Tuesday, March 30, 2010

ಸಂತನೆಂಬವನೊಬ್ಬ , ಸಂತತ್ವದಿಂದಾದನೇ...

"ಯಾಕೋ ಗೊತ್ತಿಲ್ಲ, ನನಗೆ ಸಂತರ -ಸ್ವಾಮಿಗಳ ಮೇಲಿನ ನಂಬಿಕೆ -ವಿಶ್ವಾಸವೇ ಕಳೆದು ಹೋಯಿತು, ಭಾರತದಲ್ಲಿ ಇನ್ಯಾರೂ ಸಂತರ ಮೇಲೆ ವಿಶ್ವಾಸವಿಡಲಾರರು... ' ಗೆಳೆಯನೊಬ್ಬ ಹಲುಬುತ್ತಲೇ ಇದ್ದ. ಅವನ ಮಾತು ಹುಟ್ಟಿದ ಹಿನ್ನಲೆ, ವಿಶ್ವಾಸ ನಷ್ಟದ ಕಾರಣ ಗೊತ್ತಿತ್ತು...
***
ಸಂತತ್ವವದೇನು..? ಸಂತ ನೆಂಬವನಾರು ... ಕಾಮ ಕ್ರೋಧ ಗಳ ಗೆಲುವುದೆಂದರೇನು?... ಅವುಗಳನ್ನು ನಮ್ಮ 'ನಿಯಂತ್ರಣ'ದೊಳಿರಿಸುವುದು..ಹಾಗಂದರೇನು ..?


ಇನ್ನು,..ದೇಹದೊಳಗೇ ದೇಹವಾಗಿ ಹೋಗಿರುವ ಅವುಗಳನ್ನಷ್ಜ್ಟೇ 'ಇಲ್ಲ'ವಾಗಿಸುವಾಗ ಉಳಿದ 'ಭಾವ ' ಗಳೆಲ್ಲ ತಮ್ಮ ಯಥಾಗುಣದಲ್ಲೇ ಉಳಿದು ಮುಂದುವರಿಯುವವೇ...? ಇಷ್ಟಕ್ಕೂ ನಮ್ಮ 'ವೈರಿ'ಗಳೆಂದು ಪರಿಗಣಿಸಿದ ಯಾವುದೇ ಆದರೂ 'ನಮ್ಮನ್ನು ಬಿಟ್ಟು ಹೋದ್ದದ್ದು' ಇದೆಯೇ? ವೈರವಿದ್ದಷ್ಜ್ಟೂ ದಿನ ಅವು ನಮ್ಮೊಳಗೆ , ನಮ್ಮ ಅಣು ಅಣುವಿನೊಳಗೆ ಹಾಸು -ಹೊಕ್ಕು!
ಬಾಹ್ಯ ಲೋಕಕ್ಕೆ , 'ನಾನು ದೀಕ್ಷೆ ಪಡೆದೆ...ಮುಂದೆ ಸ್ವಾಮಿಯಾಗಿರುವೆ.. ' ಎಂಬಿತ್ಯಾದಿ ಹೇಳಿಕೆ, ಪ್ರಕಟಣೆಯಷ್ಟೇ -ದೇಹದ 'ಒಳಗಣ ಪ್ರಕೃತಿ' ಯೊಳಗೂ ಬದಲಾವಣೆಗಳ ತರುವುದೇ ? ಅಥವಾ ಸಂತತ್ವ- ಸ್ವಾಮಿತ್ವದ ಘೋಷಣೆಯೊಂದಿಗೆ 'ಸಂತನೆಂದುಕೊಂಡವನು' ತಾನು ಅಂತಾ 'ಒಳಗಣ ಪ್ರಕೃತಿ'ಯ ಮೀರಿದೆನೆಂದುಕೊಳ್ಳುವುದೇ?

ಹೀಗೆ, ಮೀರಿ ನಿಂತ ಹಂತದೊಳಗೂ ಮತ್ತೆ ಲೌಕಿಕದೊಳಗಣ ವ್ಯಾಪಾರದೊಳಗಿಣುಕುವ 'ಕಿಂಡಿ' ಯನ್ನೊಂದು ಮಾತ್ರ ತೆರೆದು ಇರಿಸಿಕೊಳ್ಳಲು ಸಾಧ್ಯವಾಗುತ್ತದೆಯೇ, ಸ್ವಾಮಿಗೆ , ಸಂತನಿಗೆ ?ಹೋಗಲಿ, ಇದ್ಯಾವುದೂ ಅಲ್ಲ, ಅಲೌಖಿಕವನ್ನು ಅರಗಿಸಿಕೊಳ್ಳುವುದು, ಪಾರಮಾರ್ಥದ 'ಜಿಜ್ಞಾಸು'ವಾಗಿ ಅಧ್ಯಾತ್ಮವನ್ನು ಉಸಿರಾಡುವುದು ....ಸಂತತ್ವವೇ ?ಹಾಗೊಮ್ಮೆ ಅದರೂ, ಜನರ ನಡುವೆ, ಸಂಸಾರದೊಳಿದ್ದೂ , ಇದನ್ನೆಲ್ಲಾ ಮಾಡುವ ಜೀವಗಳಿಲ್ಲವೇ...?

ಹೊರಗಿನ ಸಂತತ್ವದಿಂದೇನು ..ನಮ್ಮ ನಮ್ಮೊಳಗಿನ ಸಂತನ ಕಾಣುವ ಮನವಾದರೆ...

ಒಂದೊಮ್ಮೆ , ನೌಕರಿ ಮಾಡುತ್ತಿದ್ದ ಕಂಪೆನಿಯಲ್ಲಿ ಸಹೋದ್ಯೋಗಿಯೊಬ್ಬಳು, ನಿತ್ಯ ಮನೆಯಿಂದ ಎರಡು ಬುತ್ತಿ ಕಟ್ಟಿ ತರುತ್ತಿದ್ದಳು...ಒಂದು ಅವಳಿಗೇ, ಮಧ್ಯಾಹ್ನದ ಊಟಕ್ಕೆ. ಇನ್ನೊಂದು ಕೆಲಸ ಹಿಡಿಯಲು ತಾನು ಹೋಗುವ ರೈಲು ನಿಲ್ದಾಣದ ಮೂಲೆಯಲಿ ಕಣ್ಣಿಲ್ಲದೆ , ಕುಟುಂಬ ಸಂಸಾರದಿಂದ ಪರಿತ್ಯಕ್ತಳಾಗಿ ಬಿದ್ದ ವೃದ್ದೆಗೆ....

. . . ಅಚ್ಚರಿ ಎಂದರೆ , ಅವಳಿಗೂ ಒಬ್ಬ ಸಂಗಾತಿ.ಅದೆಷ್ಟೋ ಸಂಜೆಗಳಲ್ಲಿ ಅವರಿಬ್ಬರೂ ಜೊತೆಯಾಗಿ, ಅದೇ ರೈಲು ನಿಲ್ದಾಣದ ಬೆಂಚಿನ ಮೇಲೆ ಮಾತಿನ ಮಂಟಪ ಕಟ್ಟಿ ಜಗದ ಪರಿವೆ ಇಲ್ಲದೆ ಹಗುರಾದದ್ದನ್ನು ಕಂಡು ' ಇದೇ ನೋಡು ಬದುಕಿನ ಮಾಯೆ' ಎಂದು ಒಳ ಮನಸ್ಸು ಹೇಳುತ್ತಿತ್ತು.! ಅವಳಿಗಾಗಿಯೂ ತರುವ ಬುತ್ತಿ, ಮತ್ತು ಆ ಒಬ್ಬ ಸಂಗಾತಿ, ಆಕೆ ನನ್ನ -ನಿಮ್ಮಂತೇ , ಹಸಿವು - ನೀರಡಿಕೆ ಇರುವ, ದೇಹ ಸಹಜ ಬಯಕೆಗಳ ಗೆಲ್ಲಲಾರದ, ಅಥವಾ ಗೆಲ್ಲಬೇಕೆಂಬ ಹಟವಿಲ್ಲದ (ಯಾಕಾಗಿ ಗೆಲ್ಲಬೇಕು?) ಮನುಷ್ಯ ಮಾತ್ರಳು.. ಎಂಬುದನ್ನು ತಿಳಿಸುತಿತ್ತು. . ಹೀಗೆ ಇದು ಬಹುಕಾಲ ನಡೆಯುತ್ತಿತ್ತು...ವೃದ್ದೆ ತೀರಿಕೊಂಡಾದ ಬಳಿಕ ಆಕೆಗೆ ಇನ್ಯಾರೋ ಅಶಕ್ತ ಜೀವ ಕಂಡಿತು.. ತನ್ನೊಳಗಿನ 'ಸಂತ' ನ ಕಾಯಕ ಮುಂದುವರಿಸಲು.... ಆದರೆ ತನ್ನಂತೆ ದುಡಿಯಲಾಗದ ಅಶಕ್ತೆಗಾಗಿ ಕಟ್ಟಿ ತರುತ್ತಿದ್ದ ಬುತ್ತಿ ಆಕೆಯೊಳಗಿನ ಶುದ್ದ 'ಜೀವ ಪ್ರೇಮ' ವಲ್ಲದೆ , ಸಂತತ್ವವಲ್ಲದೆ ಮತ್ತೇನು ?

ನೆನೆದಾಗಲೆಲ್ಲ ನನ್ನ ಕಣ್ಣ ಪಾಪೆಯೊಳಗೆ ನೀರು ತರಿಸುವ, ಪಾನಿ ವಾಲ ರಾಜೂಭಾಯಿ ಇವತ್ತಿಗೂ ಮುಂಬಯಿ ಲೋಕಲ್ ರೈಲಿನ ತನ್ನ ನಿತ್ಯ ಯಾನದ ನಡುವೆ ಐವತ್ತಕ್ಕೂ ಹೆಚ್ಚು ಲೀಟರ್ ನೀರು ಹೊತ್ತು ಸಾಗುತ್ತಿದ್ದಾನೆ...ಅರುವತ್ತು ದಾಟಿ ಸಾಗಿದ ವಯಸ್ಸಿನಲ್ಲಿ ಬೋಗಿಯಿಂದ ಬೋಗಿಗೆ ದಾಟುತ್ತಾ ಮುಖದ ತುಂಬ ಮಲ್ಲಿಗೆ ನಗು ಬೀರುತ್ತಾ ಬಸವಳಿದ ಪಯಣಿಕರ ಬಳಿ ಸಾಗಿ ನೀರ ಬಾಟಲು ನೀಡಿ ಮನದ ಬೇಗೆಯ, ದೇಹದ ಧಗೆಯ ಕ್ಷಣ ಹೊತ್ತಿಗಾದರೂ ಮರೆವಂತೆ ಮಾಡುವ ಈತನ ಸಂತನೆನ್ನಲು ನನಗೆ ಹಿಂಜರಿಕೆಯೇ ...?
***
ವಾತ್ಸಲ್ಯ ಧಾರೆಯ ಸುರಿಸಿ ಬೆಳೆಸಿ, ದುಡಿದು ಬೆವರಿಳಿಸಿ ಪೊರೆದ ಅವ್ವ, ಕೈ - ಕಾಲು ಮಾತು ಕೇಳುವ ತನಕವೂ ದುಡಿದು ಸಜ್ಜನಿಕೆಯಿಂದ ಬಾಳಿ, ತಾನು ಬದುಕಿದ ರೀತಿಯಲ್ಲೇ ನೀತಿಯ 'ಪಠ್ಯ' ವಾಗುವ ಒಬ್ಬ ಅಪ್ಪ , ಯಾವ ಆಧುನಿಕ ತರಬೇತಿಗಳ ನೆರವಿಲ್ಲದೆಯೂ ಬರೆವ 'ಕೈ' , ಆಡುವ 'ಬಾಯಿ' ಗೆ ಚೈತನ್ಯ ಬರುವಂತಾ ರೀತಿಯಲಿ 'ಆ ಆ , ಈ .. ' ಕಲಿಸಿ ನಿವೃತ್ತನಾದೊಬ್ಬ ಅಧ್ಯಾಪಕ , ...ಇವರಷ್ಟೇ ಸಾಕು, ಸದಾ ನನ್ನೊಳಗಿನ 'ಸಂತ' ನ ಜಾಗೃತಿ ಯಲ್ಲಿಡಲು ...ಹೊರಗಿನ ನೂರು ಸಾವಿರ ಸ್ವಾಮಿಗಳ ಹಂಗೇಕೆ...?
ಸುರಿವ ಬಡತನದಿಂದ , ಕಲಿವ ವಯಸ್ಸು ಮೀರಿದ ಮಗನ ಕೈ ಹಿಡಿದು ಬಂದ ಬಡಪಾಯಿ ಅಪ್ಪನಿಗಾಗಿ 'ನಿಯಮಗಳಲ್ಲೇನೋ ಹೊಂದಾಣಿಕೆ ಮಾಡಿ' ಶಾಲೆ ಕಲಿಯಲವಕಾಶ ಮಾಡಿಕೊಟ್ಟ ಒಬ್ಬ ಅಧ್ಯಾಪಕನ ಕರುಣೆಯ ಕಣ್ಣುಗಳಲ್ಲೊಂದು ಸ೦ತತ್ವವಿಲ್ಲವೇ ...ಅದ ಕಾಣುವ ಕಣ್ಣು ಬೇಕು...!


ನನ್ನೊಳಗೆ ನಾನು ಕಾಣಲಾಗದ ಸಂತನನ್ನು ಇನ್ಯಾರೋ 'ಸಂತನೆಂದವನಲ್ಲಿ' ಕಾಣಹೊರಟ ಕಾರಣ,. . ನಾನು ಇತರರಿಗೆ ತೋರಲಾಗದ ವಿವೇಕವ ಅವನಿಂದ ತೋರಿಸ ಹೊರಟ ಕಾರಣ,. . ನಾನು ಬದುಕಲಾಗದ ರೀತಿಯ ಬದುಕ ಅವನಿಂದ ಕಾಣಿಸ ಹೊರಟ ಕಾರಣ ... ನನ್ನ ದುಡಿಮೆಯ ಫಲದೊಳಗೆ 'ಇಲ್ಲ ' ದವರಿಗೊಂದಂಶ ನೀಡಲಾಗದ ಕಾರಣವೇ . . , ಈ ತುಮುಲ , ಈ ತಲ್ಲಣ..!


ನನ್ನ ಸಂತ ಕಾವಿಯೊಳಗಿಲ್ಲ ..ನನ್ನ ಸಂತ ನೀಳ ಜಟೆಯೊಳಗೆ ಅವಿತಿಲ್ಲ, ನನ್ನ ಸಂತ, ಬಿಟ್ಟ ನಿಡು ದಾಡಿಯೊಳಗಿಲ್ಲ, ನನ್ನ ಸಂತನಿಗೆ ಅಶ್ರಮದ ಹಂಗಿಲ್ಲ, ನನ್ನ ಸಂತನಿಗೆ ಬ್ರಹ್ಮ ಚರ್ಯದ ಕಟ್ಟುಪಾಡುಗಳಿಲ್ಲ ...ನನ್ನ ಸಂತನಿಗೆ, ಕೈ - ಕಾಲುಗಳ ಅಕರಾಳ ವಿಕರಾಳ ತಿರುಗಿಸಿ, ಪಾದದ ನೀರ ಕುಡಿಸಿ, ನಾನು ಇಂತಾ ದೇವರು ಎಂದು 'ಅಪ್ಪಣಿಸಿ' ಆಶೀರ್ವಚನದ ಭಂಗಿಯಲಿ ನಿಲ್ಲುವ ಕಷ್ಟಗಳಿಲ್ಲ ..ನನ್ನ ಸಂತನಿಗೆ, ' ಹಣವಲ್ಲವೇ ಮನುಷ್ಯನ ಶತ್ರು ' ಎನ್ನುತ್ತಲೇ , ಮುಂದಿನ ಭೇಟಿಗೆ ' ನಿಮ್ಮಿಂದ ಬರಬಹುದಾದ ನಿಧಿ ಎಷ್ಟು ' ಎಂದು ಪರೋಕ್ಷವಾಗಿ ಕಾ೦ಚಾಣ ಸ೦ಗ್ರಹಿಸಲು ಸೂಚಿಸುವ ಅಗತ್ಯಗಳಿಲ್ಲ.

