Monday, March 12, 2012

ಮುಂಬಯಿ ಕನ್ನಡ : ಮೊಳೆವು - ಬೆಳೆವು - ಉಳಿವು

ಇವತ್ತು ಕನ್ನಡಕ್ಕೆ ಇನ್ನೊಂದು ವಿಸ್ತರಿತ ನಾಡಿನಂತೆ, ಕನ್ನಡ ನುಡಿ ಸಂಬಂಧಿತ ನುಡಿಯಾಧರಿತ ಚಟುವಟಿಕೆಗೆ ಇನ್ನೊಂದು ಹೆಚ್ಚುವರಿ ನಾಡಿನಂತೆ, ಕನ್ನಡದ ಸಂಸ್ಕೃತಿಗೆ ಇನ್ನೊಂದು ವೇದಿಕೆಯಂತೆ ಮೂಡಿ ಬಂದಿರುವ ಆಧುನಿಕ ಮುಂಬಯಿಯಲ್ಲಿ ಕನ್ನಡದ ನುಡಿ ಕುಡಿಯೊಡೆದ ಮಹಾನ್‌ ಗಾಥೆಗೆ ಸರಿ ಸುಮಾರು ಎರಡೂವರೆ ಶತಮಾನಗಳ ಶ್ರೀಮಂತ ಇತಿಹಾಸವಿದೆ.

ಆಧುನಿಕ ಮುಂಬಯಿಗೆ ಕನ್ನಡಿಗರ ಆರಂಭಿಕ ವಲಸೆ :

ಇವತ್ತು ಮುಂಬಯಿ ಎಂದು ಕರೆಯಲ್ಪಡುವ , ಒಂದು ಕಾಲದ "ಮುಂಬಾ ಆಯಿ" ಎಂಬ ಸಪ್ತ ದ್ವೀಪ ಸಂಕುಲಕ್ಕೆ ಕನ್ನಡಿಗರು "ವಲಸೆಯ" ಸ್ವರೂಪದಲ್ಲಿ ಬರಲಾರಂಭಿಸಿರುವುದಕ್ಕೆ ೧೭ ನೇ ಶತಮಾನದ ಉತ್ತರಾರ್ಧದ, ಅರ್ಥಾತ್‌ ೧೭೭೦ ರ ಸುಮಾರಿನ ಪುರಾವೆಗಳು ದೊರಕುತ್ತವೆ.ವಿಶೇಷವಾಗಿ ಅಂದಿನ ಮುಂಬಯಿ ಸಂಸ್ಥಾನ (ರಾಜ್ಯ) ಕ್ಕೆ ಹತ್ತಿರದ ಕರ್ನಾಟಕ ಭಾಗವಾದ , ಕೆನರಾ ಜಿಲ್ಲೆಯ ಕನ್ನಡಿಗ ಬೆಸ್ತ , ಮೊಗವೀರ ಸಮುದಾಯದ ಜನ ಈ "ಜೀವನೋಪಾಯ ವಲಸೆಯ" ಮುಂಚೂಣಿಯಲ್ಲಿದ್ದರೆಂಬುದು ಮುಂಬಯಿ ಗಝೆಟಿಯರ್‌ ಮತ್ತು ಇತಿಹಾಸಾಧ್ಯಯನಗಳಿಂದ ತಿಳಿದು ಬರುತ್ತದೆ. ೧೮ ನೇ ಶತಮಾನದ ಮಧ್ಯ ಭಾಗದಲ್ಲಿ ದೇಶದ ರೈಲು ಸಂಚಾರ ವ್ಯವಸ್ಥೆ ಮುಂಬಯಿಯಲ್ಲಿ ಆರಂಭಗೊಳ್ಳುವ ವೇಳೆಗೆ, ಇಲ್ಲಿ ಕೆನರಾ ಜಿಲ್ಲೆಯ ಸಾರಸ್ವತರೂ ಸಾಕಷ್ಟು ಸಂಖ್ಯೆಯಲ್ಲಿ ದ್ದು ಖಾನಾವಳಿಗಳನ್ನು ನಡೆಸುತ್ತಿದ್ದ, ರೈಲು ಪ್ರಯಾಣಿಕರಿಗಾಗಿ ಊಟ ಮತ್ತು ವಸತಿ ವ್ಯವಸ್ಥೆ ಮಾಡುತ್ತಿದ್ದರೆಂಬುದೂ ಗೊತ್ತಾಗುತ್ತದೆ. ಸಮುದ್ರೋತ್ಪತ್ತಿಯಿಂದ ತಮ್ಮ ಜೀವನ ನಿರುವಹಣೆಯನ್ನು ಮಾಡುತ್ತಿದ್ದ್ದ ಮೊಗವೀರ ಸಮುದಾಯಕ್ಕೆ ಅದೇ ಸಮುದ್ರಮಾರ್ಗವೇ ಮುಬಯಿ ನಗರವನ್ನು ಕಾಣಿಸಿದರೆ, ಸಾರಸ್ವತರಿಗಿದ್ದ ಗುಜರಾತ್‌ ಸಂಪರ್ಕ ಅವರನ್ನು ದಾರಿ ಮಧ್ಯೆ ಮುಂಬಯಿ ಶಹರದಲ್ಲಿ ತಡೆಯುವಂತೆ ಮಾಡಿತ್ತು .ಮೊಗವೀರರು ತಾವು ಮತ್ಸ್ಯ ಬೇಟೆಗೆ ಬಳಸುತ್ತಿದ್ದ ಸಣ್ಣ ದೋಣಿಗಳು(ಹಾಯಿ), ಮಂಜಿ, (ಮುಂದೆ ಸ್ಟೀಮರ್‌ ಬಂತು, ಆ ಬಳಿಕ ರೈಲು, ಬಸ್ಸು) ಮೂಲಕ ಮುಂಬಯಿ ಮುಟ್ಟುತ್ತಿದ್ದರು.

