್ದು ಹೈಸ್ಕೂಲು ಕಲಿತದ್ದು ಹಿರಿಯಡ್ಕದಲ್ಲಿ , ಇಂಟರ್ ಮೀಡಿಯಟ್ ದಾಟಲು ದೊರೆತದ್ದು ಖ್ಯಾತಿವೆತ್ತ ಎಂಜಿಎಂ ಕಾಲೇಜು.ಎಂಬಿಬಿಎಸ್ ಮದ್ರಾಸಿನ ಸ್ಟೇನ್ಲಿ ಮೆಡಿಕಲ್ ಕಾಲೇಜು. ಎಂಡಿ ಮಾಡಿದ್ದು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿಂದ, ಮುಂದೆ ಬ್ರಿಟನ್, ಅಮೆರಿಕಾ ರಾಷ್ಟ್ರಗಳಲ್ಲಿ ಎಂ ಆರ್ ಸಿಪಿ, ಎಫ್ ಆರ್ ಸಿಪಿ, ಎಫ್ ಎ ಸಿಸಿ ಸೇರಿದಂತೆ ಹತ್ತಾರು ಉನ್ನತ ವೈದ್ಯಕೀಯ ಪದವಿ. ಉದ್ದಕ್ಕೆ ಬರೆಯ ಹೊರಟರೆ ಸಿಕ್ಕಿದ ಮಾನ , ಸನ್ಮಾನ ಪ್ರಶಸ್ತಿ -ಪುರಸ್ಕಾರಗಳ ಮಾತು ಬಿಡಿ, ದೇಶ ವಿದೇಶಗಳಲ್ಲಿ ಪಡೆದ ಪದವಿಗಳನ್ನು ನಮೂದಿಸ ಹೊರಟರೂ ಹೆಸರಿನ ಮುಂದೆ ಮತ್ತೆ ಮೂರು ಗೆರೆಗಳು ಬೇಕಾಗುತ್ತವೆ. ಹಾಗಾಗಿಯೇ ಏನೋ, ಬೆಳ್ಳೆ ಮೋನಪ್ಪ ಹೆಗ್ಡೆ ಎ೦ಬ ಉದ್ದ ಹೆಸರು ಬಿಎಂ ಹೆಗ್ಡೆ ಎಂದು ಹೃಸ್ವಗೊಂಡದ್ದು!!
ವೃತ್ತಿ ಆರಂಭಿಸಿದ್ದು ವೈದ್ಯನಾಗಿ. ಬೆಳೆದದ್ದು ಹೃದಯ ತಜ್ಞನಾಗಿ. ಖ್ಯಾತಿ ಪಡೆದದ್ದು ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕನಾಗಿ-ಪ್ರಾಚಾರ್ಯನಾಗಿ -ಕುಲಪತಿಯಾಗಿ. ಪ್ರಪಂಚವಾಸಿಯಾದದ್ದು ಚಿಂತಕನಾಗಿ -ಶಿಕ್ಷಣ ವೆತ್ತನಾಗಿ -ಮಹಾನ್ ವಾಗ್ಮಿಯಾಗಿ., , ಸಂಶೋಧಕನಾಗಿ, ಲೇಖಕನಾಗಿ, ರೋಗಿಯ ಮಾನವ್ಯ ಗೆಳೆಯನಾಗಿ !
ಸುಮಾರು ನಾಲ್ಕು ದಶಕಕ್ಕೂ ಮಿಕ್ಕಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಪ್ರಾದ್ಯಾಪಕನಾಗಿ ವಿವಿಧ ಹುದ್ದೆಗಳನ್ನೇರಿ, ಎಲ್ಲಕ್ಕೂ ಕಲಶವಿಟ್ಟಂತೆ ಮಣಿಪಾಲ ಡೀಮ್ಡ್ ವಿಶ್ವ ವಿದ್ಯಾಲಯದ ಉಪಕುಲಪತಿಯಾಗಿ ಖ್ಯಾತಿಪಡೆದ ಡಾ.ಬಿ ಎಂ ಹೆಗ್ಡೆ ರೋಗಿಗಳ ಎದೆಗೆ ಔಷಧಕ್ಕೂ ಮಿಕ್ಕಿದ ವಿಶ್ವಾಸ , ನಂಬಿಕೆಯ ಸ್ಪೂರ್ತಿಯನ್ನೆರೆದು ಅವರ ಜೀವಿತವನ್ನು ವಿಸ್ತರಿಸಿದವರು. ತನ್ನೊಳಗೆ ತಾನೇ ವೈರುದ್ಯವೆಂಬಂತೆ "ಔಷಧ ಕೇವಲ ಐವತ್ತು ಭಾಗ , ಇನ್ನರ್ಧ ವೈದ್ಯರ ಮೇಲಿನ ರೋಗಿಯ ನಂಬಿಕೆ " ಎಂಬ ಸತ್ಯವನ್ನು ಬಹಿರಂಗವಾಗಿಯೇ ಸಾರಿದವರು.