ಕಲಿತ ಶಾಲೆಗೊಂದು ಹಿಡಿ ಪುಸ್ತಕವ ದಾನವನಿತ್ತ ಘಳಿಗೆ, ಬೈಕು ಕೊಳ್ಳಲೆಂದು ಸಂಗ್ರಹಿಸಿದ ಹಣದಲ್ಲಿ ಒಂದಿಷ್ಟು ಭಾಗವನ್ನು , ಪತ್ರಿಕೆಯಲ್ಲಿ ಪ್ರಕಟವಾದ ಕ್ಯಾನ್ಸರ್ ಪೀಡಿತ ಮಗುವಿನ ಬಡ ತಾಯಿಯೊಬ್ಬಳ ಕೈಗಿತ್ತ ಘಳಿಗೆ .. , ನಾಷ್ಟಾ ಮಾಡುವ ಹೊಟೇಲಲ್ಲಿ ನಿತ್ಯ ತಿಂಡಿ ಸಪ್ಲಯಿ ಮಾಡುವ ವೈಟರ್ ಹುಡುಗನ ಬಾಡಿದ ಮುಖ ನೋಡಿ, ಅವನ ತಂಗಿಯ ಮದುವೆಗೆಂದು ಒಂದಿಷ್ಟು ಮೊತ್ತ ವನ್ನಿತ್ತ ಹೊತ್ತು, .. ಓಡುವ ಬಸ್ಸಿ೦ದ ಬಿದ್ದ ಅಪರಿಚಿತ ವ್ಯಕ್ತಿಯನ್ನು ಸಾಗಿಸಲು ಸ್ಟ್ರೆಚರ್ ಬರುವ ತನಕ ಆಫೀಸಿನ ತುರ್ತು ಮರೆತು, ರಕ್ತ ಒಸರುವ ಕೈಗೆ ನಿಮ್ಮ ಟವೆಲು ಕಟ್ಟಿದ ಆ ಕ್ಷಣ..., ಸುತರಾಂ ಅರ್ಥವೇ ಆಗದಿದ್ದ 'ಲೆಕ್ಕ' ವನ್ನು ಮೆತ್ತಿ , ಒತ್ತಿ ತಲೆಗೆ ಹತ್ತಿಸಿದ ಆ ಹೈಸ್ಕೂಲು ಅಧ್ಯಾಪಕರನ್ನು , ಅವರ ಎಂಭತ್ತರ ಇಳಿಜಾರಲ್ಲಿ ಕಂಡು ಕಾಲಿಗೆರಗಿ 'ಸಾರ್.. ' ಎಂದು ಕಣ್ಣು ಮಂಜಾಗಿಸಿಕೊಂಡ ಆ ಸಂಜೆ .., ನಿಮ್ಮೊಳಗೊಬ್ಬ ಸಂತನಿದ್ದ.

ಆಗಾಗ ಈ ಸಂತನ ಇರವನ್ನು ನೆನಪಿಸಿಕೊಳ್ಳಿ, ಅವ ಮರೆಯಾಗದಂತೆ ನೋಡಿಕೊಳ್ಳಿ, ಅಷ್ಟು ಸಾಕು!
***
ಈಗ , ಹಲುಬುವ ನನ್ನ ಗೆಳೆಯನಿಗೆ ಹೇಳಬೇಕು ....


ನನ್ನ ದೇವರು, ಇದ್ದರೆ , ನಾ ಹುಟ್ಟುವ ಮೊದಲೇ ಇದ್ದ.. ನಾನಿದ್ದಾಗಲೂ, ನಾನಿಲ್ಲದಿರುವಾಗಲೂ ಇರುವ...ಮಧ್ಯೆ ನನ್ನ -ಅವನ ನಡುವೆ 'ಇನ್ನೊಬ್ಬನ' ನೇಮಿಸುವ ಜರೂರು ನನಗಿಲ್ಲ. ...ಹಾಗಾಗಿಯೇ, ಮತ್ತು ಹಾಗಾಗಿಯೇ ಎಲ್ಲೋ, ನಿತ್ಯಾನಂದನೆಂಬವನೊಬ್ಬ ಕಾಮಾನಂದನಾದಾಗ ನನ್ನ 'ದೇವರ ಜಗತ್ತು ' ಬಿದ್ದು ಹೋಗಿಲ್ಲ..ಯಾಕಂದರೆ , ನನ್ನ ದೇವರು ಅವನ ಹೆಗಲ ಮೇಲಿರಲಿಲ್ಲ.....!!
***


ಮುಂಬಯಿ ಕನ್ನಡಕ್ಕೆ ಹೆಮ್ಮೆ ತ೦ದ ಹುಡುಗ...

" ಳನೇ ಕ್ಲಾಸನ್ನು ಒಳ್ಳೆಯ ಅಂಕ ತೆಗೆದು ಪಾಸಾಗಬೇಕು...ಈ ವರ್ಷ ನಿನಗೆ ಹೊಸ ಸೈಕಲ್ ಕೊಡಿಸುವೆ...ಹತ್ತನೆಯ ತರಗತಿಯಲ್ಲಿ ತೆಗೆವ ಮಾರ್ಕು, ಪಡೆವ ದರ್ಜೆ ಬಹಳ ಮುಖ್ಯ ಮಗೂ..ಮುಂದೆ ನಿನಗೆ ಒಳ್ಳೆಯ ವಿಭಾಗಕ್ಕೆ ಸೇರಿ ವಿದ್ಯಾಭ್ಯಾಸ ಮುಂದುವರಿಸಬಹುದು..'ದೊಡ್ಡ ಜಾಬ್'ಸಿಕ್ಕಿ , ಬಹಳ ದೊಡ್ಡ ಮನುಷ್ಯನಾಗಬಹುದು...ಅಮ್ಮ ನ 'ಕೊಂಡಾಟ' ದ ಮುಂಗೈ ಬೆಣ್ಣೆ ...
ಪಿ .ಯೂ.ಸಿ ಅಂದರೆ ನಿನ್ನ ಜೀವನದ ಗುರಿ ನಿರ್ಧರಿಸುವ ಹಂತ...ಕ್ಲಾಸಲ್ಲಿ ಎರಡು ಅಥವಾ ಮೂರನೇ ಗ್ರೇಡಿಗಾದರೂ ಏರ ಬೇಕು..ಈ ಸಮ್ಮರ್ ನಲ್ಲಿ ಕ್ರಿಕೆಟ್ ಟೂರ್ನಿ, ಸ್ವಿಮ್ಮಿಂಗ್ ಕ್ಯಾಂಪ್ ಬೇಡ..ಮುಂದೆ ಎಲ್ಲಕ್ಕೂ ಸಮಯ ಬರುತ್ತದೆ.. ಸಣ್ಣಗೆ ಅಪ್ಪನ ಗದರಿಕೆ...
ಒಳ್ಳೆಯ ಕಾಲೇಜೊಂದರಲ್ಲಿ ಇಂಜಿಯನಿರಿಂಗ್ ಪ್ರವೇಶ ದೊರೆತ ಖುಷಿಯನ್ನು ಹಂಚಿಕೊಂಡರೆ... ' ಮುಂದಿನ ನಾಲ್ಕು ವರ್ಷ ಬಹಳ ಮಹತ್ವದ್ದು...ಕಾಲೇಜಿನ ಆ ಸಂಘ , ಈ ಕ್ಲಬ್ ಅಂತಾ ಎಲ್ಲಾ ಹಚ್ಚಿಕೊಳ್ಳೋದು ಬೇಡ.... ' ಅಣ್ಣನ ಹಿತವಚನ...
ಒಮ್ಮೆ ಕಾಲೇಜು ಮುಗಿದು, ಕ್ಯಾಂಪಸ್ ಸೆಲೆಕ್ಷನ್ ನಲ್ಲೋ, ಅಪ್ಲಿಕೇಶನ್ ಹಾಕಿಯೋ ಒಳ್ಳೆಯ ಕಂಪನಿ ಕೈ ಹಿಡಿದರೆ , ...ಮತ್ತೆ , ಬೆನ್ನ ಹಿಂದಿಂದ ಅಪ್ಪನ ಮಾತು...ಸಂಬಳ ಜೋಪಾನ...ಹೊಸ ಜೀನ್ಸು , ಸಿನಿಮಾ ಟಿಕೇಟು ಅಂತಾ ಪೋಲು ಮಾಡೋದು ಬೇಡ..ನಿನ್ನದೇ ಒಂದು ಮನೆ ಅಂತಾ ಆದರೆ...
ಮುಂದೆ, ಮದುವೆ , ಮಕ್ಕಳು... !

ಹೀಗೆ ,ಅದೇ ಚಕ್ರ..ಅದೇ ತಾಳ ..ಅದೇ ಆಟ.ಪಾತ್ರಧಾರಿಗಳಷ್ಟೇ ಬದಲು...! ಇಲ್ಲಿ ಮಕ್ಕಳೋ ಅಂ ಕದ ಹುಂಜಗಳು.. ಇನ್ನು , ಹೆತ್ತವರು, " ಅಗೋ, ಕಾಣಿಸ್ತಿದೆಯಲ್ಲಾ...ಅದೇ ಫಿನಿಶಿಂಗ್ ಲೈನ್ ...ಗೆಲುವಿನ ಗೆರೆ...ಅದಕ್ಕೆ ಕಾಲಿಟ್ಟು ಬಿಡು..ಮುಟ್ಟಿಬಿಡು..''ಎಂದು ಅವರ ಹುರಿದುಂಬಿಸುವವರು... ಸ್ಪರ್ಧೆಗೆ ಬಿಟ್ಟ ಹುಂಜಗಳ ಗೆಲುವಿನ ವಾರಸುದಾರರು. ಟ್ಯೂಷನ್ ಕ್ಲಾಸುಗಳಿರಬಹುದು, ಬರಿದೇ , ಪರೀಕ್ಷೆಗೆ ಬರುವ ಪ್ರಶ್ನೆಗಳನ್ನಷ್ಟೇ ಉರು ಹೊಡೆಸಿ ಕಲಿಸುವ 'ಸ್ಪೆಶಲ್ ಟ್ಯೂಟರ್ ' ಗಳ ನೇಮಕವಿರಬಹುದು.. ಇಲ್ಲಿ, ಗೆಲುವೊಂದೇ ಮಂತ್ರ, ಅದಕ್ಕಾಗಿಯೇ ಎಲ್ಲ ತಂತ್ರ. !
***
ಈ ಹುಡುಗನನ್ನು ಕಂಡದ್ದು , ಮುಂಬೈ ಮಹಾನಗರದಲ್ಲಿ ಮನೆ ಮಾತಾಗಿರುವ , ಎಳೆಯ ಮಕ್ಕಳ ಪ್ರತಿಭಾ ಚೈತನ್ಯವನ್ನೂ ಅರಳಿಸ ಹೊರಟ ಮಕ್ಕಳ ಸಂಸ್ಥೆ , "ಚಿಣ್ಣರ ಬಿಂಬ' ದ ಶಿಬಿರದ ಕಾರ್ಯಕ್ರಮವೊಂದರಲ್ಲಿ. ಹದಿನಾರರ ಪ್ರಾಯದ ಆತ ವೇದಿಕೆಯಲ್ಲಿ ಹಾಡುತ್ತಿದ್ದ , ತಾಳಬದ್ದವಾದ , ಶಾಸ್ತ್ರೀಯ ನೃತ್ಯ ದ ಹೆಜ್ಜೆಗಳನ್ನಿಡುತ್ತಿದ್ದ.ಅದೇ ಉಸಿರಿನಲ್ಲಿ, "ವೆಸ್ಟರ್ನ್' ಡ್ಯಾನ್ಸ್ ಕೂಡಾ ಮಾಡಬಲ್ಲವನಾಗಿದ್ದ. ಕನ್ನಡದ ಸುಮಧುರ ಭಾವಗೀತೆಗಳನ್ನು ರಾಗ -ತಾಳ -ಭಾವಕ್ಕೆ ಭಂಗವುಂಟಾಗದಂತೆ ಹಾಡುತ್ತಿದ್ದ .. ಹಿಂದಿ ಸಿನಿಮಾಗಳ ಹಳೆಯ ಹಾಡು , ಈ ಹುಡುಗನ ಕಂಠದಲ್ಲಿ ಹುಡುಗುತನವನ್ನು ಮೀರಿಯೇ ಜೀವ ತಳೆಯುತ್ತಿದ್ದರೆ, ಶಾಸ್ತ್ರೀಯ ಭರತನಾಟ್ಯಕ್ಕೆ , ಕಲಿಸಿದ ಗುರುಗಳೇ ಭಾವುಕರಾಗಿ ಬಿಡುತ್ತಿದ್ದರು. ಭರತನಾಟ್ಯ, ನಾಟಕ , ಕ್ವಿಜ್, ಡ್ರಾಯಿಂಗ್, ಹಾಡುಗಾರಿಕೆ , ಕೋರಿಯೋ ಗ್ರಾಫಿ, ನಿರ್ದೇಶನ , ಕೊನೆಗೆ ಪ್ಯಾಶನ್ ...ಹೀಗೆ, ಹುಡುಗ ಮಹಾರಾಷ್ಟ್ರವಲ್ಲದೆ, ಅಂಧ್ರಪ್ರದೇಶ, ತಮಿಳ್ನಾಡು ಅಂತ, ರಾಜ್ಯ -ಅಂತಾರಾಜ್ಯ ಪ್ರಶಸ್ತಿ ಪುರಸ್ಕಾರಗಳನ್ನು ತರುತ್ತಲೇ ಇದ್ದ. ಈತ ಕಲಿವ ಶಾಲೆ -ಕಾಲೇಜು ಗಳ ಅಧ್ಯಾಪಕರೇ,ಈ ಹುಡುಗನ ಜೊತೆ ಮಾತಾಡಲು, ಒಂದಷ್ಟು ಹೊತ್ತು ಕಳೆಯಲು ಸ್ಪರ್ಧೆಗೆ ಬಿದ್ದದ್ದುಂಟು. ಮುಂಬಯಿಯಲ್ಲಿ, ನಾಟಕ ಸಂಸ್ಥೆ ಕಟ್ಟಿ ಹತ್ತಾರು ನಾಟಕಗಳನ್ನು ಕೊಟ್ಟ ಗಟ್ಟಿ ನಿರ್ದೇಶಕರೇ ತಮ್ಮ ಹೊಸ ನಾಟಕಗಳಿಗೆ ಈ ಹದಿನೇಳರ ಹುಡುಗನ ನಿರ್ದೇಶನ, ಕೋರಿಯೋಗ್ರಾಫಿಗಾಗಿ ಡೇಟ್ ಕೇಳಿದ್ದುಂಟು.ಹಿರಿಯ ಹಾಡುಗಾರರನ್ನೊಳಗೊಂಡ ಕಲಾ ಸಂಸ್ಥೆಗಳು ಈ ಹುಡುಗನ 'ಕಂಠ' ವನ್ನೂ ತಮ್ಮೊಂದಿಗೆ ಸೇರಿಸಿಕೊಳ್ಳಲು ಕಾಲೇಜಿನ ಬಿಡುವಿಗಾಗಿ ಕಾಯ್ದದ್ದುಂಟು.