ಮೊಗವೀರರು ಎರೆದ ತೈಲ... ಕರ್ಕಿ ಸೂರಿ ಗಳ ಜ್ಞಾನ ಸಲಿಲ...

ಹೀಗೆ ಆಧುನಿಕ ಮುಂಬಯಿಯ ಮೊದಲ ಕನ್ನಡಿಗರಾದ ಮೊಗವೀರರು ಇಲ್ಲಿ ಕನ್ನಡದ ಹಾಗೆಯೇ ತುಳುವಿನ ಸಾಂಘಿಕ ಚಟುವಟಿಕೆಗಳ ಹರಿಕಾರರೂ ಹೌದು. ೧೮೭೮ ರಲ್ಲಿ ಶ್ರೀಮಧ್ಬಾರತ ಮಂಡಳಿಯ ಮೂಲಕ ಮೊತ್ತ ಮೊದಲ ಸಂಘಟನೆ (ಲಭ್ಯ ದಾಖಲೆಗಳ ಪ್ರಕಾರ)ಹುಟ್ಟುವಡೆಯಿತು. ಅದೇ ವೇಳೆಯಲ್ಲಿ ಉತ್ತರ ಕನ್ನಡದ ಕರ್ಕಿ ಮೂಲದ , ಸೂರಿ ಎಂಬ ಹವ್ಯಕಮನೆತನಕ್ಕೆ ಸೇರಿದ ವೆಂಕಟರಮಣ ಭಟ್ಟ ಎಂಬವರು ತಮ್ಮ ಸ್ನೇಹಿತರಾದ ಬೂದಿ ಮಹಾಬಲೇಶ್ವರ ಭಟ್ಟರ ಜೊತೆ ಸೇರಿ "ಕರ್ಕಿ ವೆಂಕಟರಮಣ ಶಾಸ್ತ್ರಿ ಎಂಡ್‌ ಕಂಪೆನಿ" ಎಂಬ ಖಾಸಗಿ ಸಂಸ್ಥೆಯೊಂದನ್ನು ರಚಿಸಿದ್ದಲ್ಲದೆ , ಆ ಮೂಲಕ ಪತ್ರಿಕೋದ್ಯೋಗ, ಸಾಹಿತ್ಯ ರಚನೆ, ಪುಸ್ತಕ ಮುದ್ರಣ ವ್ಯಾಪಾರ, ಹೀಗೆ, ಮೂರೂ ವ್ಯವಹಾರಗಳನ್ನು ನಡೆಸ ತೊಡಗಿರುವುದು ಮುಂಬಯಿಯ ಮಟ್ಟಿಗೆ ಕನ್ನಡದ ಸಾಂಘಿಕ ಚಟುವಟಿಕೆಯಾಗಿಯೂ ಗೋಚರಿಸುತ್ತದೆ.