ಅವರೆಂದೂ ಮಲ್ಟಿನ್ಯಾಶನಲ್ ಕಂಪೆನಿಗಳು ತಮ್ಮ ಔಷದೋತ್ಪನ್ನಗ ಳ ಪ್ರಚಾರಕ್ಕಾಗಿ ಕೊಡಮಾಡುವ ಪುಕ್ಕಟೆ "ಜಂಕೆಟ್" ಗಳಲ್ಲಿ ಉಚಿತ ವಿದೇಶಯಾನ ಕೈಗೊಂಡವರಲ್ಲ. ಕಂಪೆನಿಗಳ ಉಚಿತ ಟಿಕೇಟುಗಳಲ್ಲಿ ಕುಟುಂಬ ಯಾತ್ರೆ ನಡೆಸಿದವರೂ ಅಲ್ಲ.ಹೋಗಲಿ ಎಂದರೆ ಅವರದೆನ್ನುವ ಒಂದು ಆಸ್ಪತ್ರೆಯನ್ನೂ ಹೊಂದಿದವರಲ್ಲ. ವೈದ್ಯ ವೃತ್ತಿಯ ವ್ಯಾಪಾರ ಅವರ ಜಾಯಮಾನಕ್ಕೆ ಹೊಂದುವಂತಾದ್ದೇ ಅಲ್ಲ! ವೈದ್ಯರಾಗಿದ್ದುಕೊಂಡೇ, ವೈದ್ಯಕೀಯದೊಳಗಿನ ರಾಜಕೀಯವನ್ನು, ವೈದ್ಯ ರು ವಿಜ್ಞಾನದ ಹೆಸರಲ್ಲಿ ಹರಡುವ "ಸುಳ್ಳು" ಗಳನ್ನು , ಔಷಧ ಗುಳಿಗೆಗಳೊಳಗಿನ "ಝಳ್ಳು" ಗಳನ್ನು ಮಾತಿನ ಚಾಟಿಯಿಂದ ಚಿವುಟಿದವರು.ಎಷ್ಟೋ ಬಾರಿ ವೈದ್ಯ ಸಮೂಹದ ಪ್ರೀತಿಗೇ ಎರವಾಗಿ ದೊರಕಬೇಕಿದ್ದ ನ್ಯಾಯಯುತ "ಸ್ಥಾನ"ಗಳಿಂದ ದೂರಾದವರು. ಆದರೆ ಜನಮಾನಸದ ಗದ್ದುಗೆಯಲ್ಲಿ ವಿರಾಜ"ಮಾನ"ರಾದವರು.
ಸಾರ್ವಜನಿಕ ಭಾಷಣ ಕಲೆಯಿಂದ ತೊಡಗಿ ಜನ ಸಾಮಾನ್ಯನ ಆರೋಗ್ಯದ ವರೆಗೆ 35 ಕ್ಕೂ ಹೆಚ್ಚು ಪ್ರಖರ ಅಧ್ಯಯನದ ಪಾಂಡಿತ್ಯಪೂರ್ಣ ಕೃತಿಗಳನ್ನು ಅವರು ಕನ್ನಡ -ಇಂಗ್ಲೀಷ್ ಭಾಷೆಗಳಲ್ಲಿ ಬರೆದಿದ್ದಾರೆ. ಪಂಡಿತನಾದವನು ಪಾಮರನಿಗಾಗಿಯೂ ಬರೆಯ ಬೇಕಾಗುತ್ತದೆಂಬ ನುಡಿಯಂತೆ ಎಲ್ಲ ವರ್ಗದ ಜನತೆಯೂ ವೈದ್ಯಕೀಯದಂತಹ ಗಹನ ವಿಷಯವನ್ನೂ ಅರ್ಥೈಸಿಕೊಳ್ಳಬಳ್ಳಂತಾ ಸರಳತೆ ಈ ಎಲ್ಲ ಕೃತಿಗಳ ಜೀವಾಳ.
