Thursday, April 1, 2010

ಬಸಿರ ತುಂಬ ಬದುಕ ಹೊತ್ತ ಮುಂಬಯಿಯೊಳಗೊಂದು ಇಣುಕು..

ಬದುಕು ಬಹುಮುಖಿ ಇಲ್ಲಿ ...
ಮುಂಬಾ 'ಆಯಿ'ಯಲ್ಲಿ !!

ಭಾರತದ ಕಾಸ್ಮೋಪಾಲಿಟನ್ ನಗರವೆಂಬ ಅಭಿಧಾನವುಳ್ಳ, ಮಹಾನಗರಿ ಮುಂಬಯಿಯ ಕಳೆದೊಂದು ವರ್ಷದಿಂದೀಚಿನ, ಘಟನಾವಳಿಗಳನ್ನೇ ನೋಡಿ...
ಮೊದಲು , ಬಿಹಾರಿ ಬಾಬುಗಳ ವಿರುದ್ದ ಬೊಮ್ ಬೊಮ್...
ನಂತರ, ಉತ್ತರ ಭಾರತೀಯ ಟ್ಯಾಕ್ಸಿ ಚಾಲಕ್ ಬಗಾವೋ...
ಈಗ, ಮುಂಬಯಿ 'ಮುಂಬಯಿಕರ್' ಗೆ ಮಾತ್ರ...!

ರೈಲ್ವೇ ಪರೀಕ್ಷೆ ಬರೆಯಲು ಬಂದ ಬಿಹಾರಿಗಳ ಮೇಲೆ ರೈಲು ನಿಲ್ದಾಣದಲ್ಲೇ ದಾಳಿ, ತಲೆ ಒಡೆತ. ಬಳಿಕ ಬಡಪಾಯಿ ಉತ್ತರ ಭಾರತೀಯ ಟ್ಯಾಕ್ಸಿ ಚಾಲಕರ ಮೇಲೆ ಕಂಡಲ್ಲೆಲ್ಲಾ ಹಲ್ಲೆ , ರಾತ್ರಿ ಹಗಲು ಮುಂಬಯಿ ಜನಸಾಮಾನ್ಯನ ಸಾರಿಗೆಯ ಜೀವಾಳವಾಗಿರುವ ಟ್ಯಾಕ್ಸಿ ವಾಲಾಗಳಿಗೆ ಮುಂಬಯಿ ಬಿಟ್ಟೋಡಲು ಆಜ್ಞೆ. .

ಇದೀಗ ಮುಂಬಯಿಯಲ್ಲಿ ಟ್ಯಾಕ್ಸಿ ನಡೆಸ ಬೇಕಾದಲ್ಲಿ ಮರಾಠಿ ಬರಲೇ ಬೇಕೆಂಬ 'ದಿಕ್ ತಾಟ್'! ಇಷ್ಟೇ ಯಾಕೆ, ಬಾಳ್ ಠಾಕ್ರೆ ಪಕ್ಕದ ಮನೆಯ ಅಚ್ಚ ಮರಾಠಿ ಹುಡುಗ ,ಭಾರತೀಯರೆಲ್ಲರ ಮನಗೆಲ್ಲುವ "ಕ್ರಿಕೆಟ್ ಚಿನ್ನ" ಸಚಿನ್ನನಿಗೂ 'ನೀನು ಮರಾಠಿಗನೆಂದು ಮೊದಲು ಹೇಳು' ಎಂಬ ಹುಕುಂ!