ಇನ್ನು ರಾಜಕೀಯ ಇತಿಹಾಸವನ್ನು ಅವಲೋಕಿಸಿದರೆ ಹದಿಮೂರನೇ ಶತಮಾನದ ಅವಧಿಯಲ್ಲಿ ಪುರಾತನ ಮುಂಬಯಿಯ ಆಡಳಿತದ ಉಸ್ತುವಾರಿ ಹಿಡಿದಿದ್ದ ಶಿಲಾಹಾರರ ಭಾಷೆ ಕನ್ನಡವಾಗಿತ್ತು. ಮುಂದೆ , ಆಧುನಿಕ ಮುಂಬಯಿ ರೂಪುಗೊಳ್ಳುವ ಸ್ವಲ್ಪ ಪೂರ್ವಾವಧಿ ಕಾಲಮಾನದಲ್ಲಿ , ನಿರ್ದಿಷ್ಟವಾಗಿ ಹೇಳುವುದಾದರೆ, ಮುಂಬಯಿಯ ಪ್ರಥಮ ಗವರ್ನರ್‌ ವೌಂಟ್‌ ಸ್ಟುವರ್ಟ್‌ ಎಲ್ಪಿಸ್ಟನ್‌ ರವರಿಗೆ ೧೮೧೮ ರಲ್ಲಿ ಅರ್ಪಿಸಲಾದ ಸಾರ್ವಜᅵನಿಕ ಸತ್ಕಾರ ಕೂಟದ ಮಾನಪತ್ರದ ಒಕ್ಕಣೆ ಕನ್ನಡದಲ್ಲಿತ್ತೆಂಬುದನ್ನು ಅನುಲಕ್ಷಿಸಿ ಹೇಳುವುದಾದರೆ ಅಧುನಿಕ ಮುಂಬಯಿಗೆ ಎರಡು ಎರಡೂವರೆ ಶತಮಾನದಿಂದೀಚೆಗೆ ಕನ್ನಡಿಗರ ವಲಸೆ ಆರಂಭಗೊಳ್ಳುವ ಸಹಸ್ರವರ್ಷಗಳ ಪೂರ್ವದಲ್ಲೇ ಈ ಶಹರದಲ್ಲಿ ಕನ್ನಡದ ಬೇರುಗಳಿದ್ದವೆನ್ನುವುದು ಖಚಿತ.
೧೮೫೭ ರಲ್ಲಿ ಮುಂಬಯಿ ವಿಶ್ವ ವಿದ್ಯಾಲಯದ ಸ್ಥಾಪನೆಯಾದರೆ, ಅಲ್ಲಿ ಮ್ಯಾಟ್ರಿಕ್‌ ಗೆ ಹಿಂದಿ ಮರಾಠಿ ಗುಜರಾಥಿ ಜೊತೆಗೆ ಕನ್ನಡಕ್ಕೂ ಅವಕಾಶವಿದ್ದು , ರಾಜಕೀಯ ಕಾರಣಗಳಿಗಾಗಿ ಇದು ಆಗಾಗ ರದ್ದಾಗಿ, ಕನ್ನಡಗರ ಹೋರಾಟದಲ್ಲಿ ಮತ್ತೆ ದೊರಕುತ್ತಿತ್ತು.೧೯೦೦ ರ ಸುಮಾರಿನಲ್ಲಿ ಕನ್ನಡದ ಪ್ರಾತಸ್ಮರಣೀಯ ಹೋರಾಟಗಾರರಾದ ಶ್ಯಾಮರಾಯ ವಿಠಲ ಕಾಯ್ಕಿಣಿಯವರು ಮುಂಬಯಿ ವಿಶ್ವವಿದ್ಯಾಲಯದ ಉನ್ನತ ವ್ಯಾಸಂಗ ವಿಭಾಗದಲ್ಲಿ ಕನ್ನಡ ಕಲಿಕೆಯ ಅವಕಾಶವನ್ನು ಪುನರಪಿ ದೊರಕಿಸಿಕೊಟ್ಟರೆನ್ನುವುದು ಬಹು ಮಹತ್ವದ ಘಟನೆಯಾಗುತ್ತದೆ.
ಮೊಳೆವು ಬೆಳೆವಿನ ಹಾದಿ...
ಆದಾಗ್ಯೂ, ಆಧುನಿಕ ಮುಂಬಯಿಯಲ್ಲಿ ಕನ್ನಡದ ಮೊಳೆವು , ಬೆಳೆವು ಉಳಿವಿನ ಹಾದಿಯನ್ನು ಸ್ಥೂಲವಾಗಿ ಮೂರು ಹಂತಗಳಲ್ಲಿ ವಿಂಗಡಿಸುವುದು ಸರಿಯೆನಿಸುತ್ತದೆ. ೧೮೫೦ ರಿಂದ ೧೯೧೦ ರ ಅವಧಿಯನ್ನು ಮೊಳೆವಿಗೆ , ೧೯೨೫ ರಿಂದ ೧೯೬೦ ರ ನಡುವಣ ಅವಧಿಯನ್ನು ಬೆಳೆವಿಗೆ ಮತ್ತು ಆ ನಂತರದ ವಿಶೇಷವಾಗಿ ೧೯೬೦ ರಿಂದೀಚಿನ ಅವಧಿಯನ್ನು ಉಳಿಸುವ ಪ್ರಜ್ಞೆ ಮತ್ತು ಪ್ರಕ್ರಿಯೆ ಆರಂಭಗೊಂಡ ಕಾಲಮಾನವೆಂದು ಹೆಸರಿಸಬಹುದಾಗಿದೆ. *೧೮೭೦ ರ ದಶಕದಲ್ಲಿ ಮೊಗವೀರರ ಮೂಲಕ ಆರಂಭಗೊಂಡ ಕನ್ನಡದ ಸಂಘಟನಾ ಪ್ರವೃತ್ತಿ, ೧೮೮೩ ರ ಹೊತ್ತಿಗೆ ಇಲ್ಲಿ ಹುಟ್ಟಿದ ಪ್ರಥಮ ಕನ್ನಡಪತ್ರಿಕೆ ಸುವಾರ್ತೆ ಮುಂದೆ ಕರ್ಕಿಯᅵವರ ಕೃತಿ ಕನ್ನಡದ ಪ್ರಪ್ರಥಮ ನಾಟಕ "ಇಗ್ಗಪ್ಪ ಹೆಗ್ಗಡೆ ವಿವಾಹ ಪ್ರಹಸನ" ಇವೆಲ್ಲ ಕನ್ನಡದ ಮಟ್ಟಿಗೆ ಬುನಾದಿ ಹೆಜ್ಜೆಗಳಾಗಿ ಮೈಲಿಗಲ್ಲುಗಳಾಗಿ ದಾಖಲಾಗುತ್ತವೆ.