ಹಾಗೆ ನೋಡಿದರೆ , ಬಿ ಎಂ ಹೆಗ್ಡೆಯವರನ್ನು , ಖ್ಯಾತ ವೈದ್ಯರೆಂದೋ, ಹೃದಯ ತಜ್ಞರೆಂದೋ ಅಥವಾ ಖ್ಯಾತಿವೆತ್ತ ಪ್ರಾಧ್ಯಾಪಕರೆಂದೋ, ಹೇಳಿಬಿಟ್ಟಲ್ಲಿ ಅದು ಹತ್ತರಲ್ಲೊಂದು ಮುಖವೂ ಅಗುವುದಿಲ್ಲ. ಕೊಂಕಣಿಯಿಂದ ತೊಡಗಿ ಕನ್ನಡದಲ್ಲಿ ವಿಸ್ತರಿಸಬಲ್ಲ, ತುಳುವಿನಿಂದಾರಂಭಿಸಿ ತಮಿಳಿನಲ್ಲಿ ಮುಗಿಸಬಲ್ಲ, ಇಂಗ್ಲಿಷಿನಲ್ಲಿ ನೆನಪಿಸಿ , ಹಿಂದಿಯಲ್ಲಿ ಬೆಳೆಸಬಲ್ಲ, ಮಲಯಾಳಂನಲ್ಲಿ ಉತ್ತರಿಸಿ, ತೆಲುಗಿನಲ್ಲಿ ಅರ್ಥೈಸಿಕೊಳ್ಳಬಳ್ಳ, ಎಳ್ಳಷ್ಟೂ ಲೋಪವಿಲ್ಲದೆ ಸಂಸ್ಕೃತದ ತತ್ವಮಸಿಗಳನ್ನುದ್ದರಿಸಬಲ್ಲ, ಹೀಗೆ, ಎಂಟಕ್ಕೂ ಹೆಚ್ಚು ಭಾಷೆಗಳಲ್ಲಿ ನಿರಾಯಾಸವಾಗಿ , ಪಾಂಡಿತ್ಯರ್ಪೂವಾಗಿ ವ್ಯವಹರಿಸ ಬಲ್ಲ, ಬಿ ಎಂ ಹೆಗ್ಡೆ, ಭಾಷೆ, ಸಂಸ್ಕೃತಿಗಳ ಸಾಮರಸ್ಯದ ಐಸಿರಿ. ತಾನು ಬಲ್ಲ ಬಹು ಸಂಸ್ಕೃತಿಗಳ ಜೀವಾಳಕ್ಕೆ ತಾನೇ "ಪ್ರತಿಮೆ" ಯಾಗಿ ನಿಲ್ಲಬಲ್ಲ ನಿಜದ ಮಾದರಿ.
ಕನ್ನಡ ಭಾಷೆಗಾದರೂ ಅಷ್ಟೇ, ಓರ್ವ ಕವಿ, ಸಾಹಿತಿಗಿನ್ತಲೂ ಹೆಚ್ಚಾಗಿ, ಕನ್ನಡಿಗನಿರುವೆಡೆಯಲ್ಲೆಲ್ಲಾ ಹೋಗಿ, ವೈಚಾರಿಕ , ಆದರೆ, ಸರಳ ವಾಗ್ವೈಕರಿಯಿಂದ ನುಡಿಯಲ್ಲೇ ನಾಡು ಕಟ್ಟಿದವರು, ಡಾ. ಬಿ ಎಂ. ಮುಂಬಯಿ ಯಂತಹಾ ಕನ್ನಡಿಗರ ಇನ್ನೊಂದು ನಾಡಿಗೆ ಅವರ ಭೇಟಿ, ಮಾತು, ಸಂವಾದ ಅದೆಷ್ಟು ಬಾರಿಯೋ, ..ಬಂದಷ್ಟೂ ಬಾರಿ ಜನತೆಯ ಎದೆ ಕವಾಟದೊಳಗೇ ಪ್ರೀತಿ ಬಿತ್ತಿ ಬಿಡುವುದು ಅವರ ಮಾತಿನ ವೈಖರಿ- - ನುಡಿಸಿರಿಯ ಐಸಿರಿ !
