Sunday, January 31, 2010

ಬಿ ಎಂ ಎ೦ಬ ಬಹುಶ್ರುತ ...ಈಗ ಪದ್ಮ ಪುರಸ್ಕೃತ


ದೇಶ ಕಂಡ ಮಹಾನ್ ಚಿಂತಕ ನಾನೀ ಪಾಲ್ಖೀವಾಲ ಇವರನ್ನು , "ಹೃದಯವಂತ ಹೃದಯ ತಜ್ಞ" ಎಂದು ಕರೆದಿದ್ದರು ! ರಾಷ್ಟ್ರಪತಿ ಭವನದಲ್ಲಿ ಸಂತನಂತೇ ಬದುಕಿದ ಕನಸುಗಾರ , ಭಾರತ ರತ್ನ ಡಾ/ ಅಬ್ದುಲ್ ಕಲಾಂ ತಾವು ಹೋದಲ್ಲೆಲ್ಲ , ಇವರು ಜನತೆಯ ಆರೋಗ್ಯದ ಕುರಿತಾಗಿ ಬರೆದ ಕಿರು ಪುಸ್ತಿಕೆಗಳ ಬಗೆಗೆ ಹೇಳುತ್ತಿದ್ದರು. ಅಷ್ಟೇ ಅಲ್ಲ. . ."ಸಮಸ್ತ ಮಾನವ ಜನಾಂಗಕ್ಕೆ ನೋವಿಂದ ಮುಕ್ತಿ ಕೊಡಬೇಕೆಂಬ ನಿಮ್ಮ ಕಳಕಳಿಗೆ ಯಶ ದೊರೆಯಲೆಂದು' ಕಲಾಂ ಇವರನ್ನು ಹುರಿದುಂಬಿ ಸುತ್ತಿದ್ದರು .

ವಿದ್ಯಾರ್ಥಿಯಾಗಿ, ಪ್ರಾಧ್ಯಾಪಕನಾಗಿ, ಮೇರು ಉಪನ್ಯಾಸಕನಾಗಿ, ಶಿಕ್ಷ ಣ ತಜ್ಞನಾಗಿ, ಆರೋಗ್ಯದ ಸಲಹಾಕಾರನಾಗಿ, ತತ್ವವೇತ್ತನಾಗಿ....ದಕ್ಷಿಣ ಅಮೇರಿಕಾವೊಂದನ್ನು ಹೊರತು ಪಡಿಸಿ ಇವರು ಮೆಟ್ಟದ ಜಗತ್ತಿನ ದೇಶಗಳಿಲ್ಲ. ಸಂಸ್ಕೃತದಿಂದ ತೊಡಗಿ, ಸಾಕ್ರೆಟಿಸನ ವರೆಗೆ, ಆಯುರ್ವೇದದಿಂದಾರಂಭಿಸಿ ಆರ್ಯ ವೃತ್ತಾಂತದ ವರೆಗೆ , ಅಗಸ್ತ್ಯನಿಂದಾರಂಭಿಸಿ, ಅಗಸ್ಟಸ್ ಹಿಕ್ಕಿಯವರೆಗೆ ಇವರು ತಟ್ಟದ ಜ್ಞಾನದ ಶಾಖೆಗಳಿಲ್ಲ. ಅದು ಭಾಷಣವಿರಲಿ, ಲೇಖನವಿರಲಿ, ಇವರು ಮುಟ್ಟದ ಹೃದಯಗಳಿಲ್ಲ. ಮಾತಿಗೆ ನಿಂತರೆ ಮೂವತ್ತೇ ಜನರ ಪುಟ್ಟ ಗುಂಪಿರಲಿ, ಮೂರು ಸಾವಿರದ ಸಂದೋಹವಿರಲಿ, ಅಲಿಸಿದ ಜನ ಮಂತ್ರಮುಗ್ದ . ಮಾತು ಮುಗಿಸಿದ ಇವರ ಮುಖದೊಳಗೋ , ಇನ್ನ್ನಷ್ಟೇ ಮಾತು ಆರಂಭಿಸ ಹೊರಟ ಭಾವ -ಸ್ನಿಗ್ದ !