ಮುಂದೆ ಆವತ್ತಿನ ಕೋಟೆ, ಇವತ್ತಿನ ಫೋರ್ಟ್‌ (ಸಿಎಸ್‌ ಟಿ) ಪ್ರದೇಶದಲ್ಲಿ ಮೊಗವೀರ ಧರ್ಮಾರ್ಥ ರಾತ್ರಿ ಶಾಲೆಯನ್ನಾರಂಭಿಸುವ ಮೂಲಕ (೧೯೦೮) ಇದೇ ಕರಾವಳಿ ಕರ್ನಾಟᅵಕದಿಂದ ವಲಸೆ ಬಂದ ಮೊಗವೀರ ಜನಾಂಗ ಮುಂಬಯಿಯಲ್ಲಿ ನ ಕನ್ನಡಿಗ ವಲಸೆ ಕುಟುಂಬಗಳಿಗೆ ಶಿಕ್ಷಣ ದಾಸೋಹ ನೀಡುವ ಮಹಾ ಕಾಯಕಕ್ಕೂ ತಾನೇ ನಾಂದಿ ಹಾಡಿ ಇತಿಹಾಸದಲ್ಲಿ ತನ್ನ ಸ್ಥಾನವನ್ನು ಚಿರಗೊಳಿಸಿತು.ಮೊಗವೀರ ಧರ್ಮಾರ್ಥ ರಾತ್ರಿ ಶಾಲೆ ಶಿಕ್ಷಣವನ್ನಷ್ಟೇ ಅಲ್ಲದೆ, ಮುಂಬಯಿಯಲ್ಲಿ ಕನ್ನಡದ ನುಡಿ ಬಂಡಿಯ ಮಹಾಯಾನಕ್ಕೆ ಅಳಿವಿಲ್ಲದ ಹಳಿ ನೆಟ್ಟಿತು. ಕನ್ನಡದ ಆರಂಭಿಕ ಬೆಳೆವಿಗೆ ಸಂಘಟನೆ ಮತ್ತು ಮುದ್ರಣಾಲಯದ ತೈಲ ದೊರೆತರೆ, ಮುಂದೆ ರಾತ್ರಿ ಶಾಲೆಗಳು, ಈ ತೈಲದ ಜ್ಯೋತಿಯನ್ನಾಧರಿಸಿ ನಿಂತವು.೧೯೧೭ ರಲ್ಲಿ ಎರಡನೆಯ ರಾತ್ರಿ ಶಾಲೆ ಬಾಂಬೇ ಫೋರ್ಟ್‌ ಆರಂಭಗೊಳ್ಳುವ ವೇಳೆಗೆ ಇಲ್ಲ ಕನ್ನಡ ಕಲಿಕೆ, ಆಧ್ಯಯನ, ಅಧ್ಯಾಪನಕ್ಕೆ ಚಾಲನೆ ದೊರೆತಾಗಿತ್ತು. ಕನ್ನಡದ ಯಕ್ಷಗಾನ, ಹರಿಕಥಾ ಕಾಲಕ್ಷೇಪ ಕೂಟಗಳು, ವಲಸೆ ಬಂದ ತುಳು ಕನ್ನಡ ನಾಡಿಗೆ ಸೇರಿದ ವಿವಿಧ ಸಮುದಾಯ ಸಂಘಟನೆಗಳ ಮೊಳಕೆಗೂ ನೆಲಹದಗೊಳ್ಳತೊಡಗಿತ್ತು.೧೯೨೦ ರಿಂದಾಚೆಗೆ ಒಂದೊಂದಾಗಿ ಜಾತಿ ಸಂಘಟನೆಗಳು ನೋಂದಾವಣೆಗೊಂಡು, ಬಂಟ ಬಿಲ್ಲವ, ದೇವಾಡಿಗ ಬ್ರಾಹ್ಮಣ ಹೀಗೆ ಹತ್ತಾರು ಸಂಘಗಳು ಅಧಿಕೃತವಾಗಿ ಜನ್ಮ ತಳೆಯುತ್ತಲೇ ಕನ್ನಡದ ಚಟುವಟಿಕೆಗಳು, ಮಾಸಿಕ , ಪಾಕ್ಷಿಕ ಮೀಟಿಂಗುಗಳು ನಿರಂತರಗೊಂಡವು. ರಾತ್ರಿ ಶಾಲೆಗಳ ಸಂಖ್ಯೆ ಜಾಸ್ತಿಯಾದವು.ವಿದ್ಯಾರ್ಥಿ ವೇತನದ ಮೂಲಕ ಕನ್ನಡದ ಮಕ್ಕಳ ಕಲಿಕೆಗೆ ಸಹಾಯ ಹಸ್ತವೂ ದೊರಕುವುದರೊಂದಿಗೆ ಮಕ್ಕಳ ಕಲಿಕೆಯ ಹಾದಿ ಸುಗಮಗೊಂಡವು.
ಶಿಕ್ಷಣ ಪ್ರೇಮೀ ಹೊಟೇಲಿಗರು ಹಚ್ಚಿದ ಹಣತೆ...

ಒಂದೆಡೆ ಕನ್ನಡದ ನುಡಿ ಬೀಜ ಹೀಗೆ ಮೊಳೆಯುತ್ತಾ ಸಾಗಿದರೆ, ಅದೇ ಸುಮಾರಿಗೆ, ಅರ್ಥಾತ್‌ ೧೯೦೦ ರ ನಂತರದಲ್ಲಿ ತುಳುನಾಡಿನಿಂದ ಬಂದ ಬಂಟ, ಬ್ರಾಹ್ಮಣ ಸಾರಸ್ವತ ರು ಹೊಟೇಲು ಉದ್ಯೋಗದ ಮುಂಚೂಣಿಗೆ ಸರಿದರು. ಕಲಿಯದೆ ನಗರ ಸೇರಿ, ಪರಿಶ್ರಮವನ್ನೇ ಬಂಡವಾಳವಾಗಿಟ್ಟು ಕಾಸು ಮಾಡಿದ ಈ ಮಂದಿ, ಮುಂದಿನ ಪೀಳಿಗೆಯ ಶಿಕ್ಷಣದ ಮಟ್ಟಿಗೆ ಬಹು ಧಾರಾಳಿಗಳಾಗಿ ನುಡಿಯ ನಡೆಯಲ್ಲಿ ಬಹು ಮುಖ್ಯಪಾತ್ರವಹಿಸಿದರು.
ರಾತ್ರಿ ಶಾಲೆಗಳಲ್ಲಿ ಕಲಿತ ಮಕ್ಕಳು, ಮತ್ತೆ ತಾವು ಕಲಿತᅵ ಶಾಲೆಗಳಲ್ಲಿ ಉಚಿತವಾಗಿ ಕಲಿಸತೊಡಗಿದ್ದು, ಊರಿಂದ ಅರೆಬರೆ ಕಲಿತು ಓಡಿ ಬಂದ ಮಕ್ಕಳ ಕಲಿಕೆಗೆ ಒತ್ತಾಸೆಯಾಗಿ ನಿಂತದ್ದು, ರಾತ್ರಿ ಶಾಲೆಗಳ ಜೊತೆಗೆ ವಡಾಲದಲ್ಲಿ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯ ವತಿಯಿಂದ ಹಗಲು ಶಾಲೆ ಆರಂಭಗೊಂಡಂದ್ದು, ಕಾಲೇಜುಗಳಲ್ಲಿ ಕನ್ನಡ ಉನ್ನತ ವ್ಯಾಸಂಗದ ವಿಭಾಗಗಳು ತೆರೆಯಲ್ಪಟ್ಟದ್ದು, ಇವೆಲ್ಲ, ಒಂದಕ್ಕೊಂದು ಪೂರಕವಾಗಿ , ಕೊಂಡಿಯೋಪಾದಿಯಲ್ಲಿ ಕನ್ನಡದ ಹುಲುಸಾದ ಬೆಳೆಗೆ ಕಾರಣವಾದವು.

ಗ್ರಂಥಾಲಯ ಗಳು ...ಮುಖವಾಣಿ ಪತ್ರಿಕೆಗಳು...