. . . ಮನ ಮುರಿದುಕೊಂಡ ಸೋದರರಿಬ್ಬರು ಮನೆಯ , ಇರುವ ಒಂದೇ ಜಹಗೀರಲ್ಲಿ ತಮ್ಮ ಹಕ್ಕು ಸ್ವಾಮ್ಯಕ್ಕಾಗಿ ಜಂಗೀ ಕುಸ್ತಿ ಕಾದುತ್ತಾರೆ.. ...ಅಲ್ಲಿ ಜಹಗೀರು ಮನೆಯ ಸ್ವಂತದ್ದು ... ಇಲ್ಲಿ ಮುಂಬಯಿ ಎಂಬ ಭಾರತದ 'ಎಲ್ಲರ ಸಲಹುವ' ನಗರದಲ್ಲಿ , ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರದಲ್ಲಿ , ರಾಜಕೀಯ ಅಧಿಪತ್ಯ' ಸಾಧಿಸುವ ಹಟದಲ್ಲಿ , ಪರಭಾಷೆ -ಪರಪ್ರಾಂತವೆಂಬ ನೆಲೆಯಲ್ಲಿ ಹಿಂದೂ -ಮುಸ್ಲಿಮ್ ಎಂಬ ನೆವದಲ್ಲಿ ಸಾರ್ವಜನಿಕ ಬದುಕಿನ ಮೇಲೆ ದಿನಕ್ಕೊಂದು ಬಗೆಯ ಹಲ್ಲೆ...ಮೂಲ ಭೂತ ಸ್ವಾತಂತ್ರದ ಮೇಲೇ ದಾಳಿ..!

'ಪುಂಗಿ ಬಜಾವೋ ..ಲುಂಗಿ ಹಠಾವೋ " ಎಂಬ ಅರುವತ್ತರ ದಶಕದ ದಕ್ಷಿಣ ಭಾರತೀಯರನ್ನು ಗುರಿಯಾಗಿರಿಸಿದ್ದ ಚಳವಳಿಗಿಂತಲೂ ಕೆಟ್ಟ ಉದ್ದೇಶ ಹೊಂದಿರುವ ಹೂಟ! ಮುಂಬಯಿ ಎಂಬ ಬಹು ಮಖೀ -ಬಹು ಆಯಾಮದ -ಬಹು ಮಜಲ ಬದುಕಿನ ಕಣ್ಣ ಪಾಪೆಗೇ ಗುರಿಯಿಡುವ ಕುಟಿಲ ಗೂಂಡಾಗಿರಿಯ ಕೂಟ! !

ಹೌದು, ಎಲ್ಲಿಯೂ ಸಲ್ಲದವ... ಎಲ್ಲೆಲ್ಲೂ ಸಲ್ಲದವ , ಇಲ್ಲಿ ಸಲುವ...!