ಮನುಷ್ಯರ ಬಗೆಗೆ ಈತನಿಗೆ ತರ -ತಮಗಳಿಲ್ಲ. ಉಳ್ಳವನಿಗೊಂದು -ಇಲ್ಲದವನಿಗೊಂದು ಎಂಬ ಸರಿ -ಬೆಸಗಳಿಲ್ಲ. ಹರಿವ ಜಲದಂತೆ ಎಲ್ಲರೆದೆಯಲ್ಲಿ ಆವರಿಸಿಕೊಳ್ಳುವ ಜೀವದ್ರವ ಈ ' ಮನುಕುಕುಲ ಮಿತ್ರ ' . ಆಧುನಿಕ ವೈದ್ಯಪದ್ದತಿಯ ತವರೆಂಬ ಹೆಗ್ಗಳಿಕೆಯ ಬ್ರಿಟನ್ನಿಗೇ ವಿವಿಧ ನೆಲೆಗಳಲ್ಲಿ ವೈದ್ಯಕೀಯ ಕಲಿಸಿದ ಮೇಧಾವಿ. ಅದರೆ ತನ್ನ ಬಳಿ ರೋಗಿಯಾಗಿ ಬಂದವನಿಗಾದರೋ, ಮಲ್ಲಿಗೆ ನಗು ಬೀರಿ, ಅಣ್ಣ, ಅಕ್ಕ ಎಂಬ ಕಕ್ಕುಲಾತಿ ತೋರಿ, ನೋಟದಲ್ಲೇ ಅರ್ಧ ಕಾಯಿಲೆಯನ್ನೋಡಿಸಿ ಬಿಡುವ ಗೆಳೆಯ, ಸದಾ ನಿಗರ್ವಿ .

ಹುಟ್ಟಿದ್ದು ಜಿಲ್ಲೆಯಾಗುವುದಕ್ಕಿಂತ ಮುಂಚಿನ ಉಡುಪಿಯ ಬೆಳ್ಳೆಯಲ್ಲಿ(1938 ). ಬಾಲ್ಯ ಕಳೆದದ್ದು ಹೈಸ್ಕೂಲು ಕಲಿತದ್ದು ಹಿರಿಯಡ್ಕದಲ್ಲಿ , ಇಂಟರ್ ಮೀಡಿಯಟ್ ದಾಟಲು ದೊರೆತದ್ದು ಖ್ಯಾತಿವೆತ್ತ ಎಂಜಿಎಂ ಕಾಲೇಜು.ಎಂಬಿಬಿಎಸ್ ಮದ್ರಾಸಿನ ಸ್ಟೇನ್ಲಿ ಮೆಡಿಕಲ್ ಕಾಲೇಜು. ಎಂಡಿ ಮಾಡಿದ್ದು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿಂದ, ಮುಂದೆ ಬ್ರಿಟನ್, ಅಮೆರಿಕಾ ರಾಷ್ಟ್ರಗಳಲ್ಲಿ ಎಂ ಆರ್ ಸಿಪಿ, ಎಫ್ ಆರ್ ಸಿಪಿ, ಎಫ್ ಎ ಸಿಸಿ ಸೇರಿದಂತೆ ಹತ್ತಾರು ಉನ್ನತ ವೈದ್ಯಕೀಯ ಪದವಿ. ಉದ್ದಕ್ಕೆ ಬರೆಯ ಹೊರಟರೆ ಸಿಕ್ಕಿದ ಮಾನ , ಸನ್ಮಾನ ಪ್ರಶಸ್ತಿ -ಪುರಸ್ಕಾರಗಳ ಮಾತು ಬಿಡಿ, ದೇಶ ವಿದೇಶಗಳಲ್ಲಿ ಪಡೆದ ಪದವಿಗಳನ್ನು ನಮೂದಿಸ ಹೊರಟರೂ ಹೆಸರಿನ ಮುಂದೆ ಮತ್ತೆ ಮೂರು ಗೆರೆಗಳು ಬೇಕಾಗುತ್ತವೆ. ಹಾಗಾಗಿಯೇ ಏನೋ, ಬೆಳ್ಳೆ ಮೋನಪ್ಪ ಹೆಗ್ಡೆ ಎ೦ಬ ಉದ್ದ ಹೆಸರು ಬಿಎಂ ಹೆಗ್ಡೆ ಎಂದು ಹೃಸ್ವಗೊಂಡದ್ದು!!