ಇದರ ಜೊತೆ ಜೊತೆಗೇ, ಕನ್ನಡ ಸಂಘ ಸಂಸ್ಥೆಗಳು, ಜಾತೀ ಸಂಸ್ಥೆಗಳು ತೆರೆದ ಗ್ರಂಥಾಲಯಗಳು, ನಂತರದ ಮುಖವಾಣಿಪತ್ರಿಕೆಗಳು ಕೂಡಾ ಈ ನುಡಿಯಾತ್ರೆಗೆ ಇನ್ನಷ್ಟು ಬಲ ತುಂಬಿದವು. ಇಲ್ಲಿಯೂ ಮತ್ತೆ ಮೊಗವೀರರದೇ ಮುಂಚೂಣಿ. ಫೋರ್ಟ್‌ ಪರಿಸರದಲ್ಲಿ ಗ್ರಂಥಾಲಯಗಳನ್ನು ಕನ್ನಡದ ಓದುಗರಿಗೆಂದೇ ತೆರೆದ ಮೊಗವೀರರು ೧೯೩೯ ರಲ್ಲಿ "ಮೊಗವೀರ" ಎಂಬ ಹೆಸರಲ್ಲೇ ತಮ್ಮ ಸಮುದಾಯದ ಮುಖವಾಣಿಯಾಗಿ ಆರಂಭಿಸಿದ ಮಾಸಿಕ, ಮುಂಬಯಿ ಕನ್ನಡದ ಹೆಸರನ್ನು ಒಟ್ಟಾರೆ ಕನ್ನಡದ ಸಾಹಿತ್ಯ ಮತ್ತು ಪತ್ರಿಕಾ ಚರಿತ್ರೆಯಲ್ಲೂ ಚಿರಸ್ಥಾಯಿಗೊಳಿಸಿತೆಂದರೆ ಅಚ್ಚರಿಯಿಲ್ಲ.ಮೊಗವೀರರು ಆರಂಭಿಸಿದ ಗ್ರಂಥಾಲಯ ಮತ್ತು ಮುಖವಾಣಿಯೂ ಇತರ ಸಂಸ್ಥೆಗಳ ಮೂಲಕ ದಾಂಗುಡಿ ಇಟ್ಟಿತು. ಮೈಸೂರ್‌ ಅಸೋಸಿಯೇಶನ್‌, ಮುಂಬಯಿ ಕನ್ನಡ ಸಂಘ ಇತ್ಯಾದಿ ಕನ್ನಡ ಸಂಘಟನೆಗಳು ಒಳ್ಳೆಯ ಗ್ರಂಥಾಲಯವನ್ನು ಆರಂಭಿಸುವ ಮೂಲಕ ಕನ್ನಡಿಗರ ವಾಚನಾಭಿರುಚಿ ತಗ್ಗದಂತೆ ಕಾಪಿಟ್ಟವು. ಅಷ್ಟಲ್ಲದೆ, ಈ ಸಂಘಟನೆಗಳ ಕಚೇರಿಗಳು ಕನ್ನಡಿಗರ ಭೇಟಿ, ಪರಿಚಯ ಮತ್ತು ಮಾಹಿತಿ ಹಾಗೆಯೇ ಸಾಹಿತ್ಯ ಪರಿಚಾರಿಕೆಯ ಕೇಂದ್ರಗಳೂ ಆದವು.

ನಗರ ಉಪನಗರಗಳಲ್ಲಿ ಕನ್ನಡದಲ್ಲಿ ಪುಸ್ತಕಗಳು ಮತ್ತು ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಬಲ್ಲ ಕನ್ನಡದ , ಕನ್ನಡಿಗರ ಮುದ್ರಣಾಲಯಗಳು, ಶುದ್ದ ಕನ್ನಡದಲ್ಲೇ ನಡೆಯುವ ಶನಿಗ್ರಂಥ ಪಾರಾಯಣ ಪರಿಪಾಠ, ಯಕ್ಷಗಾನದ ತಾಳ ಮದ್ದಲೆ ಕೂಟಗಳು.. ಹೀಗೆ ಎಲ್ಲೆಡೆ ಕನ್ನಡ ಘಮ ಘಮ...

ಇನ್ನೊಂದೆಡೆ , ರಾತ್ರಿ ಶಾಲೆಗಳ ಉಛ್ರಾಯದ ಹಂತದಲ್ಲಿ , ಕನ್ನಡಿಗರ ಬೇಡಿಕೆಗೆ ಓಗೊಟ್ಟ ಮುಂಬಯಿ ನಗರ ಪಾಲಿಕೆ ಐವತ್ತರ ದಶಕದ ಉತ್ತರಾರ್ಧಕ್ಕೆ, ಕನ್ನಡ ಶಾಲೆಗಳನ್ನೇ ಆರಂಭಿಸುವ ಮೂಲಕ ಕನ್ನಡದ ನುಡಿ ಕೃಷಿ ಪೂರ್ಣರೂಪ ಪಡೆಯಿತು.ಅರುವತ್ತರ ದಶಕದಲ್ಲಿ ಮುಂಬಯಿಯ ಆಕಾಶವಾಣಿಯಲ್ಲೂ ಕನ್ನಡ ಭಾಷೆಯೊಂದು ವಿಭಾಗವಾಗಿ ಸ್ಥಾನಮಾನ ಪಡೆದರೆ, ಇತ್ತ ಮುಂಬಯಿ ವಿಶ್ವವಿದ್ಯಾಲಯಕ್ಕೂ ಪೂರ್ಣ ಪ್ರಮಾಣದ ಕನ್ನಡ ವಿಭಾಗ ದೊರೆತು ಕನ್ನಡದ ಉನ್ನತ ವ್ಯಾಸಂಗ ಸುಲಭವಾಯಿತು. ವಡಾಲದ ರಾಷ್ಟ್ರೀಯ ಕನ್ನಡ ಶಾಲೆಯಲ್ಲದೆ, ಉಪನಗರ ಚೆಂಬೂರು, ಮುಳುಂಡು,ಥಾಣೆ, ಡೊಂಬಿವಲಿ ಹೀಗೆ ಕನ್ನಡಿಗರ ಬಾಹುಳ್ಯವುಳ್ಳ ಕಡೆಗಳಲ್ಲೆಲ್ಲ, ಕನ್ನಡದ ಹಗಲು ಶಾಲೆ ಕಾಲೇಜುಗಳು ಆರಂಭಗೊಂಡವು.
ಕಾಲದ ಕರೆ...