ವಲಸೆ ಸಹಜವಾಗಿಯೇ ಮನುಷ್ಯನನ್ನು ಪರಿಶ್ರಮಿಯೂ , ಸಾಹಸಿಯೂ ಆಗಿ ರೂಪಿಸುತ್ತದೆ. ಹಾಗಾಗಿಯೇ ಇರಬೇಕು, ನೂರು ವರ್ಷಕ್ಕೂ ಹೆಚ್ಚು ಕಾಲ ಮುಂಬಯಿಗರಾಗಿ ಬದುಕಿದ "ಮರಾಠಿ ಮಾನೂಸ್" ಗಿಂತ ಆರು ವರ್ಷಕ್ಕೆ ಹಿಂದೆ ಈ ನಗರಿಗೆ ಬರಿಗೈ ಪಕೀರರಾಗಿ ಬಂದ ಮಲಯಾಳಿಯೋ, ಕನ್ನಡಿಗನೋ ತಮಿಳನೋ ಅಥವಾ ಉತ್ತರ ಭಾರತೀಯನ ಆರ್ಥಿಕ ಹುಟ್ಟುವಳಿ ,ಜೀವನದ ಸಾಧನೆ , ಯಶಸ್ಸು ದೊಡ್ಡದು. ಆದರೆ ಇದು , ಹಗಲು ರಾತ್ರಿ ಗಳೆರಡೂ ಒಂದೇ ಎಂಬಂತೆ ಎರಡು ಮೂರು ಪಾಳಿಗಳಲ್ಲಿ, ಕಾರಕೂನ, ವೈಟರ್ , ವ್ಯಾಪಾರವೆಂಬಂತೆ , ಬಗೆ ಬಗೆ ವೇಷಗಳಲ್ಲಿ ಮಾಡಿದ ಬೆವರಿನ ಫಲ ಎಂಬುದನ್ನು ಭೂಮಿಪುತ್ರರ "ಗುತ್ತಿಗೆ" ವಹಿಸಿಕೊಂಡ ಮಂದಿ ಅರಿತುಕೊಳ್ಳುವುದಿಲ್ಲವೇಕೆ? ಭಾಷೆಯ ನೆಲೆಯಲ್ಲಿ, ಉತ್ತರ ಭಾರತೀಯ ಟ್ಯಾಕ್ಸಿ ಚಾಲಕರನ್ನು ಹೊರದಬ್ಬಬೇಕೆನ್ನುವವರು, ಮಣ್ಣಿನ ಮಕ್ಕಳು ಈ ಉದ್ಯೋಗವನ್ನೇಕೆ ಇಷ್ಟಪಡುವುದಿಲ್ಲವೆಂಬುದಕ್ಕೆ ಕಾರಣವನ್ನು ಕಂಡು ಹಿಡಿಯುವುದಿಲ್ಲವೇಕೆ? ಪಟ್ನಾದಿಂದಲೋ, ಲಕ್ನೋದಿಂದಲೋ ಬಂದ "ಭಯ್ಯಾ" ಮಾರುವ ವಡಾಪಾವ್" ಸ್ಟಾಲ್ ನ ವ್ಯಾಪಾರದ ಮೇಲೆ ಕಣ್ಣಿಟ್ಟವರು, ಪ್ರತಿಯಾಗಿ ತಾವು ಆರಂಭಿಸಿದ "ಭಾಕ್ರಿ ಭಾಜೀ" ಮಾರಾಟದ "ಝುನ್ಕಾ ಬಾಕರ್ " ಕೇಂದ್ರಗಳು , "ಶಿವ್ ವಡಾ ಪಾವ್" ಯಾಕೆ ಜನರ ಕಣ್ಣಿಗೇ ಬೀಳಲ್ಲಿಲ್ಲ ವೆಂಬುದನ್ನು ತಿಳಿಯಬೇಕು...

ಬದುಕು ಬಹುಮುಖಿ ಇಲ್ಲಿ ...

ವಿಟಿ ಸ್ಟೇಶನ್ನಿನ ಪಕ್ಕದ ಫೋರ್ಟ್ ಬಳಿ ಇರುವ "ಮಹೇಶ್ ಲಂಚ್ ಹೋಮ್" ಸ್ಟಾರ್ ಗ್ರೇಡಿನ ಹೊಟೇಲೇನೂ ಅಲ್ಲ, ಆದರೆ ರುಚಿಗೆ ಮನಸೋತು , ತಮ್ಮ ತಾರಾ ಇಮೇಜುಗಳನ್ನೆಲ್ಲ ಬದಿಗಿಟ್ಟು, ಈ ಹೊಟೇಲಿಗೆ ಸದ್ದಿಲ್ಲದೆ ಭೇಟಿ ಇತ್ತು ತಮಗಿಷ್ಟವಾದ ವೆಜ್ , ನಾನ್ ವೆಜ್ , ಸೀ ಫುಡ್ ಖಾದ್ಯಗಳನ್ನು ಸವಿಯುವುದನ್ನು ಅಮಿತಾಬ್, ಜಯಾ ಬಚ್ಚನ್, ರಾಹುಲ್ ಗಾಂಧಿ, ಲಿಟ್ಲ್ ಮಾಸ್ಟರ್ ಸುನೀಲ್ ಗವಾಸ್ಕರ್ ಎಂದಿಗೂ ತಪ್ಪಿಸುವುದಿಲ್ಲ...ಅಂದ ಹಾಗೆ ಈ ಹೊಟೇಲಿನ ಮಾಲಕ ಸೂರು ಸಿ. ಕರ್ಕೇರಾ , ದಕ್ಷಿಣದ ರಾಜ್ಯವಾದ ಕರ್ನಾಟಕದ ದ.ಕ.ಜಿಲ್ಲೆಯವರು. ಇಷ್ಟೆಂದರೆ ಸಾಕೇ? ಮುಂಬಯಿ ಮರಾಠಿಗರದ್ದು ಎಂದು ಡಂಗುರ ಸಾರುವ ಶಿವ ಸೇನಾ -ನವ ನಿರ್ಮಾಣ ಸೇನಾ ದ ನಾಯಕ ಮಣಿಗಳಾದ ಉದ್ದವ್ -ರಾಜ್ ಠಾಕ್ರೆಗಳಿಗೂ ಸಮಯ ಸಿಕ್ಕಾಗಲೆಲ್ಲ ಅಮರಾಠಿಯಲ್ಲದ ಕರ್ಕೇರಾ ಅವರ ಹೋಟೇಲಿನ ರುಚಿ ಸವಿಯದಿರಲಾಗುವುದಿಲ್ಲ!