ಅಚ್ಚರಿ ಎಂದರೆ, ಆರಡಿಗೂ ಮೀರಿದ ಎತ್ತರದ, ಎಂಭತ್ತೈದಕ್ಕೂ ಮೀರಿದ ತೂಕದ ಈ ಹುಡುಗ , ಮನವನ್ನೊಪ್ಪಿಸಿ, ದೇಹ ಬಗ್ಗಿಸಿ, 'ಭರತ ನಾಟ್ಯ' ದಲ್ಲಿ ರಾಜ್ಯ ಮಟ್ಟಕ್ಕೆ ಬೆಳೆದದ್ದು. ಮರಾಠಿ ಮಣ್ಣಲ್ಲಿ ಹುಟ್ಟಿ, ಕರಾವಳಿಯ ಬದುಕಿನ ಚಿತ್ರಗಳನ್ನೂ ಲೀಲಾ ಜಾಲವಾಗಿ 'ಕ್ಯಾನ್ ವಾಸ್' ನಲ್ಲಿ ಬಿಂಬಿಸಿ, ಹೈದರಾಬಾದಿನ ವರೆಗೂ ಹೋಗಿ ಪ್ರಥಮ ಪುರಸ್ಕಾರ ಪಡೆದದ್ದು.

ಟ್ಯುಟೋರಿಯಲ್ ಗಳ ' ಮುಖ ' ನೋಡದೆ, " ಡೊನೇಶನ್ ಶುಲ್ಕಗಳ ಹಂಗಿಲ್ಲದೀ, ಎಲ್ಲ ಪರೀಕ್ಷೆಗಳಲ್ಲಿ ಕಾಲೇಜಿಗೆ, ಪ್ರಥಮ ನಾಗಿ ಪ್ರವೇಶ ಗಿಟ್ಟಿಸಿ, ಇಂಜಿಯನಿರಿಂಗ್ ಮುಗಿಸಿದ ಈ ಹುಡುಗ, ಆರು ತಿಂಗಳ ಹಿಂದೆ, ಮೈಸೂರಿನ ಇನ್ ಪೋಸಿಸ್ ಗೆ ನೌಕರಿ ತರಬೇತಿಗೆ ಹೊರಟಾಗ ಮುಂಬೈ ವಿಟಿಯ ರೈಲು ನಿಲ್ದಾಣದ ತುಂಬಾ ಬೀಳ್ಕೊಡುವ ಜನ ಜಾತ್ರೆ ನೆರೆದಿತ್ತು. ಅವರಲ್ಲಿ ಬಹುತೇಕ ಮಾತಾಪಿತರು, ಪ್ರೀತಿ, ಕೃತಜ್ಞತೆಗೆ ಅಲ್ಲಿ ಸೇರಿದ್ದರು, ಕಾರಣ ಇಷ್ಟೇ , ಅವರಲ್ಲೆಷ್ಟೊ ಮಂದಿಯ ಮಕ್ಕಳು ಈ ಹುಡುಗನ ಸ್ಪೂರ್ತಿಯಿಂದ ಭರತನಾಟ್ಯ ಕ್ಕಿಳಿದು ಮಿಂಚಿದ್ದರು. ಹಾಡುಗಾರಿಕೆಯಲ್ಲಿ ಪಳಗಿದ್ದರು. ನಾಟಕ ಆಡಿದ್ದರು. ಅವರಲ್ಲೆಷ್ಟೊ ಮಂದಿ , ತುಪ್ಪದ ಅನ್ನ ಬಡಿಸಿ ಬೆಳೆಸಿದರೂ ತಪ್ಪು ಹಾದಿ ಹಿಡಿದ, ಕಾರಲ್ಲಿ ಶಾಲೆಗೆ ಕಳುಹಿಸಿ ಕೊಟ್ಟರೂ ಕಲಿಯದ ತಮ್ಮ ಮಕ್ಕಳು ಕಲಿವಂತೆ ಮಾಡಲು , ಈ ಹುಡುಗನನ್ನು ಅವರು ಬಳಸಿಕೊಂಡಿದ್ದರು. ಟ್ಯೂಷನ್ ಇನ್ಸ್ ಟ್ಯೂಟುಗಳ ಹಂಗಿಲ್ಲದೇ , ತಾನೇ ತಯಾರಿಸಿದ ನೋಟ್ಸ್ ಗಳಿಂದ ಈ ಹುಡುಗ ಹಲವು ಮಕ್ಕಳಿಗೆ ಪರೀಕ್ಷೆಯಲ್ಲಿ ಗೆಲ್ಲುವ ಸೂತ್ರ ಕಲಿಸಿದ್ದ.
***
ಮುಂಬಯಿ ಕನ್ನಡಕ್ಕೆ ಹೆಮ್ಮೆಯಾದ, ಸ್ಪೂರ್ತಿಯಾದ ಈ ಹುಡುಗ ಆಶೀಷ್ ಹಾಲುಂಡು -ಕೆನೆಯುಂಡು ಬೆಳೆದವನಲ್ಲ. ಮುಂಬಯಿಗೆ ಬಹುತೇಕ ಕನ್ನಡದ ಬಹುತೇಕ ಮಂದಿಯಂತೇ ದುಡಿದು-ಕಲಿತು ನೆಲೆ ಕಾಣಲೆತ್ನಿಸುವ ಅಪ್ಪನ, ಬೇಸಾಯ --ಸಾಗುವಳಿಯಲ್ಲಿ ಮುಳುಗಿ, ಮದುವೆ ಎಂಬೊಂದು ಸೇತುವೆ ಏರಿ ಊರು ಬಿಟ್ಟು ಮುಂಬಯಿಗೆ ಸೇರಿದ ಅಮ್ಮನ ಮಗ. ವ್ಯಾಪಾರದ ಏರಿಳಿತದಲ್ಲಿ ಇದ್ದ ಮನೆಯನ್ನೂ ಮಾರಬೇಕಾಗಿ ಬಂದ ಅಪ್ಪ ನಿಗೆ, "ನನಗಿಂತ ಮೊದಲು ಜನಿಸಿದ ಹೆಣ್ಣುಮಗಳೊಬ್ಬಳಿದ್ದಳು. ಅವಳ ಮದುವೆಗೆ ಅದು ಖರ್ಚಾಯಿತೆಂದುಕೊಂಡು, ಮರೆತು ಬಿಡು," ಎಂದು ಸಾಂತ್ವನ ಹೇಳಿದ ಮಗ , ಆ ವರ್ಷ ಕಾಲೇಜಿಗೆ ಪ್ರಥಮನಾಗಿ ತೇರ್ಗಡೆಯಾಗಿದ್ದ.
***
ತನ್ನ ಬಾಲ್ಯಕ್ಕೆ ದಕ್ಕದೆ ಹೋದದ್ದೆಲ್ಲವನ್ನೂ ಮಗನ ಮೂಲಕ ದಕ್ಕಿಸಿಕೊಂಡ , ಯಕ್ಷಗಾನ ಭಾಗವತಿಕೆಗಿಳಿದ ಮುಂಬಯಿಯ ಪ್ರಥಮ ಮಹಿಳೆ , ತಾಯಿ ಸುಮಂಗಲಾ ಇಚ್ಚೆಯಂತೆ ಐ ಎ ಎಸ್ ಕಲಿಕೆ - ಆಶೀಶ್ ನ ಮೊದಲ ಪ್ರಾಶಸ್ತ್ಯ. ಇನ್ ಫೋ ಸಿಸ್ ನೌಕರಿಯ ಗರಿ ಹೊತ್ತು ಮರಳಿದ ಪ್ರತಿಭಾವಂತ ಆಶೀಷ್ ಮತ್ತೆ ಮುಂಬಯಿಯ ಮಕ್ಕಳ -ರಂಗದ ,ಹೊಸ ಪೀಳಿಗೆಗೆ ತನ್ನ ಪ್ರತಿಭೆ -ಸಾಧನೆಯ ಬೆಳಕಲ್ಲಿ ಹೊಸ ಚೈತನ್ಯ ನೀಡುವಂತಾದರೆ...ಇದು ಇಲ್ಲಿನ ಕನ್ನಡಿಗರ ಬಯಕೆ.

. . . ಮಧ್ಯೆ, ಯಾವ ಚಟುವಟಿಕೆಯ ನಾದ - ನಿನಾದವೂ ಇಲ್ಲದೆ ಕಳೆದು ಹೋಗುವ ನಮ್ಮ ಹುಡುಗರ ಬಾಲ್ಯ ...ತುಂಟಾಟಿಕೆಯ ಒಗರಿಲ್ಲದೆ ಗೆಜ್ಜೆಯ ಜಣ ಜಣವಿಲ್ಲದೆ ಒಣಗುವ ಹುಡುಗಿಯರ ಕೌಮಾರ್ಯ...'ಗುರುತಿಸುವಿಕೆ' ಯ ನೆರವಿಲ್ಲದೆ, ಪ್ರೋತ್ಸಾಹದ, ನೀರಿಲ್ಲದೆ ಒಳಗೇ ಇಂಗಿ ಬಿಡುವ ಮಕ್ಕಳ ಪ್ರತಿಭಾ ಚೈತನ್ಯ..ಎಲ್ಲ , ಬದುಕಿನ ತುರುಸಿಗೆ, ಸ್ಪರ್ಧೆಗೆ ಬಲಿ. ತಮ್ಮ ಮಕ್ಕಳು ಶಾಲೆ ಕಾಲೇಜುಗಳ ಪರೀಕ್ಷೆ ಗೆಲ್ಲುವ , ಗ್ರೇಡು ದೊರಕಿಸಿಕೊಳ್ಳುವಂತೆ ಮಾಡುವ ಹುರುಪಿನಲ್ಲಿ, ಹಪಾಹಪಿಯಲ್ಲಿ ಅವರೊಳಗಿರುವುದನ್ನೆಲ್ಲ ಚಿವುಟುವ , ಬತ್ತಿಸಿ ಬಿಡುವ ಅಪ್ಪ -ಅಮ್ಮಂದಿರಿಗೆಲ್ಲ ಉತ್ತರ ಆಶೀಷ್ ಮತ್ತು ಆತನ ಹೆತ್ತವರು!
***

ಏರಿ ಇಳಿಯುವ ಹೊತ್ತು...


ಬ್ಯಾಂಕಿನ ಸರತಿ ಸಾಲಲ್ಲಿ ನಿಂತಿದ್ದ ಹೊತ್ತು.ಅರುವತ್ತರ ಗಡಿ ಸಮೀಪಿಸಿರಬಹುದಾದ ಅವರೂ ಸಾಲಲ್ಲಿದ್ದರು.ನಿಂತಲ್ಲಿನ "ಬೋರು" ಕಳೆಯಲು ಮಾತು ಶುರುವಿಟ್ಟಿತು.ಅವರು ತಿಂಗಳ "ಪೆನ್ಷನ್" ಹಣ ವಿದ್ಡ್ರಾ ಮಾಡಿಕೊಳ್ಳಲು ಬಂದಿದ್ದರು.ಹೇಳುವುದಕ್ಕಿದ್ದ ನಾಲಗೆಗೆ ಕೇಳುವ ಕಿವಿ ಸಿಕ್ಕರೆ ಸಾಕೆಂಬಂತೆ, ಅವರ ಮಾತು, ಕುಟುಂಬ , ಮಕ್ಕಳು ಎಂಬಂತೆ ಸಾಗಿತು. ನಡುವೆ ಎಲ್ಲೋ ಮಾತು ನಿಲ್ಲಿಸಿ ಆ ಹಿರಿಯರು ಉಗುಳು ನುಂಗಿದರು."ನನ್ನ ಈ ಪೆನ್ಶನ್ ಮೊತ್ತ್ತ ಏನೇನೂ ಅಲ್ಲ, ಮಗಳು ಮನೆಗೆ ತರುತ್ತ್ತಿರುವ ಆರಂಕಿ ಸಂಬಳದ ಮುಂದೆ, ಇದು ಜುಜುಬಿ ಎಂದು ಮ್ಲಾನವದನರಾದರು. ವಿಚಾರಿಸಿದಾಗ , ನಿವೃತ್ತಿಗೆ ಮುಂಚೆ ಸರ್ಕಾರದ ಸೇವೆಯಲ್ಲಿದ್ದು, ಒಳ್ಳೆಯ ಮೊತ್ತವನ್ನೇ, ಸಂಬಳವಾಗಿ ಪಡೆಯುತ್ತ್ತಿದ್ದವರು. ಮಕ್ಕಳ ವಿದ್ಯಾಭ್ಯಾಸ , ಸ್ವಂತ ಮನೆ ಎಲ್ಲ ಅದರಲ್ಲೇ ಸಾಧ್ಯವಾಗಿತ್ತು . ಆದರೆ ಈಗಿನ ಐಟಿ/ಕಾರ್ಪೋರೇಟ್ ನೌಕರಿ ತರುವ ಪ್ಯಾಕೇಜ್ ಸಂಬಳದ ಮುಂದೆ ಅದು ಸಣ್ಣ ಮೊತ್ತ್ತವಾಗಿತ್ತು ಅಷ್ಟೇ.ಅವರದೀಗ ಬದುಕಿನ ಇಳಿ ಹೊತ್ತು. ಏರಿ - ಇಳಿದ ಹೊತ್ತು..ಅವರಿಗೆ ತಮ್ಮದೇ ಮಗಳ ಜೊತೆಗೊಂದು ಸ್ಪರ್ಧೆ, ಈರ್ಷೆ ಹುಟ್ಟಿತ್ತು!

***

ಬದುಕು ನಿರಂತರ ಒಂದಲ್ಲ ಒಂದು ರೀತಿಯಲ್ಲಿ ಏರುವ ಯತ್ನ, ಬೆಳಗಾತ ಮೂಡುವ ನೇಸರಿನ ಹಾಗೆ !ಹುಡುಗ, ವಿವಿಧ ತರಗತಿಗಳನ್ನೇರುತ್ತಾ ಸಾಗುವುದು, ಪದವಿಗಳನ್ನು ಹುದ್ದೆಗಳನ್ನು ಏರುತ್ತಾ ಸಾಗುವುದು. ರಾಜ್ಯ ಸರ್ಕ್ಯೂಟಿನಲ್ಲಿ ಆಡಿದ ಅಥ್ಲೆಟ್ ರಾಷ್ಟ್ರಿಯ ಹಂತಕ್ಕೇರುವುದು, ರಣಜಿಯಲ್ಲಿ ಆಡಿದ "ಸ್ಥಿರತೆಯ' ಆಟಗಾರ, ಮುಂದೆ ಟೆಸ್ಟ್ ತಂಡದ ನಂಬರ್ ವನ್ ದಾಂಡಿಗನ ಸ್ಥಾನಕ್ಕ್ಕೇರುವುದು, ಮೊದಲನೆಯ ಕವನ ಸಂಕಲನದಲ್ಲಿ ಭರವಸೆ ಹುಟ್ಟಿಸಿದ ಕವಯಿತ್ರಿ ರಾಜ್ಯ ಅಕಾಡೆಮಿ ಪುರಸ್ಕಾರಕ್ಕೆ ದಿಟ್ಟಿ ನೆಡುವುದು, ಅಥವಾ ವೇಟರ್ ಆಗಿರುವ ಹೊಟೇಲು ಮಾಣಿ, ಮ್ಯಾನೇಜರ್ ಆಗಿ ಮುಂದೆ ಹೊಟೇಲು "ಮಾಲಕ'ನ ಸ್ದ್ತಾನಕ್ಕೇರುವುದು, ವ್ಯಕ್ತಿಯ ಪ್ರಯತ್ನ -ಸಾಮರ್ಥ್ಯ, ಕೌಶಲ್ಯ , ಪ್ರತಿಭೆ ವ್ಯಕ್ತಗೊಳ್ಳುವ ಎಲ್ಲ ವಿಭಾಗಗಳು ಇಲ್ಲಿ ಸೇರುತ್ತವೆ. ಸ್ಪರ್ಧೆ, ಪೈಪೋಟಿ , ಪರೀಕ್ಷೆ ಎಲ್ಲ ಈ "ಏರುವಿಕೆ" ಗಾಗಿ ಬಳಸುವ ಏಣಿಗಳು. ಏರಿ ನಿಂತಲ್ಲಿ ಸ್ಥಾಪಿತರಾಗಿರಬೇಕೆಂಬ ಮತ್ತೊಂದು ಹಂಬಲದಲ್ಲಿ ಮಗದೊಂದಷ್ಟು ಸ್ಪರ್ಧೆಗಳು.