ವೃತ್ತಿ ಆರಂಭಿಸಿದ್ದು ವೈದ್ಯನಾಗಿ. ಬೆಳೆದದ್ದು ಹೃದಯ ತಜ್ಞನಾಗಿ. ಖ್ಯಾತಿ ಪಡೆದದ್ದು ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕನಾಗಿ-ಪ್ರಾಚಾರ್ಯನಾಗಿ -ಕುಲಪತಿಯಾಗಿ. ಪ್ರಪಂಚವಾಸಿಯಾದದ್ದು ಚಿಂತಕನಾಗಿ -ಶಿಕ್ಷಣ ವೆತ್ತನಾಗಿ -ಮಹಾನ್ ವಾಗ್ಮಿಯಾಗಿ., , ಸಂಶೋಧಕನಾಗಿ, ಲೇಖಕನಾಗಿ, ರೋಗಿಯ ಮಾನವ್ಯ ಗೆಳೆಯನಾಗಿ !

ಸುಮಾರು ನಾಲ್ಕು ದಶಕಕ್ಕೂ ಮಿಕ್ಕಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಪ್ರಾದ್ಯಾಪಕನಾಗಿ ವಿವಿಧ ಹುದ್ದೆಗಳನ್ನೇರಿ, ಎಲ್ಲಕ್ಕೂ ಕಲಶವಿಟ್ಟಂತೆ ಮಣಿಪಾಲ ಡೀಮ್ಡ್ ವಿಶ್ವ ವಿದ್ಯಾಲಯದ ಉಪಕುಲಪತಿಯಾಗಿ ಖ್ಯಾತಿಪಡೆದ ಡಾ.ಬಿ ಎಂ ಹೆಗ್ಡೆ ರೋಗಿಗಳ ಎದೆಗೆ ಔಷಧಕ್ಕೂ ಮಿಕ್ಕಿದ ವಿಶ್ವಾಸ , ನಂಬಿಕೆಯ ಸ್ಪೂರ್ತಿಯನ್ನೆರೆದು ಅವರ ಜೀವಿತವನ್ನು ವಿಸ್ತರಿಸಿದವರು. ತನ್ನೊಳಗೆ ತಾನೇ ವೈರುದ್ಯವೆಂಬಂತೆ "ಔಷಧ ಕೇವಲ ಐವತ್ತು ಭಾಗ , ಇನ್ನರ್ಧ ವೈದ್ಯರ ಮೇಲಿನ ರೋಗಿಯ ನಂಬಿಕೆ " ಎಂಬ ಸತ್ಯವನ್ನು ಬಹಿರಂಗವಾಗಿಯೇ ಸಾರಿದವರು.

ಅವರೆಂದೂ ಮಲ್ಟಿನ್ಯಾಶನಲ್ ಕಂಪೆನಿಗಳು ತಮ್ಮ ಔಷದೋತ್ಪನ್ನಗ ಳ ಪ್ರಚಾರಕ್ಕಾಗಿ ಕೊಡಮಾಡುವ ಪುಕ್ಕಟೆ "ಜಂಕೆಟ್" ಗಳಲ್ಲಿ ಉಚಿತ ವಿದೇಶಯಾನ ಕೈಗೊಂಡವರಲ್ಲ. ಕಂಪೆನಿಗಳ ಉಚಿತ ಟಿಕೇಟುಗಳಲ್ಲಿ ಕುಟುಂಬ ಯಾತ್ರೆ ನಡೆಸಿದವರೂ ಅಲ್ಲ.ಹೋಗಲಿ ಎಂದರೆ ಅವರದೆನ್ನುವ ಒಂದು ಆಸ್ಪತ್ರೆಯನ್ನೂ ಹೊಂದಿದವರಲ್ಲ. ವೈದ್ಯ ವೃತ್ತಿಯ ವ್ಯಾಪಾರ ಅವರ ಜಾಯಮಾನಕ್ಕೆ ಹೊಂದುವಂತಾದ್ದೇ ಅಲ್ಲ! ವೈದ್ಯರಾಗಿದ್ದುಕೊಂಡೇ, ವೈದ್ಯಕೀಯದೊಳಗಿನ ರಾಜಕೀಯವನ್ನು, ವೈದ್ಯ ರು ವಿಜ್ಞಾನದ ಹೆಸರಲ್ಲಿ ಹರಡುವ "ಸುಳ್ಳು" ಗಳನ್ನು , ಔಷಧ ಗುಳಿಗೆಗಳೊಳಗಿನ "ಝಳ್ಳು" ಗಳನ್ನು ಮಾತಿನ ಚಾಟಿಯಿಂದ ಚಿವುಟಿದವರು.ಎಷ್ಟೋ ಬಾರಿ ವೈದ್ಯ ಸಮೂಹದ ಪ್ರೀತಿಗೇ ಎರವಾಗಿ ದೊರಕಬೇಕಿದ್ದ ನ್ಯಾಯಯುತ "ಸ್ಥಾನ"ಗಳಿಂದ ದೂರಾದವರು. ಆದರೆ ಜನಮಾನಸದ ಗದ್ದುಗೆಯಲ್ಲಿ ವಿರಾಜ"ಮಾನ"ರಾದವರು.