ಅಮ್ಚೀ ಮುಂಬಯಿಯ ಮೊದಲ ಕಾಪಿ ರೈಟ್" ತನ್ನದೆನ್ನುವ "ಹಿಂದೂ ಹೃದಯ ಸಾಮ್ರಾಟ" ಬಾಳಾ ಸಾಹೇಬ್ ಠಾಕ್ರೆಯವರಿಗೆ ಬಹುಕಾಲ ರೇಖಿ ಚಿಕಿತ್ಸೆ ನೀಡಿದ ಆಪ್ತ ವೈದ್ಯ ಡಾ.ವೆಂಕಟೇಶ ಪೈ ದಕ್ಷಿಣ ಕನ್ನಡದವರು.! ಅಷ್ಟೇ ಯಾಕೆ ಸದ್ಯ "ಫಯರ್" ಅಂದರೂ ಬೆಂಕಿ ಉಗುಳದ ಈ ಫೈರ್ ಬ್ರಾಂಡ್ ನಾಯಕನ ಖಾಸಗಿ ಭದ್ರತಾ ವಲಯದಲ್ಲಿದ್ದವರಲ್ಲಿ ಹೆಚ್ಚಿನವರೂ ಉಡುಪಿ -ದ.ಕ.ಜಿಲ್ಲೆ ಯ ಬಂಟ ಸಮುದಾಯಕ್ಕೆ ಸೇರಿದ "ನಂಬುಗೆಯ"ಶೆಟ್ರು ಗಳು !!

ಮುಂಬಯಿ ಕೇಂದ್ರಿತ ಬಾಲಿವುಡ್ ನ 'ಒಗರು ' - 'ರಂಗು' ಇರುವುದೇ ಮರಾಠಿಗಳಲ್ಲದ ಅಮಿತಾಬ್, ಅಕ್ಷಯ್ ರೇಖಾ, ಶ್ರೀದೇವಿ ಅಥವಾ ಮೂಲತಹ ತುಳು -ಕನ್ನಡಿಗರಾಗಿರುವ ಐಶ್ವರ್ಯಾ -ಶಿಲ್ಪಾ --ಸುನೀಲ್ ಇಂತಾ ಹತ್ತಾರು ಖ್ಯಾತ ತಾರೆಯರಿಂದ ! ಇವರನ್ನೆಲ್ಲ ಯಾವ ಮಾನದಂಡದಲ್ಲಿ ಟ್ಟು ಮಾಹಾರಾಷ್ಟ್ರೇತರರೆಂಬ"ಶಿರೋನಾಮೆ"ಯಲ್ಲಿ ಹೊರಹಾಕಬಹುದು? ಹಾಗೊಮ್ಮೆ ಮಾಡಿದ ಮೇಲೂ ಮುಂಬಯಿ , "ಮುಂಬಯಿ" ಯಾಗುಳಿದೀತೇ ? ಬಿಡಿ, ವರುಷವೆರಡರ ಹಿಂದೆ "ಉಗ್ರ"ರಾಕ್ಷಸರು ಮುಂಬಯಿಯೆಂಬ ಮುಂಬಯಿಗೇ "ಕೊಳ್ಳಿ" ಯಿಟ್ಟು ಮಾರಣವೆಸಗಿದಾಗ, ಮುಂಬಯಿಯ ದು:ಖ -ದುಮ್ಮಾನ ಕೇವಲ ಮರಾಠಿಗರದ್ದಾಗಿ ಉಳಿದಿತ್ತೇ? ಸದ್ಯ ದೇಶಾದ್ಯಂತ ವಿಚಾರವಂತ, ಸೃಜನ -ಸಂವೇದನಾಶೀಲ ಮನಸ್ಸುಗಳನ್ನು ಕಲಕಿರುವ ಪ್ರಶ್ನೆ ಇದು.