ಏರುವ ಯತ್ನ, ಎಷ್ಟು ಶಕ್ತಿಯುತವಾಗಿ, ಕೌಶಲ್ಯಪೂರ್ಣವಾಗಿ, ಪರಿಶ್ರಮಪೂರ್ವಕವಾಗಿದ್ದರೂ ಅದು ಇಳಿವ ಹೊತ್ತಿಗೆ ಕಟ್ಟುವ ಸುಂಕವಾಗುವುದಿಲ್ಲ.ಸೇಫ್ ಡೆಪಾಸಿಟ್ಟೂ ಆಗುವುದಿಲ್ಲ.ಆದ್ದರಿಂದಲೆ, ಇಳಿವ ಹೊತ್ತಿಗೆ ಪರ್ಯಾಯವಿರುವುದಿಲ್ಲ! ಹಾಗೇ, ಈ ಏರುವ ಬಯಕೆ ಇದೆಯಲ್ಲ್ಲಾ , ಅದಕ್ಕೆ ಫುಲ್ ಸ್ಟಾಪು ಗಳೇ ಇರುವುದಿಲ್ಲ.ಆದರೆ ವ್ಯಕ್ತಿಯ ಕೌಶಲ್ಯ , ಪಕ್ವತೆ ಗೆ ಪರೀಕ್ಷೆ ಒದಗುವುದು ಏರುವುದರಲ್ಲರಲ್ಲ, ಏರಿ ನಿಲ್ಲುವ ಸ್ಥಿತಿ ಮತ್ತು ಏರಿ ಇಳಿವ ಅನಿವಾರ್ಯವನ್ನು ಸಮಭಾವದಿಂದ ನಿಭಾಯಿಸುವುದರಲ್ಲಿ.

ಸಾಧನೆಯ ನಿರಂತರತೆಯನ್ನು ಕಾಪಾಡಿಕೊಳ್ಳುವುದು, ಕೆಲವೊಮ್ಮೆ ಮುಂದಿನ ಪೀಳಿಗೆಗೆ ಅದನ್ನು ದಾಟಿಸುವುದೂ ಕೂಡಾ ಏರಿ ನಿಂತವನ, ಗೆದ್ದು ನಗೆಬೀರಿದವನ ಮಂದಿರುವ ಸವಾಲಾಗಿರುತ್ತದೆ. ಅಥವಾ ಹಾಗೆಂದು ಆತ ಭಾವಿಸಿರುತ್ತ್ತಾನೆ.ಅದರಲ್ಲೂ, ಗುರಿ ಸಾಧಿಸಿ , ಇನ್ನು ಸಾಕೆಂದು ವಿರಮಿಸ ಹೊರಟಾಗ, ನಿಜವಾದ ಕಷ್ಟ ಎದುರಾಗುತ್ತದೆ. ಸ್ಟಾರ್ ಪಟ್ಟಕೇರಿ , ಜನಪ್ರಿಯತೆಯ ತುತ್ತತುದಿಯಲ್ಲಿ ನಿವೃತ್ತನಾಗ ಹೊರಡುವ ಕ್ರೀಡಾಪಟು, ಓರ್ವ ನಟ, ನಿರ್ದೇಶಕ ಎಷ್ಟೋ ಬಾರಿ, "ಶತಾಯಗತಾಯ' ಅಲ್ಲಿ ಉಳಿಯಲು ಯತ್ನಿಸುತ್ತಾನೆ.ಅದಾಗದೆ ಹೋದಾಗ ಮಕ್ಕಳಿಗೆ ಅವಕಾಶ ಕಲ್ಪಿಸಿ, ಅವರ ಮೂಲಕ ತಾನು ಮುಂದುವರಿಯ ಬಯಸುತ್ತಾನೆ. ಬಹುಶಹಾ ಇದೂ ,"ಐಡೆಂಟಿಟಿ ಕ್ರೈಸಿಸ್' ನ ನಿರುವಹಣೆಯ ಭಾಗವಿರಬಹುದೇನೋ ? ಇದೆರಡೂ ಸಾಧ್ಯವಾಗದ ಬಹುತೇಕ ಮಂದಿ " ಇಳಿವ' ಸ್ಥಿತಿಯನ್ನು ಬಹಳ ಕೆಟ್ಟದಾಗಿ ನಿರುವಹಿಸಿ ಬಿಡುತ್ತಾರೆ. ಕೆಲ ವರ್ಷಗಳ ಹಿಂದೆ, ಮಹಾರಾಷ್ಟ್ರದಲ್ಲಿ ವಿಶ್ವ ವಿದ್ಯಾಲಯಗಳು, ಸುಧಾರಣಾ ಕ್ರಮವೊಂದನ್ನು ಕೈಗೊಂಡವು.ಇದರತೆ ವಿಭಾಗ ಮುಖ್ಯಸ್ಥರ "ಹುದ್ದೆ' ಆ ವಿಭಾಗದ ಎಲ್ಲ ಪ್ರಾಧ್ಯಾಪಕ ಸಿಬ್ಬಂದಿಯ ಮಧ್ಯೆ ಸೀನಿಯರ್, ಜ್ಯೂನಿಯರ್ ಭೇದವಿಲ್ಲದೆ, "ಪರ್ಯಾಯ' ಕ್ಕೊಳಪಟ್ಟಿತು.ನಿನ್ನೆಯ ವರೆಗೆ ತಾವಿದ್ದ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿದು, ತನ್ನದೇ ವಿಭಾಗದ ಕಿರಿಯನ ಕೈ ಕೆಳಗೆ ಕೆಲಸ ಮಾಡಲಾಗದೆ,"ಕಿರಿಕಿರಿ'ಗೊಳಗಾದ ಬಹಳಷ್ಟು ಹಿರಿಯ ಪ್ರಾಧ್ಯಾಪಕರು ಹುದ್ದೆ ಬಿಟ್ಟು ನಡೆದ ಪ್ರಸಂಗವೂ ಎದುರಾಯಿತು. ವೃತ್ತಿ ಜೀವನದ "ಇಳಿತ'ವನ್ನು ನಿಭಾಯಿಸುವುದು ಅಷ್ಟು ಸುಲಭದ ಮಾತಲ್ಲ.

ಇದು ಶೈಕ್ಷಣಿಕ ವಲಯದ ಮಾತಾಯಿತು. ಇನ್ನು, ದೇಶದೆಲ್ಲೆಡೆ ಭೂ ಸುಧಾರಣೆಯ "ಸಮಾಜ ಮಥನ ' ನಡೆದಾಗ, ನಿನ್ನೆಯವರೆಗೆ ಧಣಿಗಳಾಗಿದ್ದವರನೇಕರು, ನಿರ್ಗತಿಕರೂ ಆದದ್ದುಂಟು. ಊರಿಗೇ ಬಂದ ಕಾನೂನಿನ ಕತ್ತಿಯಲುಗಿಗೆ ಸಿಲುಕಿ, ಅರ್ಥಿಕವಾಗಿ, ಸಾಮಾಜಿಕವಾಗಿ ಇಳಿದು ಹೋದ ಅವರಲ್ಲನೇಕರಿಗೆ ಈ ಸ್ಥಿತಿಯಿಂದ ಹೊರಬರುವುದು ಸಾಧ್ಯವಾಗದೆ , ಸಾವಿನ ದಾರಿ ತುಳಿದದ್ದೂ ಇತ್ತು. ಇಂತಹಾ ಸ್ಥಿತಿಯಲ್ಲಿ ಬಾಳಲಾರದೆ, ದಕ ಜಿಲ್ಲೆಯ ಬಂಟ್ವಾಳದ ಬ್ರಾಹ್ಮಣರ ಕುಟುಂಬವೊಂದು, ಸಂಪೂರ್ಣ ಆತ್ಮಹತ್ಯೆಗೆ ಶರಣಾಯಿತು. ಇದೇ ರೀತಿ, ಮಹಾರಾಷ್ಟ್ರದ ಹೊಟೇಲು ವ್ಯವಸಾಯದಲ್ಲೂ ಒಮ್ಮೆ ನಡೆದು ಹೋಯಿತು. ಯಾವ ಹಂಗೂ ಇಲ್ಲದೆ, ಮುಕ್ತವಾಗಿ ನಡೆಯುತ್ತಿದ್ದ "ಲೇಡೀಸ್ ಬಾರು" ಗಳಿಗೆ ಸರಕಾರ ನಿಷೇಧ ಹೇರಿದಾಗ, ಅಲ್ಲಿ ಹುಟ್ಟುತ್ತಿದ್ದ ವಿಪುಲ ಆದಾಯದಲ್ಲೇ, ಕೈಯ ಎಂಟು ಬೆರಳಿಗೆ ಉಂಗುರ ತೊಡುತ್ತಿದ್ದ ಅನೇಕ ಕನ್ನಡಿಗ ಯುವ ಹೋಟೇಲಿಗರಿಗೆ ಮೊಗೆವ ಕೆರೆಯಲ್ಲೇ, ನೀರು ಬತ್ತಿ ಹೋದ ಅನುಭವ! ಮಾನಸಿಕ ಜರ್ಜರಿತ , ಆರ್ಥಿಕ ಕುಸಿತದಿಂದಾಗಿ, ಹಲವು ಯುವ ಉದ್ಯಮಿಗಳು ಹೇಳಹೆಸರಿಲ್ಲದಾಗಿ ಹೋದರು.ಇಂತದ್ದೊಂದು ಸ್ಥಿತಿಯನ್ನು ನಿಭಾಯಿಸಲು ಅವರೆಂದೂ ಅಣಿಯಾಗೇ ಇರಲಿಲ್ಲ.

ಇಪ್ಪತ್ತೈದು, ಮೂವತ್ತು ವರ್ಷಗಳ ಹಿಂದಿನ ಕ್ರಿಕೆಟ್ ಪಂದ್ಯಾವಳಿಗಳಿಗೆ ಇವತ್ತಿನ ಗ್ಲಾಮರ್ ಇರಲಿಲ್ಲ. ಆದರೆ ಹೆಚ್ಚಿನ ಸಭ್ಯತೆ ಇತ್ತು. ಆಟಗಾರನೊಬ್ಬ ತನ್ನ "ಫಾರ್ಮ್' ನಿಂದ ಇಳಿದ ಬಳಿಕ ತಂಡದ ಆಯ್ಕೆ ಸಮಿತಿಯ"ಲಾತ್" ಗಾಗಿ ಕಾಯದೆ , ತಾನಾಗಿಯೇ ವಿರಮಿಸುತ್ತಿದ್ದ ದಿನಗಳವು.ಅಂತಾ ಎಪ್ಪತ್ತು -ಎಂಭತ್ತರ ದಶಕದ ಮಧ್ಯೆ ಭಾರತೀಯ ಕ್ರಿಕೆಟ್ಟಿಟ್ಟನ್ನು ಆಧರಿಸುತ್ತಿದ್ದ ಒಬ್ಬ ಆಟಗಾರ ಕರ್ಸನ್ ಘಾವ್ರಿ. ಎಡಗೈಯಿಂದ ಮಧ್ಯಮ ವೇಗದಲ್ಲಿ ಬೌಲಿಂಗ್ ನಡೆಸಿ ಒಳ್ಳೆಯ "ವಿಕೆಟ್ ಫಸಲು' ತೆಗೆಯುತ್ತಿದ್ದ .ಜೊತೆಗೆ,ಬಾಲಂಗೋಚಿ ಸರದಿಯಲ್ಲಿ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದುದರಿಂದ , ತಂಡ ಆತನ "ಸವ್ಯಸಾಚಿತ್ವ'ದ ಲಾಭ ಪಡೆದಿತ್ತು.ಪಂದ್ಯವೊಂದರ ನಡುವೆ, ರನ್ನಿಂಗ್ ಕಾಮೆಂಟರಿ ನೀಡುತ್ತಿದ್ದ ವಿವರಣೆಕಾರ,"ಘಾವ್ರಿಯವರಿಗೆ ಇದೇ ಕೊನೆಯ ಪಂದ್ಯ' ವೆಂದು ಘೋಷಿಸಿ ಬಿಟ್ಟರು.. ಒಳ್ಳೆಯ ಫಾರ್ಮ್ ನಲ್ಲಿದ್ದ, ಘಾವ್ರಿ ಹೀಗೇಕೆ ಮಾಡಿದರು ? ಇದು ಆ ದಿನಗಳ ಕ್ರಿಕೆಟ್ ಪ್ರಿಯರ ಕಳವಳದ ಪ್ರಶ್ನೆಯಾಗಿತ್ತು. ಮರುದಿನದ ಸುದ್ದಿಗೋಷ್ಟಿಯಲ್ಲಿ, ಘಾವ್ರಿ ನುಡಿದ ಮಾತು ಎಲ್ಲ ಕಾಲಕ್ಕೆ, ಎಲ್ಲ ರಂಗಗಳಿಗೆ ಅನ್ವಯಿಸುವಂತಾದ್ದು . " ನಾನು ಫಾರ್ಮ್ ನಲ್ಲಿ ಸಾಗುತ್ತಿದ್ದೇನೆ ನಿಜ, ಫಾರ್ಮ್ ಕಳಕೊಂಡು ಇಳಿದು ಬಿಡುವುದಕ್ಕಿಂತ, ನೀವೆಲ್ಲಾ, "ಯಾಕೆ, ಈಗ ಯಾಕೆ, ಎಂದು ಕೇಳುವ ಈ ಕಾಲವೇ ನಿವೃತ್ತಿಗೆ ಸಕಾಲವೆಂದು ಭಾವಿಸುವೆ...''.ಇದು ಘಾವ್ರಿಯಂತವರಷ್ಟೇ ಹೇಳಬಲ್ಲ ಮಾತು.