ಸಾರ್ವಜನಿಕ ಭಾಷಣ ಕಲೆಯಿಂದ ತೊಡಗಿ ಜನ ಸಾಮಾನ್ಯನ ಆರೋಗ್ಯದ ವರೆಗೆ 35 ಕ್ಕೂ ಹೆಚ್ಚು ಪ್ರಖರ ಅಧ್ಯಯನದ ಪಾಂಡಿತ್ಯಪೂರ್ಣ ಕೃತಿಗಳನ್ನು ಅವರು ಕನ್ನಡ -ಇಂಗ್ಲೀಷ್ ಭಾಷೆಗಳಲ್ಲಿ ಬರೆದಿದ್ದಾರೆ. ಪಂಡಿತನಾದವನು ಪಾಮರನಿಗಾಗಿಯೂ ಬರೆಯ ಬೇಕಾಗುತ್ತದೆಂಬ ನುಡಿಯಂತೆ ಎಲ್ಲ ವರ್ಗದ ಜನತೆಯೂ ವೈದ್ಯಕೀಯದಂತಹ ಗಹನ ವಿಷಯವನ್ನೂ ಅರ್ಥೈಸಿಕೊಳ್ಳಬಳ್ಳಂತಾ ಸರಳತೆ ಈ ಎಲ್ಲ ಕೃತಿಗಳ ಜೀವಾಳ.

ಹಾಗೆ ನೋಡಿದರೆ , ಬಿ ಎಂ ಹೆಗ್ಡೆಯವರನ್ನು , ಖ್ಯಾತ ವೈದ್ಯರೆಂದೋ, ಹೃದಯ ತಜ್ಞರೆಂದೋ ಅಥವಾ ಖ್ಯಾತಿವೆತ್ತ ಪ್ರಾಧ್ಯಾಪಕರೆಂದೋ, ಹೇಳಿಬಿಟ್ಟಲ್ಲಿ ಅದು ಹತ್ತರಲ್ಲೊಂದು ಮುಖವೂ ಅಗುವುದಿಲ್ಲ. ಕೊಂಕಣಿಯಿಂದ ತೊಡಗಿ ಕನ್ನಡದಲ್ಲಿ ವಿಸ್ತರಿಸಬಲ್ಲ, ತುಳುವಿನಿಂದಾರಂಭಿಸಿ ತಮಿಳಿನಲ್ಲಿ ಮುಗಿಸಬಲ್ಲ, ಇಂಗ್ಲಿಷಿನಲ್ಲಿ ನೆನಪಿಸಿ , ಹಿಂದಿಯಲ್ಲಿ ಬೆಳೆಸಬಲ್ಲ, ಮಲಯಾಳಂನಲ್ಲಿ ಉತ್ತರಿಸಿ, ತೆಲುಗಿನಲ್ಲಿ ಅರ್ಥೈಸಿಕೊಳ್ಳಬಳ್ಳ, ಎಳ್ಳಷ್ಟೂ ಲೋಪವಿಲ್ಲದೆ ಸಂಸ್ಕೃತದ ತತ್ವಮಸಿಗಳನ್ನುದ್ದರಿಸಬಲ್ಲ, ಹೀಗೆ, ಎಂಟಕ್ಕೂ ಹೆಚ್ಚು ಭಾಷೆಗಳಲ್ಲಿ ನಿರಾಯಾಸವಾಗಿ , ಪಾಂಡಿತ್ಯರ್ಪೂವಾಗಿ ವ್ಯವಹರಿಸ ಬಲ್ಲ, ಬಿ ಎಂ ಹೆಗ್ಡೆ, ಭಾಷೆ, ಸಂಸ್ಕೃತಿಗಳ ಸಾಮರಸ್ಯದ ಐಸಿರಿ. ತಾನು ಬಲ್ಲ ಬಹು ಸಂಸ್ಕೃತಿಗಳ ಜೀವಾಳಕ್ಕೆ ತಾನೇ "ಪ್ರತಿಮೆ" ಯಾಗಿ ನಿಲ್ಲಬಲ್ಲ ನಿಜದ ಮಾದರಿ.