ಒಂದೊಮ್ಮೆ ಸಾಕಷ್ಟು ಶಿಕ್ಷಣ ಪಡೆಯುವ ಮೊದಲೇ ನಾಲ್ಕೋ ಐದೋ ಕ್ಲಾಸಿಗೆ ಶಾಲೆ ಬಿಟ್ಟು ಕನ್ನಡದ ಒಳನಾಡಿನಿಂದ ಮುಂಬಯಿಗೆ ಬರುತ್ತಿದ್ದ ಮಕ್ಕಳಿಗೆ "ಕಾಲದ ಅಗತ್ಯವಾಗಿ" ಹುಟ್ಟಿಕೊಂಡ ರಾತ್ರಿ ಶಾಲೆಗಳು ಮತ್ತೆ "ಕಾಲದ ಕರೆಗೆ "ಓಗೊಡ ಬೇಕಾಯಿತು.ಅರ್ಥಾತ್‌ ಅವನತಿಯತ್ತ, ಮುಚ್ಚುಗಡೆಯತ್ತ ಸಾಗಬೇಕಾಯಿತು. ಇದಕ್ಕಾಗಿ, ಅಳುವ ಅಗತ್ಯವಾದರೂ ಕಾಣುತ್ತಿಲ್ಲ, ಕಾಲದ ನಡೆಯಲ್ಲಿ ಎಲ್ಲವೂ ಹೀಗೆಯೇ! ಅನಿವಾರ್ಯತೆ ಶೋಧಕ್ಕೆ, ಹೊಸ ಹುಟ್ಟಿಗೆ ಕಾರಣವಾದ ಹಾಗೆಯೇ , ಅನಗತ್ಯತೆ ನಿರುಪಯುಕ್ತತೆ, , ಮುಕ್ತಾಯಕ್ಕೂ ಕಾರಣವಾಗುವುದು ಸಹಜವೇ ಸರಿ!. ಇವತ್ತಿಗೂ ಮುಂಬಯಿಗೆ ಕನ್ನಡಿಗರ ವಲಸೆ ಸಾಕಷ್ಟು ಪ್ರಮಾಣದಲ್ಲಿದ್ದರೂ ಅವರೆಲ್ಲ ವಿದ್ಯಾವಂತರಾಗಿಯೇ ಬರುತ್ತಿರುವುದು ವಾಸ್ತವ. ಆದರೆ ಕನ್ನಡಿಗರಾಗಿ ನಾವಿಲ್ಲಿ ಉಳಿಯಬೇಕಾದರೆ, ಮುಂದಿನ ಪೀಳಿಗೆಯೂ ನುಡಿಯನ್ನು, ನುಡಿಯ ಮೂಲಕ ಬಿಟ್ಟು ಬಂದ ನಾಡನ್ನು, ಅಲ್ಲಿನ ಸಂಸ್ಕೃತಿ ವಿಶೇಷಗಳನ್ನು ಉಳಿಸಿಕೊಂಡು ಬರಬೇಕಾದರೆ ಭಾಷೆಯ ನಂಟು ಬೇಕೇ ಬೇಕಾಗುತ್ತದೆ, ಎನ್ನುವುದು ಬೆಳಕಿನಷ್ಟು ಸತ್ಯ!

ಈ ಹಿನ್ನಲೆಯಲ್ಲಿ ನೋಡಿದಾಗ ಮತ್ತೆ ಬೆಳಕು ಗೋಚರಿಸುವುದು ಮಾಧ್ಯಮಗಳ ಮೂಲಕ. ಮೊಗವೀರ ಪತ್ರಿಕೆಯ ಹುಟ್ಟು, ಐವತ್ತರ ದಶಕದ ನುಡಿ ಪತ್ರಿಕೆ, ನುಡಿಯ ತರುವಾಯದ ತಾಯ್ನುಡಿ ಪತ್ರಿಕೆ, ಇದಕ್ಕೆ ಇಂಬು ನೀಡಿದರೆ, ನುಡಿ ತಾಯ್ನುಡಿ ವಾನ ಪ್ರಸ್ಥಕ್ಕೆ ತೆರಳುವ ಮೊದಲೇ ಹುಟ್ಟಿಕೊಂಡ ಎಲ್ಲ ಸಮುದಾಯಗಳ ಮುಖವಾಣಿ ಪತ್ರಿಕೆಗಳು (ಮೊಗವೀರ, ಅಕ್ಷಯ, ಬಂಟರವಾಣಿ, ಪತ್ರಪುಷ್ಪ, ಗೋಕುಲವಾಣಿ , ನೇಸರು,ಸಂಬಂಧ, ಗುರುತು, ಸಾಫಲ್ಯ, ಹವ್ಯಕ.....ಹೀಗೆ ಸುಮಾರು ಹದಿನೈದಕ್ಕೂ ಹೆಚ್ಚು!) ಆಯಾಯ ಸಮುದಾಯದಲ್ಲಿ ಭಾಷೆಯ ಬಳಕೆಯನ್ನು ಜೀವಂತ ಇರಿಸುವ ಮೂಲಕ ಒಟ್ಟಂದದಲ್ಲಿ ಮುಂಬಯಿ ಕನ್ನಡದ ಉಳಿವಿಗೆ ದೇಣಿಗೆ ನೀಡುತ್ತಿವೆ.

ಕನ್ನಡದ ಭವಿಷ್ಯ ದ ಕೈ ದೀವಿಗೆಗಳಿವು....