ಎಪ್ಪತ್ತೆರಡರ ವಯಸ್ಸಿನಲ್ಲೂ ಪ್ರಪಂಚದಾದ್ಯಂತ ಹತ್ತ್ತಾರು ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶನ ಪ್ರಾದ್ಯಾಪಕರಾಗಿ , ಮೌಲ್ಯ ಮಾಪಕರಾಗಿ, ಬೋಧಕರಾಗಿ ಅವಿಶ್ರಾಂತ ದುಡಿವ , ಗರಿಷ್ಟ ಪ್ರಮಾಣದ ಆರೋಗ್ಯ ಸಮಸ್ಯೆಯುಳ್ಳ ಬಿಹಾರ ರಾಜ್ಯಕ್ಕೆ ಸಾರ್ವಜನಿಕ ಆರೋಗ್ಯ ಇಲಾಖೆಯ ಮುಖ್ಯ ಸಲಹಾಕಾರರಾಗಿ ದುಡಿಯುವ ಹೆಗ್ಗಳಿಕೆ ಡಾ ಹೆಗ್ಗಡೆಯವರದ್ದು. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರೇಟ್ ಟೀಚರ್ ಪ್ರಶಸ್ತಿ , ಡಾ ಬಿಸಿ ರಾಯ್ ಅವಾರ್ಡ್ ಫಾರ ಎಮಿನೆಂಟ್ ಮೆಡಿಕಲ್ ಟೀಚರ್, ಡಿಸ್ಟಿಂಗ್ವಿಶ್ಡ್ ಫಿಶೀಸಿಯನ್ ಆಫ್ ಇಂಡಿಯಾ ಪ್ರಶಸ್ತಿ, ಗುಜರಾತಿನ ಗಾಂ-ಧಿ ಫಂಡೇಶನ್ ಪ್ರಶಸ್ತಿ, ತಮಿಳ್ನಾಡಿನ ಬೆಸ್ಟ್ ಒರೇಶನ್ ಪ್ರಶಸ್ತಿ, ಕುವೈಟ್ ವಿವಿಯ ಪ್ರಶಸ್ತಿ, ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ, ...ಎಷ್ಟೊಂದು ಪ್ರಶಸ್ತಿ ಪುರಸ್ಕಾರಗಳು ...ಇದೀಗ ಪದ್ಮ ಭೂಷಣ!
ಹತ್ತೊಂಭತ್ತನೆಯ ಶತಮಾನದಿಂದೀಚಿನ ಅವಿಭಜಿತ ದಕ್ಷಿ ಕನ್ನಡ ಜಿಲ್ಲೆ, ಕನ್ನಡ ನಾಡಿಗೆ , ಆ ಮೂಲಕ ಇಡಿಯ ದೇಶಕ್ಕೆ ಕೊಟ್ಟ ಎರಡು ಅಮೂಲ್ಯ ಪ್ರತಿಭೆಗಳಲ್ಲಿ ಒಂದು ಕಾರಂತನೆಂಬ ಬೆಟ್ಟವಾದರೆ , ಇನ್ನೊಂದು ಬಿಎಂ ಹೆಗ್ಡೆ ಎಂಬ ಮನುಷ್ಯ ರತ್ನ.