***

ವಿಶ್ವ ಟೆನ್ನಿಸ್ ಕ್ಷಿತಿಜದ ಮಹಾನ್ ಆಟಗಾರ ಪೀಟ್ ಸಾಂಪ್ರಾಸ್. ಹದಿನೈದು ವರ್ಷಗಳ ಟೆನ್ನಿಸ್ ಬಾಳ್ವೆಯಲ್ಲಿ ಹದಿನಾಲ್ಕು ಬಾರಿ ಗ್ರಾಂಡ್ ಸ್ಲಾಮ್ ಚಾಂಪ್ಯನ್ ಶಿಪ್ ಗೆದ್ದು ವಿಶ್ವದ ಟೆನ್ನಿಸ್ ಅಚ್ಚರಿಗಳ ಸಾಲಿಗೆ ಸೇರಿ ದಂತಕಥೆಯಾದ -ಈರ.ಅದರಲ್ಲೂ, ಸತತ ಎಂಟು ಬಾರಿ ಗ್ರಾಂಡ್ ಸ್ಲಾಮ್ , ಸತತ ಏಳು ಬಾರಿಯ ವಿಂಬಲ್ಡನ್ ಗೆದ್ದ "ಏಕಚಕ್ರಾ-ಪತಿ'ಯ ಈ ಎರಡು ವಿಭಾಗಗಳ ಗೆಲುವನ್ನು ಇನ್ನೂ ಯಾರೂ ಸರಿ ಗಟ್ಟಿಲ್ಲ. ಸತತ ಎಂಟು ವರ್ಷ ವಿಶ್ವ ಟೆನಿಸ್ ರ್ಯಾಂಕಿಂಗ್ ನ ತುತ್ತ ತುದಿಯಾದ ನಂಬರ್ 1 ಸ್ಥಾನದಲ್ಲಿದ್ದ ಪೀಟ್ ಗೆ ಬಿಬಿಸಿ ಸುದ್ದಿಗಾರ್ತಿಯೊಬ್ಬಳು ಕೇಳಿದ ಪ್ರಶ್ನೆ., "ಪೀಟ್, ಯೂ ಆರ್ ನಂಬರ್ ವನ್, ವಾಟ್ ನೆಕ್ಸ್ ಟ್ ? '(ನೀವು ನಂಬರ್ ವನ್ ಆಟಗಾರ, ಮುಂದೇನು?) "ವೆನ್ ಯೂ ಆರ್ ಇನ್ ದ ಪೀಕ್ , ದಿ ಓನ್ಲಿ ಪಾಸಿಬಲ್ ಮೂವ್ ಮೆಂಟ್ ಈಸ್ ಫಾಲಿಂಗ್ ಡೌನ್....!! (ತುತ್ತ ತುದಿಗೇರಿದ ಬಳಿಕ , ಇನ್ನೊಂದೇ ಸಾಧ್ಯತೆ..ಕೆಳಕ್ಕೆ ಜಾರುವುದು) ಇದು ಪೀಟ್ ಕೊಟ್ಟ ಉತ್ತರ. ಎತ್ತರಕ್ಕೆ ಏರಿದವರೆಲ್ಲ ಮನನ ಮಾಡಬೇಕಾದ ವಿಚಾರ.

***

ಬಂದೆಷ್ಟು ಕಾಲವಾಯಿತು ಕೇಳಿಕೊಳ್ಳಿ.....!


ಆಧುನಿಕ ಸಮಾಜ ಜೀವನ ಪ್ರವಾಹ ಎರಡು ಪ್ರಮುಖ ನೆಲೆಗಳಲ್ಲಿ ಹರಿಯುತ್ತಿದೆ. ಒಂದೆಡೆ ಸಾರ್ವಜನಿಕ ಆಡಳಿತದಲ್ಲಿ ಪ್ರಜೆ -ಪ್ರಭು ಎಂಬುದಕ್ಕಿಂತಲೂ ಸಂಘ ಸಂಸ್ಥೆಗಳ ಪಾತ್ರ ಹೆಚ್ಚಾಗತೊಡಗಿದೆ.ಕಾನೂನಿನ ನೇರ ದಾರಿಗೆ ಒಲಿಯದ ಆಡಳಿತ ಯಂತ್ರ, ಪ್ರತಿಭಟನೆ, ಮುಷ್ಕರ ಮತ್ತು ಪ್ರತಿಕ್ರಿಯೆಗಳಿಗೆ ಬಾಗುತ್ತಿದೆ. ಒಲಿಯುತ್ತಿದೆ.ಇನ್ನೊಂದೆಡೆ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳು ನೀತಿ ರೂಪಣೆಯಲ್ಲಿ, ಜನಾಭಿಪ್ರಾಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸತೊಡಗಿವೆ..

"ಈ ಒಂದು ಅವಧಿಗೆ ನಾನು ಸಂಸ್ಥೆಯ ನೇತೃತ್ವ ವಹಿಸಲೇಬೇಕು, ..ಇಲ್ಲವಾದರೆ, ಇದು ತನಕ ಮಾಡಿದ ಕೆಲಸಗಳು ಅಪೂರ್ಣವಾಗುಳಿದು ಬಿಡುತ್ತವೆ.... ಏನೇ ಆದರೂ ಅಧ್ಯಕ್ಷನಾಗದೆ ಕೆಳಗಿಳಿಯಲಾರೆ..'' ಇದು ಸಂಘ -ಸಂಸ್ಥೆಗಳ ಆಡಳಿತದಲ್ಲಿ ಆಗಾಗ ಕೇಳಿ ಬರುವ ಮಾತು .. ಹಾಗಾಗಿ ಎದುರು ಪಂಗಡದವರನ್ನು ಒಲಿಸಿಯೋ ಇಳಿಸಿಯೋ ಅಳಿಸಿಯೋ..ಶತಾಯ ಗತಾಯ ಕುರ್ಚಿ ಉಳಿಸಿಕೊಳ್ಳುವ "ಆಟ' ಕ್ಕೆ ಹಾಗನ್ನುವವರು ಇಳಿದು ಬಿಡುತ್ತಾರೆ.! ಅವರು ಗೆದ್ದು ಬಿಡುತ್ತಾರೆ, ಕುರ್ಚಿ ಅವರೆದುರೇ ಸಣ್ಣದಾಗಿ ಬಿಡುತ್ತ್ತದೆ!

ಒಂದು ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲೋ, ಸಂಘಟನೆಯ ಸಮಿತಿಯಲ್ಲೋ ಇದ್ದೀರೆಂದಾದರೆ, ಅಲ್ಲಿ ಆ ಸಮಿತಿಯ ಎಲ್ಲರಿಗೂ ಒಂದು ಸಹಜ, ಪ್ರಜಾಸತ್ತಾತ್ಮಕ ಧ್ವನಿ ಇರುತ್ತದೆ.. ಅಭಿಪ್ರಾಯ ವ್ಯಕ್ತ ಪಡಿಸಲು, ಸಾಧಕ ಬಾಧಕಗಳ ಸಲಹೆ ಯಾ ಸೂಚನೆ ನೀಡುವುದಕ್ಕಿರುವ ವ್ಯಕ್ತಿಗೆ ಇದು ಸಾಕಾಗುತ್ತದೆ. ಹತ್ತ್ತು ವರ್ಷ ಸಮಿತಿಯಲ್ಲಿದ್ದು ಯಾವ ಬದಲಾವಣೆಯನ್ನೂ ತರಲಾಗದ ವ್ಯಕ್ತಿ , ತಾನು ನಾಯಕತ್ವದ ಮುಂಚೂಣೆಗೆ ಬಂದ ಮಾತ್ರಕ್ಕೆ ಎಲ್ಲ ಬದಲಾವಣೆಗಳಿಗೆ ಕಾರಣನಾಗುತ್ತಾನೆಂದು ನಂಬಬೇಕಾಗಿಲ್ಲ. ಅಧ್ಯಕ್ಷನೋ, ಕಾರ್ಯದರ್ಶಿಯೋ ಉಪಾಧ್ಯಕ್ಷನೋ ಹೀಗೆ ಬಗೆ ಬಗೆ ಹುದ್ದೆಯಲ್ಲಿ ದಶಕಗಳನ್ನೇ ಕಳೆದ ಬಳಿಕವೂ ಸಂಘಟನೆಯ ಒಳಗೇ ಇದ್ದು ಬಿಡುವುದು ,, ಜಾತಿ ಪಂಗಡಗಳ ಓಟ್ ಬ್ಯಾಂಕ್ ಗಳ "ಲೆಕ್ಕಾಚಾರ" ಮಾಡಿ ಟ್ರಸ್ಟಿಯೋ, ಇನ್ನೇನೋ ಆಗಿ ಸಂಸ್ಥೆಯ ಆಡಳಿತದ ಮೇಲೆ ತಮ್ಮ "ಪ್ರಭಾವ' ಬೀರುತ್ತಲೇ ಇರುವುದು , ತಮ್ಮ ಭಾರಕ್ಕೆ ಸಂಸ್ಥೆಯನ್ನು ಜಗ್ಗುತ್ತಲೇ ಇರುವುದು, ಇನ್ನು ಕೆಲವರ ಜಾಯಮಾನ! ಇದು ಎಲ್ಲೆಡೆ, ಬಹುತೇಕ ಸಂಸ್ಥೆಗಳ"ಒಳ' ನೋಟ!

ಹೇಗಾದರೂ ಮುಂಚೂಣಿಗೆ ಬರಲು, ಹಾಗೊಮ್ಮೆ ಕುರ್ಚಿ ಹಿಡಿದ ಬಳಿಕ ಅದನ್ನು ಉಳಿಸಿಕೊಳ್ಳಲು ಹೆಣಗುವ ವರ್ಗ ಒಂದಾದರೆ, ಸಹಜ ಅವ-ಯನ್ನು ಕುರ್ಚಿಯಲ್ಲಿ ಕೂತು "ಕಾರುಬಾರು"ನಡೆಸಿ , ಇಳಿದ ಬಳಿಕವೂ ಸಂಸ್ಥೆಯ ಪಡಸಾಲೆಯಲ್ಲೇ, ಬಿಡಾರ ಹೂಡುವ ನಾಯಕಮಣಿಗಳದ್ದು ಇನ್ನೊಂದು ವರ್ಗ. ತಾವಿಳಿದ ಬಳಿಕ , ತಮ್ಮವರನ್ನು , ತಾವು ಬಯಸುವವರನ್ನು ಅಥವಾ ತಮಗೆ ಬೇಕಾದಂತೆ ನಡೆದುಕೊಳ್ಳುವವರು "ಕುರ್ಚಿ'ಯಲ್ಲಿರುವಂತೆ ನೋಡಿಕೊಳ್ಳುವವರಿವರು! ಒಟ್ಟಾರೆಯಾಗಿ, ಕಾಂಚಾಣದ ಉಸ್ತುವಾರಿ , ಪ್ರಚಾರದ ಬಿಡು ಬೆಳಕು ಅ-ಕಾರದ ಕುರ್ಚಿ ಇವರ ಪಕ್ಕದಲ್ಲೇ ಇರಬೇಕು , ಇದೂ ಒಂದು ರೀತಿಯ ತುರಿಕೆ. ಇವೆಲ್ಲಾ ಕೊನೆಯಲ್ಲಿ ಪರ್ಯವಸನಗೊಳ್ಳುವುದು, ಸಂಘಟನೆಯ ಸೋಲಿನಲ್ಲಿ!

ಈ ಹಿನ್ನಲೆಯಲ್ಲಿ ನೋಡಿದಾಗ, ಸಣ್ಣ ಊರಿನ ಯುವಕ ಮಂಡಲವೊಂದು ಉಂಡು ಎಲೆ ಮಡಿಸಿ ಏಳುವಂತೆ ತನ್ನ ಚಟುವಟಿಕೆಗಳನ್ನು ನಡೆಸುವ ಪರಿಗೆ ಹೆಮ್ಮೆ ಪಟ್ಟಿದ್ದೇನೆ. ವಾರ್ಷಿಕೋತ್ಸವಕ್ಕೆರಡು ತಿಂಗಳಿರುವಂತೆ ಸಭೆ ಸೇರಿ, ಇಡೀ ವರ್ಷ, ಗ್ರಾಮದ ಸಮಸ್ತ ಆಗು ಹೋಗು, ಏರಿಳಿತವನ್ನು ಗಮನಿಸಿ ಆ ನೆಲೆಯಲ್ಲೇ, ಸಮಿತಿ ಸದಸ್ಯರು ಈ ಬಾರಿ ತಾವು ಮಾಡಬೇಕಾದ ವಿಧಾಯಕ ಕಾರ್ಯಗಳದೊಂದು ಯಾದಿ ತಯಾರಿಸುತ್ತಾರೆ. . ಅಲ್ಲಿ ಒಂದಷ್ಟು ಸ್ಪರ್ಧೆಗಳು, ಹಳ್ಳಿಯ ಎಲ್ಲ ವಯೋಮಾನದವರಿಗನ್ವಯವಾಗುವಂತಿರುತ್ತದೆ.ವರ್ಷದುದ್ದಕ್ಕೆ ಪ್ರತಿಭೆ ಮೆರೆದ ಹಳ್ಳಿಯ ಹತ್ತು ಮಕ್ಕಳಿಗೆ ಪ್ರೋತ್ಸಾಹದ ಗರಿ ಯಾಗಬಲ್ಲ ಒಂದಿಷ್ಟು ಬಹುಮಾನಗಳು...ಜೊತೆಗೆ, ಬೆಂಕಿ ಅವಘಡದಲ್ಲಿ ಮನೆ ಕಳಕೊಂಡ ಕುಟುಂಬಕ್ಕೋ, ತೆಂಗು ಅಥವಾ ಕಂಗಿನ ಮರದಿಂದಲೋ ಬಿದ್ದ್ದು ಅಂಗ ವೈಕಲ್ಯಕ್ಕೊಳಗಾದ ಕೂಲಿಯ ಆರೈಕೆಗೋ,, ಆತನ ಅವಲಂಬಿತ ಸಂಸಾರಕ್ಕೆ ಸ್ವಲ್ಪ ಸಾಂತ್ವನ ತರಬಲ್ಲ ಅಗತ್ಯ ವಸ್ತುಗಳ ವಿತರಣೆಗೋ ...ಹೀಗೆ ಕೆಲವು ವಿಚಾರಗಳು ಎಜೆಂಡಾ ದಲ್ಲಿರುತ್ತವೆ. ಮನರಂಜನೆಯ ವಿಭಾಗ ಊರ ಮನೆಯ ಮಕ್ಕಳಿಗೇ ಸೇರಿದ್ದು, ಅದಕ್ಕೊಂದಿಷ್ಟು ಹಣ ಸುರಿವ ಪ್ರಮೇಯವೇ ಬರುವುದಿಲ್ಲ.