ಕನ್ನಡ ಭಾಷೆಗಾದರೂ ಅಷ್ಟೇ, ಓರ್ವ ಕವಿ, ಸಾಹಿತಿಗಿನ್ತಲೂ ಹೆಚ್ಚಾಗಿ, ಕನ್ನಡಿಗನಿರುವೆಡೆಯಲ್ಲೆಲ್ಲಾ ಹೋಗಿ, ವೈಚಾರಿಕ , ಆದರೆ, ಸರಳ ವಾಗ್ವೈಕರಿಯಿಂದ ನುಡಿಯಲ್ಲೇ ನಾಡು ಕಟ್ಟಿದವರು, ಡಾ. ಬಿ ಎಂ. ಮುಂಬಯಿ ಯಂತಹಾ ಕನ್ನಡಿಗರ ಇನ್ನೊಂದು ನಾಡಿಗೆ ಅವರ ಭೇಟಿ, ಮಾತು, ಸಂವಾದ ಅದೆಷ್ಟು ಬಾರಿಯೋ, ..ಬಂದಷ್ಟೂ ಬಾರಿ ಜನತೆಯ ಎದೆ ಕವಾಟದೊಳಗೇ ಪ್ರೀತಿ ಬಿತ್ತಿ ಬಿಡುವುದು ಅವರ ಮಾತಿನ ವೈಖರಿ- - ನುಡಿಸಿರಿಯ ಐಸಿರಿ !

ಎಪ್ಪತ್ತೆರಡರ ವಯಸ್ಸಿನಲ್ಲೂ ಪ್ರಪಂಚದಾದ್ಯಂತ ಹತ್ತ್ತಾರು ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶನ ಪ್ರಾದ್ಯಾಪಕರಾಗಿ , ಮೌಲ್ಯ ಮಾಪಕರಾಗಿ, ಬೋಧಕರಾಗಿ ಅವಿಶ್ರಾಂತ ದುಡಿವ , ಗರಿಷ್ಟ ಪ್ರಮಾಣದ ಆರೋಗ್ಯ ಸಮಸ್ಯೆಯುಳ್ಳ ಬಿಹಾರ ರಾಜ್ಯಕ್ಕೆ ಸಾರ್ವಜನಿಕ ಆರೋಗ್ಯ ಇಲಾಖೆಯ ಮುಖ್ಯ ಸಲಹಾಕಾರರಾಗಿ ದುಡಿಯುವ ಹೆಗ್ಗಳಿಕೆ ಡಾ ಹೆಗ್ಗಡೆಯವರದ್ದು. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರೇಟ್ ಟೀಚರ್ ಪ್ರಶಸ್ತಿ , ಡಾ ಬಿಸಿ ರಾಯ್ ಅವಾರ್ಡ್ ಫಾರ ಎಮಿನೆಂಟ್ ಮೆಡಿಕಲ್ ಟೀಚರ್, ಡಿಸ್ಟಿಂಗ್ವಿಶ್ಡ್ ಫಿಶೀಸಿಯನ್ ಆಫ್ ಇಂಡಿಯಾ ಪ್ರಶಸ್ತಿ, ಗುಜರಾತಿನ ಗಾಂ-ಧಿ ಫಂಡೇಶನ್ ಪ್ರಶಸ್ತಿ, ತಮಿಳ್ನಾಡಿನ ಬೆಸ್ಟ್ ಒರೇಶನ್ ಪ್ರಶಸ್ತಿ, ಕುವೈಟ್ ವಿವಿಯ ಪ್ರಶಸ್ತಿ, ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ, ...ಎಷ್ಟೊಂದು ಪ್ರಶಸ್ತಿ ಪುರಸ್ಕಾರಗಳು ...ಇದೀಗ ಪದ್ಮ ಭೂಷಣ!

ಹತ್ತೊಂಭತ್ತನೆಯ ಶತಮಾನದಿಂದೀಚಿನ ಅವಿಭಜಿತ ದಕ್ಷಿ ಕನ್ನಡ ಜಿಲ್ಲೆ, ಕನ್ನಡ ನಾಡಿಗೆ , ಆ ಮೂಲಕ ಇಡಿಯ ದೇಶಕ್ಕೆ ಕೊಟ್ಟ ಎರಡು ಅಮೂಲ್ಯ ಪ್ರತಿಭೆಗಳಲ್ಲಿ ಒಂದು ಕಾರಂತನೆಂಬ ಬೆಟ್ಟವಾದರೆ , ಇನ್ನೊಂದು ಬಿಎಂ ಹೆಗ್ಡೆ ಎಂಬ ಮನುಷ್ಯ ರತ್ನ.