ಯಾವ ಪ್ರಾಂತ..ಏನು ಭಾಷೆ ?

ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಹಳ್ಳಿಗಳನ್ನು ವಿಭಾಗಿಸುವ ಸಣ್ಣ ಪುಟ್ಟ ನದಿಗಳಂತೆ, ಮುಂಬಯಿ ಎಂಬ ಮಹಾನಗರದ ಸುತ್ತಲ ಪುಟ್ಟ ನಗರಗಳು -ಒತ್ತಲ ಉಪನಗರಗಳ ತುಂಬ ಕರುಳ ಬಳ್ಳಿಗಳಂತೆ ಹರಡಿರುವ ಸಾವಿರದ ಸಂಖ್ಯೆಯನ್ನೂ ಮೀರುವ ಲೋಕಲ್ ರೈಲ್ವೇ ಲೈನುಗಳು...
ಅವುಗಳನ್ನೇ ನಂಬಿ ಸಾಗುವ ಕೋಟ್ಯಂತರ ಜನಗಳ ನಿತ್ಯದ ಬದುಕು ...
ಮೂರೋ ನಾಲ್ಕೋ ನಿಮಿಷಕ್ಕೊಂದರಂತೆ ಲೋಕಲ್ ಯಾನದ ಬಂಡಿಗಳು ದಾದರ್, ವಿಟಿ ಅಥವಾ ಚರ್ಚ್ ಗೇಟಿನಂತಹಾ ನಿಲ್ದಾಣದಲ್ಲಿ ಅರೆಕ್ಷಣ ನಿಂತಾಗ , ಕೆದರಿ ಗೂಡು ಬಿಟ್ಟು ಹೊರಗೋಡುವ ಜೇನು ಕೀಟಗಳಂತೆ ಬೋಗಿಗಳಿಂದ ಹೊರಕ್ಕೆ ಬೀಳುವ ಸಾವಿರಾರು ಮಂದಿಯ ಮಂದೆ...
ಇಲ್ಲಿ ಯಾರು ಬಿಹಾರಿ ಬಾಬು..ಯಾರು ಉತ್ತರದ ಭಯ್ಯಾ..ಯಾರು ದಕ್ಷಿಣದ ಅಯ್ಯ...
ನಿಜಕ್ಕಾದರೆ ಇದು ನಿತ್ಯ ಕಣ್ಣಿಗೆ ಕಾಣುವ ನಿಜದ ಭಾರತ! ಇದಕ್ಕಾಗಿಯೇ ಬಂದದ್ದ್ದು ಅಭಿದಾನ...

ಮುಂಬಯಿ ಎಂದರೆ ಅದು "ಮಿನಿ ಭಾರತ"!

ಬದುಕೊಂದೇ ಮಂತ್ರ..