ಒಟ್ಟು ಬಜೆಟ್ಟನ್ನೂ , ಅಲ್ಲೇ, ಆ ಕ್ಷಣದಲ್ಲೇ ಯೋಜಿಸಲಾಗುತ್ತದೆ.ಮುಂದೆ, ಗ್ರಾಮದ ಹತ್ತಾರು ಅಂಗಡಿ ಮುಂಗಟ್ಟುಗಳವರು, ತಮ್ಮ ವ್ಯವಹಾರ ಸ್ವರೂಪಕ್ಕನುಗುಣವಾಗಿ, ಬಹುಮಾನವನ್ನು ಪ್ರಯೋಜಿಸಿದರೆ, ಬೇಕಾಗುವ ನಗದನ್ನು, ಸಮಿತಿಯಲ್ಲೇ ಇರುವ ಬೆರಳೆಣಿಕೆಯ ಮಂದಿ , ಸ್ವಲ್ಪ ಧಣಿಕರು ತಮ್ಮ ಪಾಲಿನದೆಂದು ವಹಿಸಿಕೊಳ್ಳುತ್ತಾರೆ. ಹಾಗಂತ ಒಂದು ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ದೇಣಿಗೆಯನ್ನು ಯಾರಿಂದಲೂ ಸ್ವೀಕರಿಸುವುದಿಲ್ಲ. ಒಟ್ಟು ದೇಣಿಗೆ ಸಂಗ್ರಹ , ಹಾಕಿಕೊಂಡ ಕಾರ್ಯಕ್ರಮಗಳ ವೆಚ್ಚಕ್ಕಿಂತ ದಾಟಿ ಸಾಗದಂತೆ ನಿಗಾ ವಹಿಸಲಾಗುತ್ತದೆ.ಅರ್ಥಾತ್,ದಾನಿಗಳಾದರೂ ಹೆಚ್ಚು ಉದಾರಿಗಳಾಗದಂತೆ ನೋಡಿಕೊಳ್ಳುವ ಸಂಸ್ಥೆ ಇದೊಂದೇ ಇರಬೇಕು!
ಹೀಗೆ ಕಾರ್ಯಕ್ರಮ ಮುಗಿದಾಗ , ಆಯ ಮತ್ತ್ತು ವ್ಯಯ ಸಮ ಸಮ ಗೊಂಡು ಕೋಶವೆನ್ನುವುದು ಖಾಲಿಯಾಗಿಯೇ ಉಳಿಯುವುದರಿಂದ ಅದನ್ನು ಕಾಯುವುದಕ್ಕಿರುವ ಕೋಶಾ-ಕಾರಿಗೆ, , "ಅಧ್ಯಕ್ಷತೆ' ಯ ಪಟ್ಟದಲ್ಲಿರುವವನಿಗೆ , ಹೇಗಾದರೂ ತಾನೇ ಮುಂದುವರಿಯಬೇಕೆಂಬ ಹಂಬಲ ಉಳಿದಿರುವುದಿಲ್ಲ. ಮತ್ತೆ ಮರು ವರ್ಷ ಹೊಸದೇ ಒಂದು ಸಮಿತಿ.ಹೊಸದಾಗಿಯೇ ಕೋಶ ರಚನೆ. ಹೀಗೆ ಸಂಸ್ಥೆಯೊಂದು ಸ್ಥಾವರವಾಗಿದ್ದೇ ಜಂಗಮವಾಗುಳಿವ ಈ ಪರಿ ನಿಜಕ್ಕೂ ಒಂದು ಮಾದರಿಯಾಗಬಹುದೇನೋ..! ಅಂದ ಹಾಗೆ ಈ ಯುವಕಮಂಡಲವಿರುವುದು ಕಾಸರಗೋಡಿನ ಮಂಜೇಶ್ವರದಲ್ಲಿ.
***
ಕಾಲ ತನ್ನ ಅವಶ್ಯಕತೆಯನ್ನು ಪೂರೈಸಿಕೊಳ್ಳುತ್ತ್ತದೆ. ಮಹಾನ್ ಸೃಜನಶೀಲ, ಕ್ರಿಯಾಶೀಲನೆಂದು ಕೊಂಡವನಿಗೂ , ತನಗೆ ಸರಿಸಮನಾಗಿ ದುಡಿವ ನಾಯಕನ್ಯಾರು ಎಂದು ಕೊಂಡವನಿಗೂ ಬರುವ ನಾಳೆಗಳಲ್ಲಿ ಪರ್ಯಾಯವಿರುತ್ತ್ತದೆ. ಬಹಳಷ್ಟು ಕ್ರಿಯಾಶೀಲತೆಯಿಂದ ಸೇವೆ ಸಲ್ಲಿಸಿದವನಿರಬಹುದು , ತನ್ನ ತನು ಮನ ಧನ ಕೌಶಲ್ಯದಿಂದ ಸಂಸ್ಥೆಯ ಉಛ್ರಾಯಕ್ಕೆ, ಅಭಿವೃದ್ದಿಗೆ ಕಾರಣನಾದವನೇ ಇರಬಹುದು..ತಾನು ಬಂದೆಷ್ಟು ಕಾಲವಾಯಿತೆಂದು ಕೇಳುತ್ತಿರಬೇಕು.! ಇದು ಸಂಘದ , ಸಂಸ್ಥೆಯ , ವ್ಯಕ್ತಿಯ ಆರೋಗ್ಯಕ್ಕೆ ಒಳ್ಳೆಯದು!
***
" ಅಯ್ಯಯ್ಯ ಎಂಚ ಪೊರ್ಲಾಂಡ್ . . .

ಇದೊದು ಅಪವಾದ ಬಹುಕಾಲದಿಂದ ಕರ್ನಾಟಕ ರಾಜ್ಯದ ""ಆಡಳಿತದಲ್ಲಿ ಒಳಗೊಂಡ'' ತುಳುವ ಮಂದಿಯ ಮೇಲಿತ್ತು...ಅದು ಕಟ್ಟಕಡೆಗೂ ನಿವಾರಣೆಯಾಗಿದೆ, ಅವರು ಶಾಪಮುಕ್ತರಾಗಿದ್ದಾರೆ..ಪ್ರಯತ್ನ ಯಾರದೇ ಇರಲಿ..! ತುಳುವ ಮಂದಿಯ ಬಾಹುಳ್ಯವಿರುವ ದ.ಕ . ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಶಾಲಾ ಕಲಿಕೆಯಲ್ಲಿ ಮೂರನೆಯ ಭಾಷೆಯಾಗಿ ತುಳುವನ್ನೂ ಕಲಿವ ಅವಕಾಶವನ್ನು ಕೊನೆಗೂ ಕರ್ನಾಟಕ ಸರಕಾರ ಕರುಣಿಸಿದೆ.ಮೊನ್ನೆ ಮೊನ್ನೆ ವಿಶ್ವ ಮಟ್ಟದ ತುಳು ಸಮ್ಮೇಳನ, ಅದಕ್ಕೂ ಸ್ವಲ್ಪ ಹಿಂದೆ ಕೇರಳ ಸರಕಾರದಿಂದಲೂ ತುಳು ಅಕಾಡೆಮಿ, .ಈಗ ಅ-ಕೃತವಾಗಿ ಮೂರನೆಯ ಕಲಿಕಾ ಭಾಷೆ ..ಹೀಗೆ ಅನ್ನದ ಭಾಷೆಯಾದ, "ಅಣ್ಣ"ನ ಭಾಷೆಯಾದ ತುಳುವಿಗೆ ತಡವಾಗಿಯಾದರೂ "ಶುಕ್ರದೆಸೆ' ಪ್ರಾಪ್ತಿಯಾಗಿದೆ..

ರಾಷ್ಟ್ರ ಮಟ್ಟದ ಶಿಕ್ಷಣ ಸಂಸ್ಥೆಗಳು, ಬ್ಯಾಂಕುಗಳು, ಮಠ ಮಂದಿರಗಳಿದ್ದು...ಆಡಳಿತದ ನೈಪುಣ್ಯಕ್ಕೂ ಖ್ಯಾತಿವೆತ್ತ ಅವಳಿ ಜಿಲ್ಲೆಯಲ್ಲಿ ಶತಮಾನದ ಹಿಂದೆಯೇ ಬಾಸೆಲ್ ಮಿಶನ್ ನಂತಾ ವಿದೇಶೀ ಮಿಶನರಿಯೇ ತುಳುವನ್ನು ಅ-ಕೃತವಾಗಿ ಜನರಿಗೆ ಕಲಿಸಲು ಮುಂದಾಗಿತ್ತೆನ್ನುವಾಗ, ನಾವು , ಬಹಳೇ ಸಮಯ ವ್ಯರ್ಥಮಾಡಿದ್ದ್ದು ಗೋಚರಕ್ಕೆ ಬರುತ್ತದೆ. ಕೊನೆಗಾದರೂ , "ಭರತೇಶ ವೈಭವ" ದ ಕವಿ ರತ್ನಾಕರ ವರ್ಣಿಯ ಆತ್ಮ ಮತ್ತೊಮ್ಮೆ, " ಅಯ್ಯಯ್ಯ ಎಂಚ ಪೊರ್ಲಾ ಂ ಡ್ ..." ಎಂದು ಸಂತಸ ಪಡುತ್ತಿರಬಹುದು.

*******************

Friday, March 26, 2010

ರುಚಿಯೊಂದಿದ್ದರೆ..ಬದುಕಿಗೆ...!

ಒಂದೊಮ್ಮೆ , ಹಸಿದ ಹೊಟ್ಟೆಯನ್ನು ಉಣಿಸಲು, ದೇಹದ ದಣಿವು ತಣಿಸಲು ಹುಟ್ಟಿಕೊಂಡ ಹೊಟೇಲುಗಳು, ಉಪಹಾರ -ವಿಶ್ರಾಂತಿ ಗೃಹಗಳು , ಮುಂದೆ ರಾತ್ರಿ ಹಗಲು ಲತಾಂಗಿಯರು ಮದ್ಯ ಉಣಿಸುವ ಬಾರುಗಳಾಗಿ ರೆಸ್ಟೋರಾಗಳಾಗಿ ಬದಲಾದಾಗ, ಅದನ್ನು ನಮ್ಮ ಪ್ರಗತಿಗೆ ಭಾಷ್ಯವೆದು ತಿಳಿಯಲಾಯಿತು. ಹಳೆಯ ಮಿಲ್ಲುಗಳ ಜಾಗವನ್ನೆಲ್ಲಾ ಮಾಲ್ ಗಳು "ಸಾಮ್ರಾಜ್ಯ"ದಂತೆ ವ್ಯಾಪಿಸಿಕೊಂಡಾಗ ಅದು ಅಭಿವೃದ್ದಿಗೆ ಹೊಚ್ಚ ಹೊಸಾ ವ್ಯಾಖ್ಯಾನವಾಯಿತು. ಮನುಷ್ಯನ ಕೊಳ್ಳುವ ತಾಕತ್ತು ಹೆಚ್ಚಾದಂತೆಲ್ಲಾ "ರುಚಿ"ಯೂ ಬದಲಾಯಿತು. ನಾಲಗೆಯದ್ದಷ್ಟೇ ಅಲ್ಲ, ಬದುಕಿನದ್ದೂ ಕೂಡ ! ನೂರಾರು ಮಹಡಿಗಳ ಕಾಂಕ್ರೀಟು ಕಟ್ಟಡಗಳನ್ನು, ಮೇಲ್ಸೇತುವೆಗಳನ್ನು ನಿರ್ಮಿಸುವುದು , ವಿಶೇಷ ಕಾರಿಡಾರ್ ಗಳನ್ನು ರಚಿಸುವುದು , ಅಥವಾ ಹೊಳೆವ ಗಾಜುಗಳ ಬಿಗ್ ಬಜಾರುಗಳು , ಮಾಲುಗಳನ್ನು ಬಹು ಪರದೆಗಳ ಸಿನಿಮಾ ಥಿಯೇಟರುಗಳನ್ನು ಅಲ್ಲಲ್ಲಿ ಕಟ್ಟಿ ಬಿಡುವುದು ಇವು ಪ್ರಗತಿಯ ಮಾನದಂಡವಾಗುತ್ತಿರುವುದು ಕಂಡು ಬರುತ್ತಿದೆ.

ನಮ್ಮ ಹಳ್ಳಿಗಳ ಕಡೆಗೆ ಹೊರಳಿದರೂ , ಮಠ ಮಂದಿರಗಳೂ ನೆಲದಿಂದ ತಲೆಯ ವರೆಗೆ ಸಿಮೆಂಟಿನಚ್ಚಿನಲ್ಲಿ ಎರಕಗೊಂಡು ಒಂದರ ತದ್ರೂಪ ಇನ್ನೊಂದಾಗಿ ಗೋಚರಿಸುತ್ತಿವೆ. ಅಚ್ಚರಿಯೆಂದರೆ ಹತ್ತಾರು ಕೋಟಿ ವೆಚ್ಚದಲ್ಲಿ ಮೂಲ ಸ್ವರೂಪವನ್ನು ವಿರೂಪಗೊಳಿಸಿ ನಿರ್ಮಾಣಗೊಳ್ಳುವ ಇಂತಾ ಸಿಮೆಂಟು ಸಂಕೀರ್ಣಗಳೂ "ವಾಸ್ತು ಶಾಸ್ತ್ರದ ಪ್ರಗತಿ"ಯಲ್ಲಿ ದಾಖಲಾದವು.. ಎಲ್ಲೋ ಊರ ನಡುವಣ ಪ್ರಶಾಂತ ಜಾಗದಲ್ಲಿದ್ದ ದೇವಸ್ಥಾನಗಳು ಇಗರ್ಜಿ ಗಳು ಹಳ್ಳಿಗಳ ಸಂಜೆಗೊಂದು ವಿಶೇಷ ಅಲೌಖಿಕ ಪರಿಸರವನ್ನು ನಿರ್ಮಾಣ ಮಾಡಿ ಕೊಡುತ್ತಿದ್ದವು . ಕಾರಣ ಅಲ್ಲಿದ್ದ ಮೌನ ಮತ್ತು ಸರಳತೆ . ಕಾಣದ ದೇವರ ಬಗೆಗೆ ಅಷ್ಟಾಗಿ ಚಿಂತಿಸದೆ , ಕಣ್ಣ ಮುಂದಿನ ಬದುಕಿನ ಮೌಲ್ಯ ವರ್ಧನೆಗೇ ಶತಮಾನ ಶ್ರಮಿಸಿದ ಶಿವರಾಮ ಕಾರಂತರು ದೇವಾಲಯಗಳ ಆವರಣಗಳನ್ನು ಇಷ್ಟಪಡುತ್ತಿದ್ದರು . ಪುತ್ತೂರು, ಉಡುಪಿ, ಕುಂದಾಪುರ ಪರಿಸರದ ಅವರ ಚಟುವಟಿಕೆಯ ದಿನಗಳಲ್ಲಿ ಅಲ್ಲಿನ ದೇವಸ್ಥಾನಗಳ ಬಳಿಯೇ ಹೆಚ್ಚಾಗಿ ಮಕ್ಕಳೊಡನೆ ಅವರ ಒಡನಾಟವಿರುತ್ತಿತ್ತು . ಅದೇ ಮಂದಿರ ಮಂದಿರ ಪರಿಸರಗಳೀಗ ವಾಣಿಜ್ಯ ಮಳಿಗೆಗಳಂತೆ ಕಾಣುತ್ತಿವೆ. ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಅಲ್ಲಿ ನಡೆದ "ಪ್ರಗತಿ" ಕಾರ್ಯಗಳಿಂದ ಮೂಲ ಸೌಂದರ್ಯ ನಷ್ಟವಾಗಿರು ವುದು ಸ್ಪಷ್ಟವಾಗಿ ಗೋಚರಿಸುತ್ತದೆ. ರಫಿ, ಮುಖೇಶ ರ ಹಳೆಯ ಹಾಡುಗಳ ಮೇಲೆ ಇಂಡಿಪಾಪ್ ನ ಸುರುಳಿ ಸುತ್ತಿದ ಹಾಗೆ !
ಒಳಗಿನ ರುಚಿ ಕೆಟ್ಟಾಗ ನಾವು ಈ ರೀತಿಯ ಬದಲಾವಣೆಗೆ ಒಗ್ಗಿಕೊಳ್ಳುತ್ತೇವೆ . ಪ್ರಗತಿಯ ಪಥದಲ್ಲಿ ಎಲ್ಲವೂ ಸರಿ ಎನ್ನತೊಡಗುತ್ತೇವೆ. ಇಷ್ಟಕ್ಕೂ ಕಾರಣ ನಮ್ಮ 'ರುಚಿ" . ರುಚಿ ಕೆಟ್ಟಾಗ ಅಭಿರುಚಿಯೂ ಬದಲಾಗುತ್ತದೆ. ಇಷ್ಟಗಳು ಬದಲಾಗುತ್ತವೆ. ಇದರಿಂದ ನಮ್ಮ ಎಲ್ಲ ರೀತಿಯ ಯೋಚನೆ ಮತ್ತು ಯೋಜನೆಗಳು ಪ್ರಭಾವಗೊಳ್ಳುತ್ತವೆ. ಸಣ್ಣದೊಂದು ಮನೆಯನ್ನು ಕಟ್ಟಿ , ಅದಕ್ಕೊಪ್ಪುವ ಪೀಠೋಪಕರಣಗಳನ್ನು ಆಯ್ಕೆ ಮಾಡುವುದಕ್ಕೂ ಒಂದು ಒಳ್ಳೆಯ ರುಚಿ ಬೇಕಾಗುತ್ತದೆ. ಅದಿಲ್ಲವಾದಾಗ ಆ ಮನೆ ನಮ್ಮ ಸಂಪತ್ತು -ಆಡಂಬರ -ಅಬ್ಬರಗಳ ಪ್ರತಿಫಲನವಾಗಿ ಕಣ್ಣಿಗೆ ರಾಚುವ "ಶೋಕೇಸು"ಗಳಾಗಿ ಬಿಡುತ್ತವೆ. ತರಹೇವಾರಿ ವಸ್ತುಗಳನ್ನೆಲ್ಲಾ ತಂದು ರಾಶಿ ಹಾಕುವ ಉಗ್ರಾಣಗಳಾಗುತ್ತವೆ.