ಹೌದಾ, ಅವ್ರಿಗೆ ಆ ಪ್ರಶಸ್ತಿ ಬಂತಾ, ಅವರೇನು ಮಾಡುತ್ತಿದ್ದಾರೆ ...ಅವರ ಕ್ಷೇತ್ರ - ಕೊಡುಗೆ ಏನು...? ಅಥವಾ ಯಾವ ಪಕ್ಷದ ಒಲವಿನವರು...ಯಾವ ಕಂಪೆನಿಯ ಮಾಲಕರು...? ಇದು,ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರಶಸ್ತಿಗಳು ಪ್ರಕಟಗೊಂಡಾಗ , ಅವುಗಳಿಗೆ ಪಾತ್ರರಾಗುವ ವ್ಯಕ್ತಿಗಳ ಬಗೆಗೆ ನಮ್ಮಲ್ಲಿ ಮೂಡುವ ಪ್ರಶ್ನೆಗಳಿವು. ಎಷ್ಟೋ ಬಾರಿ ಇವು ನಮ್ಮ ಆತಂಕವೆಂದರೂ ಸರಿಯೇ! ಆದರೆ ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳು ನೀಡುವ ಅತ್ಯುಚ್ಚ ಪ್ರಶಸ್ತಿಗಳಲ್ಲೊಂದಾದ ಪದ್ಮ ಭೂಷ ಈ ಬಾರಿ "ಇವ ನಮ್ಮವ , ಇವ ನಮ್ಮವ ' ನೆಂದು ಹೆಮ್ಮೆಯಿಂದ ನಾವೆಲ್ಲ ಹೇಳಬಲ್ಲ, ಕೊಂಡಾಡಬಲ್ಲ ವ್ಯಕ್ತಿಯ ಮುಡಿಗೇರಿ ತನ್ನ ತಾನೇ ಸಿಂಗರಿಸಿಕೊಂಡಿದೆ.

***

ದಿನಗಳ ಹಿಂದೆ ಅವರ ಇ - ಮೇಲಿಗೊಂದು ಸಂದೇಶ ಕಳುಹಿಸಿದ್ದೆ .. "ನಮ್ಮೆಲ್ಲರ ಅಭಿಮಾನದ ನಿಮಗೆ ಕೊನೆಗೂ ರಾಷ್ಟ್ರೀಯ ಪ್ರಶಸ್ತಿಯ ಸಿರಿ ಬಂತಲ್ಲಾ..ದಿಲ್ಲಿಯಲೂ ಮಲ್ಲಿಗೆಯಾದ ಜೀವವೇ ನಿಮಗೆ ನೂರೊಂದು ಸಲಾಮು ...ಮರು ತಾಸಿನಲ್ಲೇ ಅವರ ಉತ್ತರದ ಮುಲಾಮು..."ನನ್ನ ನೆಚ್ಚಿನ ದಯಾ, ಪ್ರಶಸ್ತಿಯ ಮಾತಂತಿರಲಿ , ಇದರಿಂದ ಖುಷಿಪಟ್ಟ ನಿನ್ನಂತವರಿಗೆ ನನ್ನ ಲಕ್ಷ ಸಲಾಮು.... ' ಇದು ಬಿ.ಎಂ!

***

ರೋಗಿಗಳ ನಂಬಿಕೆಯ, ವಿದ್ಯಾರ್ಥಿ ಸಮೂಹದ -- ಚಿಂತಕ ಸಂದೋಹದ ನೆಚ್ಚಿನ , ಪ್ರೀತಿ , ಸಜ್ಜನಿಕೆಯಲ್ಲಿ ವಿಶ್ವಾಸವಿಟ್ಟ ಮನುಷ್ಯರೆಲ್ಲ ರ ಮೆಚ್ಜ್ಚಿನ , ಡಾ. ಬಿ.ಎಂ, ನಮ್ಮ ನಡುವಿರುವ ಅಪರೂಪದ ಬಹುಶ್ರುತ - ಬಹು ಮಾನಿತ !!