ಹೌದಾ, ಅವ್ರಿಗೆ ಆ ಪ್ರಶಸ್ತಿ ಬಂತಾ, ಅವರೇನು ಮಾಡುತ್ತಿದ್ದಾರೆ ...ಅವರ ಕ್ಷೇತ್ರ - ಕೊಡುಗೆ ಏನು...? ಅಥವಾ ಯಾವ ಪಕ್ಷದ ಒಲವಿನವರು...ಯಾವ ಕಂಪೆನಿಯ ಮಾಲಕರು...? ಇದು,ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರಶಸ್ತಿಗಳು ಪ್ರಕಟಗೊಂಡಾಗ , ಅವುಗಳಿಗೆ ಪಾತ್ರರಾಗುವ ವ್ಯಕ್ತಿಗಳ ಬಗೆಗೆ ನಮ್ಮಲ್ಲಿ ಮೂಡುವ ಪ್ರಶ್ನೆಗಳಿವು. ಎಷ್ಟೋ ಬಾರಿ ಇವು ನಮ್ಮ ಆತಂಕವೆಂದರೂ ಸರಿಯೇ! ಆದರೆ ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳು ನೀಡುವ ಅತ್ಯುಚ್ಚ ಪ್ರಶಸ್ತಿಗಳಲ್ಲೊಂದಾದ ಪದ್ಮ ಭೂಷ ಈ ಬಾರಿ "ಇವ ನಮ್ಮವ , ಇವ ನಮ್ಮವ ' ನೆಂದು ಹೆಮ್ಮೆಯಿಂದ ನಾವೆಲ್ಲ ಹೇಳಬಲ್ಲ, ಕೊಂಡಾಡಬಲ್ಲ ವ್ಯಕ್ತಿಯ ಮುಡಿಗೇರಿ ತನ್ನ ತಾನೇ ಸಿಂಗರಿಸಿಕೊಂಡಿದೆ.
***
ದಿನಗಳ ಹಿಂದೆ ಅವರ ಇ - ಮೇಲಿಗೊಂದು ಸಂದೇಶ ಕಳುಹಿಸಿದ್ದೆ .. "ನಮ್ಮೆಲ್ಲರ ಅಭಿಮಾನದ ನಿಮಗೆ ಕೊನೆಗೂ ರಾಷ್ಟ್ರೀಯ ಪ್ರಶಸ್ತಿಯ ಸಿರಿ ಬಂತಲ್ಲಾ..ದಿಲ್ಲಿಯಲೂ ಮಲ್ಲಿಗೆಯಾದ ಜೀವವೇ ನಿಮಗೆ ನೂರೊಂದು ಸಲಾಮು ...ಮರು ತಾಸಿನಲ್ಲೇ ಅವರ ಉತ್ತರದ ಮುಲಾಮು..."ನನ್ನ ನೆಚ್ಚಿನ ದಯಾ, ಪ್ರಶಸ್ತಿಯ ಮಾತಂತಿರಲಿ , ಇದರಿಂದ ಖುಷಿಪಟ್ಟ ನಿನ್ನಂತವರಿಗೆ ನನ್ನ ಲಕ್ಷ ಸಲಾಮು.... ' ಇದು ಬಿ.ಎಂ!
***
ರೋಗಿಗಳ ನಂಬಿಕೆಯ, ವಿದ್ಯಾರ್ಥಿ ಸಮೂಹದ -- ಚಿಂತಕ ಸಂದೋಹದ ನೆಚ್ಚಿನ , ಪ್ರೀತಿ , ಸಜ್ಜನಿಕೆಯಲ್ಲಿ ವಿಶ್ವಾಸವಿಟ್ಟ ಮನುಷ್ಯರೆಲ್ಲ ರ ಮೆಚ್ಜ್ಚಿನ , ಡಾ. ಬಿ.ಎಂ, ನಮ್ಮ ನಡುವಿರುವ ಅಪರೂಪದ ಬಹುಶ್ರುತ - ಬಹು ಮಾನಿತ !!
Friday, December 18, 2009
ನಿನ್ನೆಗಳಲ್ಲಿ ನಿ೦ತ ಅವರು ನಮ್ಮ ನಾಳೆಗಳನ್ನು ಸಿ೦ಗರಿಸಿದರು ...
jahttp://www.udayavani.com/epaper/PDFList.aspx?Pg=H&Edn=MB&DispDate=12/14/2009
Tuesday, December 1, 2009
ಎ೦ತಾ ಹದವಿತ್ತೇ ಬಾಲ್ಯಕೆ ...
http://www.udayavani.com/showstory.asp?news=1&contentid=692735&lang=2
ಕೈ ಜಾರಿದರೂ ..ಕಾಲಕ್ಕೆ ಸೇರಿದರೂ ಕಳೆದು ಹೋಗದು ಬಾಲ್ಯ ಮಿದುಳು ಮಲಗುವ ತನಕ ..!
http://www.udayavani.com/epaper/PDFList.aspx?Pg=H&Edn=MB&DispDate=11/30/2009