ಇನ್ನು ಮನೆಯ ಒಳ ಹೂರಣವಾನ್ನಾದರೂ ನೋಡಿ.... ಹೆಚ್ಚು ಬೇಡ , ನೀವು ಮಧ್ಯ ವಯಸ್ಕರಾದರೆ, ಮೂವತ್ತು - ನಲವತ್ತು ವರ್ಷ ಗಳ ಹಿಂದಕ್ಕೆ ಹೋಗಿ ನೋಡಿ ಮನೆಯ ಹಜಾರದ ಗೋಡೆಗಂಟಿದ ಚಿತ್ರಗಳಲ್ಲಿ ಅಮ್ಮ ಇರುತ್ತಿದ್ದಳು.. ಜೊತೆಗೆ ಮುಖದ ಪ್ರತಿ ನೆರಿಗೆಯಲ್ಲೂ ಸಂಸಾರದ ರಥವೆಳೆದ ಕಥೆಯನ್ನೇ ಕೆತ್ತಿದ ಅಜ್ಜಿ -ಅಜ್ಜ ಇರುತ್ತಿದ್ದರು...ಕೆಲವೊಮ್ಮೆ ಕಾಲಕ್ಕೂ ಮುನ್ನ ಕಾಲವಶಳಾದ ಅಮ್ಮನ ಜಾಗ ತುಂಬಿ, ಸಲಹಿದ ದೊಡ್ಡಮ್ಮನೋ ಅತ್ತೇಯೋ ಇರುತ್ತಿದ್ದರು.. ಮನೆಯೊಳಗೆ ಬೆಳೆವ ಮಗು ಬಂದವರಿಗೆ " ಗೊತ್ತಾ ಇದು ನಮ್ಮಜ್ಜಿ" ಅಂತ ಗೋಡೆ ತೋರಿಸಿ ತೊದಲಿದಾಗ ಮನೆ ಕಲರವದ ಗುಬ್ಬಿಯ ಗೂಡಾಗುತ್ತಿತ್ತು . ಜೊತೆಗೆ ಇಡೀ ಸಂಸಾರದ ಒಂದಾದರೂ ಫೋಟೋ ಇರುತ್ತಿತ್ತ್ತು . ರುಚಿ ಬದಲಾಗಿದೆ. ಮನೆಯ ತುಂಬ ಮೈಖೆಲ್ ಜಾಕ್ಸನ್ ರಾಕ್ ತಂಡದ , ಸಿಡ್ನಿಗೆ ಹೋದ ಮಹೇಂದ್ರ ದೋಣಿ ತಂಡದ , ಅನಾಮಿಕ ಚಿತ್ರಕಾರನ ಸೆರಾಮಿಕ್ ಚಿತ್ರಗಳಿದ್ದರೂ ಎಲ್ಲೂ ಬದುಕಿಗೊಂದು ರೂಪ ಕೊಟ್ಟ ಅಮ್ಮನ ಸುಳಿವಿಲ್ಲ. ಮಕ್ಕಳೂ ಹಾಗೆಯೇ ಬಿ ಇ , ಎಂಬಿಎ ನಂತರ ಮೈಖೇಲ್ ನ ಅಮೆರಿಕಾಕ್ಕೆ ಮಾರು ಹೋದಷ್ಟು ಅಮ್ಮನ ಭಾರತಕ್ಕೆ ಒಪ್ಪುವುದಿಲ್ಲ. ಆಗ ಅದಕ್ಕೆ "ಬ್ರೈನ್ ಡ್ರೈನ್ " (ಪ್ರತಿಭಾ ಪಲಾಯನ) ಎಂದು ಹೆಸರಿಟ್ಟು ನಾವು ಮಾಡಿದ ತಪ್ಪುಗಳನ್ನು ಮರೆ ಮಾಚಿ ಬಿಡುತ್ತೇವೆ.

ಕೊಳ್ಳುವ ತಾಕತ್ತು ಹೆಚ್ಚಾದಂತೆಲ್ಲಾ "ರುಚಿ" ಯೂ ಬದಲಾಯಿತು. ರುಚಿಯನ್ನನುಸರಿಸಿ ನಮ್ಮ ಆಯ್ಕೆಗಳು ಬದಲಾದವು. ಆಯ್ಕೆಗಳನ್ನನುಸರಿಸಿದ ಜೀವನ ಶೈಲಿಯೇ ಬದಲಾಯಿತು. ನಿಧಾನವಾಗಿ ಅದು ಸುತ್ತಲ ಜಗತ್ತಿನ ಮತ್ತು ಸಹಜೀವಿಗಳ ಕುರಿತಾದ ನಮ್ಮ ಚಿಂತನೆಯ ಮೇಲೂ ಪರಿಣಾಮ ಬೀರಿತು.ಒಂದೊಮ್ಮೆ, ನಾವು ತಿನ್ನುವ ಬಹುತೇಕ ಹಸಿರು -ಹಣ್ಣು ವಸ್ತುಗಳು ನೇರವಾಗಿ ತೋಟ , ಗದ್ದೆಗಳಿಂದ ಮನೆ ಸೇರುತ್ತಿದ್ದವು. ಯಾವ ರಸಾಯನಿಕಗಳ, ತಂಗಳ ಕಾಯ್ದಿರಿಸುವ ಪೆಟ್ಟಿಗೆಯ (ಫ್ರಿಜ್ಜು) ಹಂಗಿಲ್ಲದೆ ನಾವು ಅವುಗಳನ್ನು ತಾಜಾ ತಾಜಾ ಬಳಸುತ್ತಿದ್ದೆವು. ಕನಿಷ್ಟ, ಬೀದಿಯ ಕೊನೆಯ ಅಂಗಡಿಯಿಂದ ಮನೆಯ ನಿತ್ಯ ಬಳಕೆಯ ತರಕಾರಿಗಳನ್ನು ಖರೀದಿಸುತ್ತಿದ್ದಷ್ಟು ಕಾಲ ನಮಗೂ ಭೂಮಿಗೂ ಏನೋ ಸಂಬಂಧವಿರುವುದು ಅರಿವಿಗೆ ಬರುತ್ತಿತ್ತು. ಮೊನ್ನೆ, ಮೊನ್ನೆಯ ವರೆಗೂ ಮನೆಯ ಮಕ್ಕಳು ದಂಟು ಹೆಚ್ಚುವಲ್ಲಿ, ಬೆಂಡೆಯ ತೊಟ್ಟು ತರಿಯುವಲ್ಲಿ ಕೋಡು ಬಿಡಿಸಿ ಕಾಳು ಆಯುವಲ್ಲಿ ಅಮ್ಮನ ಜೊತೆಗೂಡುತ್ತಿದ್ದವು. ಜೊತೆಗೆ ಒಂದು ಪ್ರಶ್ನೆ ಹುಟ್ಟು ತ್ತಿತ್ತು .ಉತ್ತರವಾಗಿ ಒಂದು ಮಾಹಿತಿ ಮಿದುಳಿನ ಕೋಶ ಸೇರುತ್ತಿತ್ತು. ಬದುಕಿನ ರುಚಿ , ಸಹನೆ ಹೆಚ್ಚುತ್ತಿತ್ತು. ದೂರದ ಹಳ್ಳಿಗಾಡಿನ ಕೆಸರು ಗದ್ದೆಯಲ್ಲಿ ದುಡಿದು ತನಗಾಗಿ ಮಾತ್ರವಲ್ಲದೆ ಎಲ್ಲರ ಹೊಟ್ಟೆಗೆ ತಕ್ಕ ಅಹಾರವನ್ನು ಬೆಳೆದ , ಮಣ್ಣಲ್ಲಿ ಜೀವದ ಉಸಿರುಕ್ಕಿಸಿದ ವ್ಯಕ್ತಿಯ ಬಗೆಗೆ ತನ್ನಿಂತ್ತಾನೇ ಮನದಾಳದಲ್ಲೊಂದು ಸಮ್ಮಾನ ಭಾವ ಮೂಡಿ ಘನವಾಗುತ್ತಿತ್ತು .

ಇವೆಲ್ಲಾ ಯಾವ ಟ್ಯೂಶನ್ ಗಳಿಲ್ಲದೆ ನಿತ್ಯ ಬದುಕಿನ ಜೊತೆಗೇ ನಡೆದುಹೋಗುತ್ತಿದ್ದವು.ಆದರೆ ಮಾಲುಗಳು , ಮಾರ್ಟುಗಳಿಂದಲೋ ಆಯ್ದು ತಂದ ನಿರ್ವಾತ ಪ್ಲಾಸ್ಟಿಕ್ ಚೀಲದೊಳಗಿನ ರಾಜ್ಮಾ ಬೀಜಗಳನ್ನು ತಿನ್ನುವ ಮಕ್ಕಳಿಗೆ ಅವು ಫ್ಯಾಕ್ಟರಿಯಲ್ಲಿ ತಯಾರಾದ ಸಿಂಥೆಟಿಕ್ ಪದಾರ್ಥಗಳೋ ಅಥವಾ ನೆಲದಲ್ಲಿ ಬೆಳೆದವುಗಳೋ ಎಂದು ತಿಳಿಯುವುದಕ್ಕಾಗಿಯೂ ಡಿಕ್ಷನರಿಯಲ್ಲೋ, ಕಂಪ್ಯೂಟರ್ ತೆರೆದು "ಗೂಗಲ್" ನಲ್ಲೋ ಹುಡುಕುವ ಸಂದರ್ಭ ಸೃಷ್ಟಿಯಾಗುತ್ತಿದೆ. ನಿಧಾನವಾಗಿ ಅಕ್ಕರೆಯ ಮನೆಯೂಟ ಸವಿಯಲು ಕಷ್ಟವಾಗುತ್ತದೆ, ಮೆಕ್ ಡೊನಾಲ್ಡ್ ಗಳ ಪಿಜ್ಜಾ, ಬರ್ಗರುಗಳೇ ಇಷ್ಟವಾಗು ತ್ತದೆ ಮನೆಗೆ ಬರುವ , ತೆರಳುವ ಹಿರಿಯರ ಕಾಲಿಗೆರಗುವುದಾದರೂ ಅಷ್ಟೇ...ಮೇಲ್ನೋಟಕ್ಕೆ ತೀರಾ ಸಾಂಪ್ರದಾಯಿಕ ಬಳುವಳಿಯೆಂದು ಗೋಚರಿಸಬಹುದು, ಆದರೆ ಅಲ್ಲಿ ಉತ್ಪನ್ನವಾಗುವ ಭಾವದ ಧನಾತ್ಮಕ ಕಂಪನ (ಪೊಸಿಟಿವ್ ವೈಬ್ರೇಶನ್) , ಸದಾಶಯ ಮತ್ತು ಸಂಸ್ಕೃತಿ ವೈಶಿಷ್ಟ್ಯ ನಿಜಕ್ಕೂ ಉದ್ದಾತ್ತವಾದುದು. ಬಗ್ಗಿ ಎರಗುವ ಎಳೆಯನ ವಿಧೇಯತೆ , ಗೌರವ , ಬೆನ್ನು ಪೂಸಿ ಮೇಲೆತ್ತುವ ಹಿರಿಯನ ಸಜ್ಜನಿಕೆ ಸಾತ್ವಿಕ ಭಾವ ಆ ಸಂದರ್ಭಕ್ಕೇ ಒಂದು ಹಿರಿಮೆಯನ್ನು, ಸಂಸ್ಕಾರವನ್ನು ಕೊಟ್ಟು ಬಿಡುತ್ತದೆ.ಎಲ್ಲ ನಾಗರಿಕತೆಗಳಲ್ಲೂ ಇದು ಇದ್ದರೂ ಇದರ ವ್ಯಕ್ತ ಸ್ವರೂಪ (Form) ಮಾತ್ರ ಭಾರತಕ್ಕೇ ವಿಶೇಷವಾದುದು.

ಬೆಳೆವ ಮಗುವೊಂದು ತನ್ನ ಮೊದಲ ಭೌದ್ದಿಕ ಆವರಣವನ್ನು ರೂಪಿಸುವುದು ತಾನು ಬೆಳೆವ ಮನೆಯಿಂದಲೇ.ತನ್ನ ಅಮ್ಮ, ಅಪ್ಪ , ಅಜ್ಜಿ, ಅಜ್ಜ ಹೀಗೆ ತನ್ನ ಬಳಗ , ಕುಟುಂಬದ ಪರಿಚಯದಿಂದಲೇ ಆದರ ಸಹಜೀವನದ , ಸಮಾಜ ಕಲ್ಪನೆಯ ಹಂದರ ಮೈದಳೆಯುತ್ತದೆ. ಅಜ್ಜ -ಆಜ್ಜಿಯರ ಮಾಗಿದ ವಯಸ್ಸು , ಅನುಭವದ ಮಾತು , ವರ್ತನೆ ಜೊತೆಗೆ ಅವರ ವೃದ್ದಾಪ್ಯವನ್ನು ತನ್ನ ಅರಳು ಕಣ್ಣುಗಳಲ್ಲಿ ಕಂಡ ಮಗು ನಿಜವಾಗಿ ಮಾಗುತ್ತದೆ. ಅವರನ್ನು ಆರೈಕೆ ಮಾಡಿದ ತನ್ನ ಅಪ್ಪ - ಅಮ್ಮನ ಬಗೆಗೊಂದು ಗೌರವ ಭಾವ ಬೆಳೆಸಿಕೊಳ್ಳುತದೆ. ವ್ಯಕ್ತಿತ್ವದ ನಿರ್ಮಾಣಕ್ಕೆ ರುಚಿ ಮತ್ತು ಸದಭಿರುಚಿಯೇ ಪಂಚಾಂಗ.
ಬದುಕಿನ ರೀತಿ - ಬದುಕುವ ರೀತಿ, -ಸಂದರ್ಭ- ಪರಿಸರ , ಸವಲತ್ತು - ಅಂತಸ್ತು ಬದಲಾಗಬಹುದು. ಆದರೆ ರುಚಿ ಯೊಂದು ಕೆಟ್ಟು ಹೋಗದಂತೆ ನೋಡಿಕೊಳ್ಳಬೇಕು. ಅದಕ್ಕೇ ಇರಬೇಕು ಹಳೆಯ ತಲೆಮಾರಿಗರ ಮಾತಲ್ಲಿ ಆಗಾಗ "ರುಚಿ" ನಸುಳುತ್ತಿತ್ತು .. ಅವರು ಯರಾದರೊಬ್ಬ ವ್ಯಕ್ತಿಯ ಕುರಿತಾಗಿ, " ಅವನ ಸಂಪತ್ತು - ಅಂತಸ್ತು ಎಲ್ಲ ಸರಿ, ಆದರೆ ಮಾತಿಗೊಂದು ರುಚಿಯಿಲ್ಲ" ಎಂದರೆ ಮತ್ತೆ ಆ ವ್ಯಕಿಯನ್ನು ಭೇಟಿಯಾಗುವ ಮನ ವಾಗುತ್ತಿರಲಿಲ್ಲ.!
********

ನುಡಿ ಸೇವಕನಿಗೊಂದು ಹಿಡಿ ನಮನ...