ಸಹಸ್ರ ವರ್ಷಗಳ ಹಿಂದೆ ಕನ್ನಡ ಅರಸರ ಆಡಳಿತದಲ್ಲಿ ಕನ್ನಡದ ಪಳೆಯುಳಿಕೆಗಳನ್ನುಬಿಟ್ಟಿರುವ ಮಹಾರಾಷ್ಟ್ರದ ಮಹಾ ಪಟ್ಟಣ ಮುಂಬಯಿಯ ಆಧುನಿಕ ಸ್ವರೂಪದಲ್ಲಿ ಹೀಗೆ ಎರಡನೇ ಬಾರಿಗೆ ಕನ್ನಡದ ನುಡಿ ಮಲ್ಲಿಗೆಯಾಗಿ ಚಿಗುರಿ ಘಮಘಮಿಸಿದ ಬಳಿಕ ಅದನ್ನು ಮುಂದಿನ ಪೀಳಿಗೆಗೆ ಕಾಪಿಡುವ ಕುರಿತ ಪ್ರಜ್ಞೆ, ಆತಂಕ, ಕಳವಳ (Concern)ಈ ನಗರದ ಕನ್ನಡಿಗ ಮನಸುಗಳಲ್ಲಿ ಮೂಡಲಾರಂಭಿಸಿದ್ದು ಎಂಭತ್ತರ ದಶಕದ ಉತ್ತರಾರ್ಧದಲ್ಲಿ! ಕಳೆದು ಹೋಗುವ ಇಲ್ಲವಾಗುವ ಅಳಿದು ಹೋಗುವ ವಸ್ತು, ವಿಚಾರ, ವಿಷಯಗಳ ಕುರಿತಾಗಿ ಒಂದು ಕಾಲಘಟ್ಟದಲ್ಲಿ ಹುಟ್ಟಿಕೊಳ್ಳುವ ಆತಂಕವೇ ಅಂತಿಮವಾಗಿ ಅವುಗಳಉಳಿವಿಗೆ ಊರುಗೋಲಾಗುವುದು, ಕಾರಣವಾಗುವುದು ನಾವು ಇತಿಹಾಸದಲ್ಲಿ ಕಂಡ ಸತ್ಯ!

ಇಲ್ಲಾದರೂ ಅಂತಹದೇ ದಿಕ್ಸೂಚಿಯೊಂದು ಕಂಡು ಬರುತ್ತಿದೆ. ಭಾಷೆ, ಸಂಸ್ಕೃತಿ ಪ್ರಜ್ಞೆಯೊಂದೇ ಆಗಿದ್ದ ಕಾಲದಿಂದ ಮುಂದೊತ್ತಿ , ಬದುಕು ಕಟ್ಟಿಕೊಳ್ಳವಲ್ಲಿ ಅದೊಂದು ಅನುಕೂಲ ಸಾಧನ (Tool) ವೂ ಆಗಿ ಹೋದ ಕಾಲದಲ್ಲಿ ನಾವಿಂದು ಜೀವಿಸುತ್ತಿದ್ದೇವೆ. ಇವತ್ತು ಕಾಸರಗೋಡಿಂದ ಬಂದ ಕನ್ನಡಿಗನಿಗೆ ಎರಡು ಭಾಷೆಗಳ ಅನುಕೂಲವಿರುತ್ತದೆ. ಆತ ಕನ್ನಡದ ಜೊತೆಗೆ ಮಲಯಾಳವನ್ನೂ ಆಡಬಲ್ಲನಾದರೆ, ಬರೆಯಬಲ್ಲನಾದರೆ, ಎರಡೂ ಭಾಷೆಗಳಿಗೆ ಸಂಬಂಧಪಟ್ಟ ಅನುವಾದದ ಕೆಲಸಗಳನ್ನು ಕೊಡಮಾಡುವ ಜಾಹೀರಾತು ಸಂಸ್ಥೆಗಳು ಈ ನಗರದಲ್ಲಿವೆ. ಅರ್ಥಾತ್‌,ಭಾಷೆ ಜ್ಞಾನದ ಜೊತೆಗೆ ಹೊಟ್ಟೆ ಹೊರೆಯುವಲ್ಲೂ ನೆರವಾಗುತ್ತ್ತಿರುವುದು, ಅನ್ನದ ಹುಟ್ಟಿಗೂ ಕಾರಣವಾಗುವುದು, ಅದರ ಉಳಿವಿನಲ್ಲಿ ಧನಾತ್ಮಕ ಪಾತ್ರವಹಿಸುತ್ತದೆ. ಮುಂಬಯಿ ಕನ್ನಡಕ್ಕೆಂದೇ ಪ್ರತ್ಯೇಕವಾಗಿ ಹೇಳುವುದಾದರೆ, ಇಲ್ಲಿ ಕನ್ನಡದ ಟಿವಿ ಚಾನೆಲುಗಳಿಗೆ , ಜಾಹೀರಾತು ನಿರ್ಮಾಣ, ಸ್ವರದಾನ ಮಾಡುವ ನೂರಾರು ಏಜೆನ್ಸಿಗಳಿವೆ, ಅಲ್ಲೆಲ್ಲಾ, ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ದುಡಿಯುತ್ತಿದ್ದಾರೆ ಮತ್ತು ಅವರೆಲ್ಲ ಕನ್ನಡವನ್ನೇ ದುಡಿಸುತ್ತಾರೆ, ಹೀಗೆ ಕನ್ನಡ ಶಾಲೆಗಳ ಮಾದರಿಯಲ್ಲೇ, ಇಲ್ಲಿ ಕೂಡಾ ಭಾಷೆ ಅವರ ಅನ್ನದ ಹುಟ್ಟಿಗೆ ಕಾರಣವಾಗಿದೆ.ಭಾಷೆ ಒಂದು ಉಪಕರಣವಾದ ಈ ಸಂದರ್ಭಕ್ಕೆ ಮಕ್ಕಳ ಹೆತ್ತವರೂ ಧನಾತ್ಮಕ ಸ್ಪಂದನ ನೀಡಿದ್ದು ೭೦ ರ ದಶಕದಲ್ಲಿ, "ಮುಂಬಯಿಯಲ್ಲಿ ಬದುಕಬೇಕಾದ ತಮ್ಮ ಮಕ್ಕಳಿಗೆ" ಹಿಂದಿ ಇಂಗ್ಳೀಷ್‌ ಮರಾಠಿ ಕಲಿಸುವುದಕ್ಕೇ ಒತ್ತು ನೀಡಿದ್ದ ಅವರು ಇದೀಗ ತಮ್ಮ ಮಾತೃ ಭಾಷೆ ಕಲಿಸುವತ್ತಲೂ ಒಲವು ತೋರಿದ್ದಾರೆ.