ವ್ಯಕ್ತಿಯೊಬ್ಬ ಹಾಗೆ ನಿಮ್ಮೆದುರು ಬಂದು ಮಾತಿಗೆ ಶುರುವಿಟ್ಟನೆಂದರೆ, ಗೊತ್ತಿಲ್ಲದೆಯೇ ಆತನ ವ್ಯಕ್ತಿತ್ವದ ಫೋಲ್ಡರೊಂದು ನಿಮ್ಮ ಮೆದುಳಿನ ಒಳ ಕೋಶದಲ್ಲೆಲ್ಲೋ ಛಾಪಿಸತೊಡಗುತ್ತದೆ., ಆಲ್ಲಿ ಆತನ ನಗೆ ಯಿಂದ ತೊಡಗಿ, ನಿಲ್ಲುವ ನಿಲುವು, ಅಂಗಿಯ ಇಸ್ತ್ರಿ, ಆಡುವ ಮಾತಿನ ಭಂಗಿ, ನೊಡುವ ನೋಟ, ಮುಖದ ಕಣ್ಣ ಪಾಪೆಯಿಂದ ಹೊರ ಸೂಸುವ ಕಾಂತಿ ಹೀಗೆ ಹತ್ತಾರು ಅಂಶಗಳು ದಾಖಲಾಗಿ ಬಿಡುತ್ತವೆ. ಬಹುಷ ಇದಕ್ಕೇ ನಾವು ಆಂಗ್ಲ ಭಾಷೆಯಲ್ಲಿ "ಫಸ್ಟ್ ಇಂಪ್ರೆಶನ್ " ಅನ್ನುತ್ತೇವೆ. ಬಹುತೇಕ ಈ ಫೋಲ್ದರ್ ರೂಪದಲ್ಲಿ ದೊರೆವ "ವ್ಯಕ್ತಿ ಚಿತ್ರ" ನಂಬುವಂತಾದ್ದೇ ಆದರೂ ಕೆಲವೊಂದು ಬಾರಿ ಇದನ್ನೇ ನಂಬಿ ಬೆಸ್ತು ನಾವು ಬೀಳುವುದೂ ಇದೆ.

""..ಹೌದೇ, ಅವರು ಹೋದರೇ, ಇಷ್ಟು ಬೇಗ.. ಏನಾಗಿತ್ತು ಅವರಿಗೆ .."" ಎಂದು ಜನ ಕೇಳುವಂತಾ 62ರ ವಯಸ್ಸಿನಲ್ಲಿ , ನಿನ್ನೆ ನಿರ್ಗಮಿಸಿದ ಉಳ್ಳೂರುಗುತ್ತು ವಾಮನ ಶೆಟ್ಟರ ಕುರಿತಾಗಿ ಯೋಚಿಸುವಾಗ , ಸರಿ ಸುಮಾರು ಒಂದೂವರೆ ದಶಕದ ಹಿಂದೆ ಮೊದಲಾಗಿ ವೇದಿಕೆಯ ಮೇಲಿಂದ ಭಾಷಣವೊಂದನ್ನು ನೀಡುತ್ತಾ ಪರಿಚಯವಾದಾಗ ಮೊದಲ ನೋಟದ ವ್ಯಕ್ತಿತ್ವ ನಂಬಲೇಬೇಕಾದ್ದೇನು ಅಲ್ಲ ಎಂಬ ವಿಚಾರ ನಿಚ್ಚಳವಾಯಿತು.

ಪತ್ರಿಕೆಗಳು ತಮ್ಮ ವರದಿಗಳಲ್ಲಿ ಅವರಿಗೆ ಶಿಕ್ಷಣ ತಜ್ಞ ವಿಜ್ಞಾನಿ ಎಂಬ ವಿಶೇಷಣಗಳನ್ನು ನೀಡುತ್ತಿದ್ದವು. ಹಾಗೆ ನೋಡಿದರೆ, ಅವರೇನೂ ಶಿಕ್ಷಣ ಕ್ಷೇತ್ರದಲ್ಲೋ , ಪರಿಸರ ಅಥವಾ ವಿಜ್ಞಾನದ ವಿಷಯದಲ್ಲೋ ಅಂಥಾ ಪರಿಣತರಾಗಿರಲಿಲ್ಲ. ಆದರೆ ತಿಳಿದವರನ್ನು ಗೌರವಿಸುವ ಸರಳತೆ, ವಿನಯ ಇವರಲ್ಲಿತ್ತು. ಎಲ್ಲ ವಿಚಾರಗಳಲ್ಲೂ ಸಾಮಾನ್ಯ ಜ್ಞಾನವನ್ನು ರೂಢಿಸಿಟ್ಟುವ ಕೊಳ್ಳುವ ಜಾಯಮಾನ ಅವರಲ್ಲಿತ್ತು. ಹಾಗಾಗಿ ಅವರಿಗೆ ವಿಜ್ಞಾನದ ಒಗಟುಗಳ ಬಗೆಗೆ, ಸುತ್ತಲ ಪರಿಸರದ ಬಗೆಗೆ, ಶಿಕ್ಷಣದ ಬಗೆಗೆ ತನ್ನದಾದ ಸ್ಪಷ್ಟ ನಿಲುವೊಂದಿತ್ತು. ಕಾರ್ಖಾನೆಗಳ ಮಾಲೀಕರಾಗಿ "ಧಣಿ"ಯ ಅಂತಸ್ತಿದ್ದರೂ ತನ್ನ ಶಾಲೆಯಲ್ಲಿ ಗುಮಾಸ್ತರಾಗಿ, ಮಾಸ್ತರರಾಗಿ ದುಡಿವ ಸಿಬ್ಬಂದಿಯ ಸಾಹಿತ್ಯ ಪ್ರೀತಿಯನ್ನು ಗುರುತಿಸಿ ಪ್ರೋತ್ಸಾಹಿಸುವ, ಗೌರವಿಸುವ ಸಂಸ್ಕಾರ ವಿತ್ತು. ಮಹಾರಾಷ್ಟ್ರದ ಮುಖ್ಯ ಜಿಲ್ಲೆಗಳಲ್ಲೊಂದಾದ ಥಾಣೆಯ ಮಾಜಿವಾಡದಲ್ಲಿ ಕನ್ನಡಿಗರ ಶಾಲೆಯೊಂದನ್ನು ""ಕನ್ನಡ ಶಿಕ್ಷಣ ಕೊಡುವ ಶಾಲೆ "" ಯನ್ನಾಗಿಯೇ ಉಳಿಸಿಕೊಳ್ಳುವ ಹಟ, ಉಳಿಸಿಕೊಂಡ ಕೆಚ್ಚು ಅವರಲ್ಲಿತ್ತು.

ರಾಸಾಯನಿಕ ಪದಾರ್ಥಗಳನ್ನು ತಯಾರಿಸುವ ಉದ್ಯಮದಿಂದ ಕನ್ನಡದ ಕೈಂಕರ್ಯಕ್ಕಿಳಿದ ನುಡಿ ಸೇವೆಯ ಆರಂಭದ ದಿನಗಳ ಅವರ ಮಾತುಗಳಲ್ಲಿ ಕೌಶಲ್ಯಕ್ಕಿಂತಲೂ ಹೆಚ್ಚು ಉದ್ವೇಗವಿರುತ್ತಿತ್ತು... 90 ರ ದಶಕದ ಕೊನೇ ಭಾಗದಲ್ಲಿ, ಡೊಂಬಿವಲಿಯ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ಮುಂಬಯಿ ಕನ್ನಡದ ಕುರಿತಾದ ಅವರ ಮಾತಿನ ಕೊನೆಯಲ್ಲಿ , ಕಿವಿಯಲ್ಲಿ . "" ನಿಮಗೆ ಕಟ್ಟುವ ಹಟ, ಉಮೇದು, ಉತ್ಸಾಹವಿದೆ.. ಆದರೆ ಮಾತಿನಲ್ಲಿ ಉದ್ವೇಗ ವಿರದಂತೆ ನೋಡಿಕೊಳ್ಳಿ.ಹಾಗಾಗದಿದ್ದರೆ , ವಿಚಾರಗಳು ಆವೇಶದ ಒಯ್ಲಿನಲ್ಲಿ ಕೊಚ್ಚಿ ಹೋಗುತ್ತದೆ.." ಅಂದಿದ್ದೆ. ಅವರು ನಕ್ಕು ತಲೆಯಾಡಿಸಿದ್ದರು. ಕನ್ನಡದಲ್ಲಿ ಪತ್ರಿಕೆಗಳಿಗೆ ಬರೆಯುವ ಪ್ರಯತ್ನ ಅವರು ಮಾಡಿದ್ದರು . ಉದ್ವೇಗ , ಆವೇಶಗಳಿಂದ ಕನ್ನ್ನಡದ ವೇದಿಕೆಗಳಲ್ಲಿ ಆಗಾಗ ಮಾತಾಡುತ್ತಿದ್ದರು. ಆದರೆ, ಅಲ್ಲಿ ಸಿಗದ ಪ್ರಭುತ್ವವನ್ನು ಕನ್ನಡ ಭಾಷಾ ಶಿಕ್ಷಣದ ಮೇಲಿನ ಅದಮ್ಯ ಪ್ರೀತಿ, ಅಭಿಮಾನಗಳ ಮೂಲಕ ಸರಿದೂಗಿಸಿದ್ದರು. ಒಳ್ಳೆಯ , "ಆಡಳಿತದ ಚುಕ್ಕಾಣಿ ಹಿಡಿದ ಮಂದಿಯೂ"" ತಲೆದೂಗುವಂತಾ ಮರಾಠಿಯಲ್ಲಿ ಮಾತಾಡಿ, ತಾನು ಅಧ್ಯಕ್ಷನಾಗಿದ್ದ ಮಾಜಿವಾಡದ ಆದಿ ಶಕ್ತಿ ಕನ್ನಡ ಪ್ರಾಥಮಿಕ -ಪ್ರೌಢ ಶಾಲೆಗಳೆರಡಕ್ಕೂ ಸರಕಾರದ ಗ್ರಾಂಟು (ಅನುದಾನ) ದೊರಕಿಸಿಕೊಟ್ಟಿದ್ದ್ದರು. ರಾಷ್ಟ್ರೀಯ ನಾಯಕರ ದಿನಗಳು, ನಾಯಕರ ಜಯಂತಿ ಉತ್ಸವಗಳು, ಹಬ್ಬ , ಇತ್ಯಾದಿಗಳನ್ನ್ನು ಸದಾ ತನ್ನ ಅವಳಿ ಶಾಲೆಗಳಲ್ಲಿ ಆಚರಿಸುವ ಮೂಲಕ ವಾಮನ ಶೆಟ್ಟರು ಥಾಣೆಯ ಈ ಭಾಗದಲ್ಲಿ ಕನ್ನಡಿಗರ ಒಗ್ಗಟ್ಟಿಗೆ, ನಾಡು ನುಡಿಯ ಜೀವಂತಿಕೆಗೆ ಕಾರಣರಾಗಿದ್ದರು.ಕೆಡುತ್ತಿದ್ದ ಆರೋಗ್ಯದ ನಡುವೆಯೂ ಶಾಲೆಯ ಎಲ್ಲ ಕಾರ್ಯಕ್ರಮಗಳಲ್ಲಿ ಸ್ವತಹಾ ತಪ್ಪದೆ ಭಾಗವಹಿಸಿ, ಹುದ್ದೆಯನ್ನೇರಿದ ಕಾಟಾಚಾರಕ್ಕೆ ಕನ್ನಡದ ಮಾತಾಡುವ ಮಂದಿಗೆ ಮೇಲ್ಪಂಕ್ತಿಯಾಗಿದ್ದರು.

ಅವರ ನಿಲುವುಗಳನ್ನು ಆಕ್ಷೇಪಿಸುವುದು ಸುಲಭವಿರಬಹುದು . ಸಾರ್ವಜನಿಕ ಬದುಕಿಗೆ ತೋರಿದ ಬದ್ದತೆ, ತೋರಿದ ಛಲ, ನಡೆಸಿದ ನಾಡ ಸೇವೆಯ ಮಾದರಿಯನ್ನನುಸರಿಸುವುದು ಕಷ್ಟ. ತನ್ನ ನಿಲುವು ತಪ್ಪೆಂದು ತಿಳಿದಾಗ ಹಿಂಜರಿಕೆ ಇಲ್ಲದೆ ಅದನ್ನು ಬದಲಿಸಿಕೊಳ್ಳುತ್ತಿದ್ದ , ವಾಮನ ಶೆಟ್ಟರದು, ವ್ಯಕ್ತಿತ್ವ, ಯೋಚನೆ , ಕೊನೆಗೆ ಸಾಂಸಾರಿಕ ಬದುಕಲ್ಲೂ ಸ್ವಲ್ಪ ಭಿನ್ನ ರೂಪ . ಅದು ಅವರ ಸಾವಲ್ಲೂ ಪ್ರತಿಫಲಿಸಿದಂತಿದೆ. ಒಂದೊಮ್ಮೆ ತಾವು ತೀರ ಭಿನ್ನಾಭಿಪ್ರಾಯ ಹೊಂದಿದ್ದ , ದ.ಕ.ಜಿಲ್ಲೆಯ ಅಭಿವೃದ್ದ್ದಿಯ ಕಾರಣ ಹೊತ್ತು ಹುಟ್ಟಿದ ಜಯಶ್ರೀ ಕೃಷ್ಣ ಪರಿಸರ ಪ್ರೇಮೀ ಸಮಿತಿಯ ಜೊತೆಗೆ ಬಳಿಕ ಸಹಮತಕ್ಕೆ ಬಂದ ಅವರು ಅದೇ ವೇದಿಕೆಯಲ್ಲಿ ಅಂತ್ಯ ಕಂಡದ್ದು ... ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಮಾತಾಡುತ್ತಲೇ ಕುಸಿದ ಅವರ ದೇಹಕ್ಕೆ ಕರ್ನಾಟಕದ ಕರಾವಳಿಯನ್ನು ಪ್ರತಿನಿ-ಸುವ ಕ್ರಿಶ್ಚಿಯನ್, ಮುಸ್ಲಿಮ್, ಕೊಂಕಣಿ, ಬಂಟ ಬಿಲ್ಲವ , ಮೊಗವೀರ ಹೀಗೆ ಎಲ್ಲ ಜಾತಿ ಧರ್ಮಗಳ ಸಂಘದ ಪ್ರತಿನಿ-ಗಳ ಕೈಗಳು ಆಧಾರವಾದವು . ಅಪರೂಪಕ್ಕೆ ದೇಶದ ನಾಯಕರುಗಳಿಗೆ ಸಿಗುವಂತಾ ಗೌರವವಿದು.
*****
ನೇರಾ ನೇರ ಹೇಳುವುದಾದರೆ , ಮಹಾನ್ ಶಿಕ್ಷಣ ತಜ್ಞರೆಂದು ಬಿರುದುಕೊಟ್ಟು , ಮರೆತು ಬಿಡುವುದಕ್ಕಿಂತ , ಮಹಾರಾಷ್ಟ್ರದ ಮಣ್ಣಲ್ಲಿ ಕನ್ನಡ ನುಡಿಯ ಶಿಕ್ಷಣಕ್ಕಾಗಿ ತನ್ನ ಛಲ, ಶ್ರಮ, ಸಮಯ ,ಜ್ಞಾನ ಮತ್ತು ಹಣವನ್ನು ಮೀಸಲಿಟ್ಟ ಶಿಕ್ಷಣ ಪ್ರೇಮಿ , ನುಡಿ ಸೇವಕನೆಂದು ಸರಳವಾಗಿ ಕರೆದು ಅವರನ್ನು ನೆನಪಿಟ್ಟುಕೊಳ್ಳುವುದು ನನಗಿಷ್ಟ.
*************** *