ಪೂರ್ಣಕಾಲಿಕ ದಿನ ಪತ್ರಿಕೆಗಳು, ಮಕ್ಕಳ ತರಬೇತು ಸಂಸ್ಥೆಗಳು ...

೯೦ ರ ದಶಕದ ವರೆಗೂ ಮುಂಬಯಿಗೆ ತನ್ನದಾದ ಕನ್ನಡ ದಿನಪತ್ರಿಕೆ ದೊರಕಿರಲಿಲ್ಲ. ಆದರೆ ೯೦ ಮತ್ತ್ತು ೨೦೦೦ ದ ಮಧ್ಯೆ ಇಲ್ಲಿ ಎರಡು ಪೂರ್ಣ ಪ್ರಮಾಣದ ದಿನ ಪತ್ರಿಕೆಗಳನ್ನು ಕಾಣುವಂತಾದದ್ದು , ಕನ್ನಡ ಶಾಲೆಗಳ ಮುಚ್ಚುವಿಕೆಯಿಂದೊದಗಿದ ನಷ್ಟವನ್ನು ಸ್ವಲ್ಪ ಮಟ್ಟಿಗೆ ಭರಿಸಿದವು.ಮುಂಬಯಿ ನೆಲದಲ್ಲೇ ಹುಟ್ಟಿದ , ಮುಂಬಯಿ ವಾರ್ತೆಗಳನ್ನೇ ಪ್ರಧಾನವಾಗಿ ಮುದ್ರಿಸುವುದರಿಂದಾಗಿ ಅದಕ್ಕೂ ಹೆಚ್ಚು ಮುಂದುವರಿದು ಹೇಳುವುದಾದರೆ, ಇಲ್ಲಿ ನಡೆಯುವ ಕನ್ನಡದ, ಕನ್ನಡಿಗರ ಚಟುವಟಿಕೆಗಳನ್ನು ಬೆಳಗಾತ ಮನೆ ಮನೆಗೆ ಮುಟ್ಟಿಸುವ ಕಾರಣದಿಂದಾಗಿ ಈ ಪತ್ರಿಕೆಗಳು ಸಾಕಷ್ಟು ಪ್ರಸಾರವನ್ನೂ ಹೊಂದುವಂತಾಯಿತು. ಜತೆಗೆ, ಮುಂಬಯಿ ಕನ್ನಡಿಗ ನಿತ್ಯ ಕನ್ನಡದ ಓದು ಮತ್ತು ಕನ್ನಡ ಲಿಪಿಯ ಒಡನಾಟದಲ್ಲಿರುವಂತೆ ಇವು ಮಾಡಿದವು. ಆ ಕಾರಣಕ್ಕೇ, ಇವು ಮತ್ತು ಕನ್ನಡದ ಮಕ್ಕಳಿಗೆ ಕನ್ನಡ ಭಾಷೆ , ಸಂಸ್ಕೃತಿಯ ತಿಳುವಳಿಕೆ ನೀಡುತ್ತಿರುವ "ಕಲಾ ಜಗತ್ತು ಚಿಣ್ಣರ ಬಿಂಬ " ದಂತಹಾ ಸಂಸ್ಥೆಗಳು ಮುಂಬಯಿ ನಗರದಲ್ಲಿ ಕನ್ನಡದ ಭವಿಷ್ಯ ವನ್ನು ಕಾಯುವ ಕೈ ದೀವಿಗೆಗಳಾಗಿ ಗೋಚರಿಸಿವೆ ಎನ್ನಲಡ್ಡಿಯಿಲ್ಲ.
ಇದರ ಜೊತೆಗೆ, ನಗರದ ಮೂಲೆ ಮೂಲೆಗಳಲ್ಲಿ ಹುಟ್ಟುತ್ತಿರುವ ಕನ್ನಡಿಗ ಸಂಸ್ಥೆಗಳು, ಅವುಗಳ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಹಾಸ್ಟೆಲುಗಳು, ಸಭಾಭವನಗಳು, ವೃದ್ದಾಶ್ರಮಗಳು,ಜಾತಿ ಸಂಘಟನೆಗಳ ಸ್ಥಳೀಯ ಸಮಿತಿ (ಪ್ರಾದೇಶಿಕ) ಗಳು, ಅವು ಇಡೀ ತಿಂಗಳು, ವರ್ಷ ನಿರಂತರವಾಗಿ ನಡೆಸುತ್ತಿರುವ ಕನ್ನ್ನಡ ಕಾರ್ಯಕ್ರಮಗಳು, ಹೀಗೆ ಭಾಷೆಯ ಮೂಲಕ ನಡೆಯುವ ಚಟುವಟಿಕೆಗಳೆಲ್ಲ ಪರೋಕ್ಷವಾಗಿ ಕನ್ನಡ ಭಾಷೆಯ ಉಳಿವಿಗೆ ದೇಣಿಗೆಯನ್ನು ನೀಡುತ್ತಲೇ ಇವೆ ಎನ್ನುವುದು ನೆಮ್ಮದಿಮತ್ತು ಸಂತಸ ಎರಡನ್ನೂ ಒಟ್ಟೊಟ್ಟಿಗೇ ನೀಡುವ ವಿಚಾರ.