ಹೊಟೇಲಿನ ಹಣದ "ಗಲ್ಲೆ' ಗೆ, ಪಾನ್ ಬೀಡಾದ ಅಂಗಡಿಯ ದೇವರ ಪಟಕ್ಕೇರಿಸಲು ಬೆಳಗಾತ "ಫೂಲ್ " ಕಟ್ಟು ತಂದಿಟ್ಟು ಹೋಗುವವ ರಾಜಸ್ತಾನಿ ಭಟ್ಟ...ಪಾವ್ ಭಾಜೀ, ವಡಾ ಪಾವ್ ಸೆಂಟರಿಗೆ ನಿತ್ಯ ಪಾವ್ ಪೂರೈಸುವವ, ಹಾಲು ಹಂಚುವವ ಯು.ಪಿ.ಯ ಭಯ್ಯಾ...
ಟಿವಿ ಜಾಹೀರಾತೊಂದು ಸದಾ ಹೇಳುತ್ತಿರುತ್ತದೆ.. "ತಿಂದರೆ ತಿಂದವರು ತಿನ್ನುತ್ತಲೇ ಇರಬೇಕು.."..ಇಂತಾ ಸ್ವಾದದ ಬ್ರಿಜ್ವಾಸಿ...ಬಿಕಾನೇರ್ ಸ್ವೀಟ್ಸ್ ಗಳಿಲ್ಲದ ...ಉತ್ತರ ಭಾರತದವರೇ ಹೆಚ್ಚಿದ್ದು, ನಡೆಸುವ ಪಾನೀ ಪೂರಿ, ಪಾವ್ ಭಾಜೀ , ವಡಾ - ಪಾವ್ ದುಕಾನ್ ಗಳಿಲ್ಲದ ಮುಂಬಯಿಯ ಬೀದಿಗಳನ್ನು ಊಹಿಸುವುದಾದರೂ ಸಾಧ್ಯವೇ....??

ಬೆಳಗೆದ್ದು , ಇಪ್ಪತ್ತೈದೋ ಮೂವತ್ತೋ ರೂಪಾಯಿ ದಿನದ ಬಾಡಿಗೆಗೆ ಪಡೆದ ತಳ್ಳುಗಾಡಿಯಲ್ಲಿ ಹದಿನೈದು ಕಿಲೋ ಈರುಳ್ಳಿ ಅಷ್ಟೇ ಬಟಾಟೆ ಕೊಂಡು ಹತ್ತಾರು ಓಣಿಗಳಲ್ಲಿ ಸಾಗುವ ಕಾಂದಾ ಬಟಾಟಾವಾಲನಿಗೂ ಇಲ್ಲಿ ತನ್ನದೊಂದು ಬದುಕಿದೆ..

ದೊಡ್ಡ ಹೊಟೆಲಿಗೆ ಅಷ್ಟೇ ದೊಡ್ಡ ಮುಂಗಡ ನೀಡಿ, ಬಾರೋ , ಹೊಟೇಲೋ ನಡೆಸುವ, ಒಂದೊಮ್ಮೆ ಮಂಗಳೂರಿನ ಮೂಲ್ಕಿಯಿಂದಲೋ ಪಡುಬಿದ್ರಿಯಿಂದಲೋ ಓಡಿ ಬಂದ ಶೆಟ್ಟರ ಹುಡುಗ ಒಳ್ಳೆಯ ವ್ಯಾಪಾರದಿಂದ ಆ ಪರಿಸರದಲ್ಲಿ "ಶೆಟ್ಟಿ ಶೇಠ್" ಆಗಿ ಜನಾನುರಾಗಿಯಾಗುತ್ತಾನೆ. ಕುಟುಂಬದ , ತನ್ನೂರ ಮಂದಿಯ..ಶಾಲೆಯ ಅಭಿವೃದ್ದಿಯ ಹರಿಕಾರನಾಗುತ್ತಾನೆ..ಅದೇ ಹೊಟೇಲಿನ ಮುಂಚಾಚಿನಲ್ಲಿ ಹೆಸರಿಗೆ "ಬೀಡಾ "ಅಂಗಡಿ ನಡೆಸುವ ಪಾನ್ ವಾಲಾ ತನ್ನ ಆರಡಿ -ಮೂರಡಿ ದುಕಾನಿನಿಂದಲೂ ತಿಂಗಳ ಮೂವತ್ತು ಸಾವಿರ ಆದಾಯಕ್ಕೆ ಕಡಿಮೆ ಇಲ್ಲದ ವ್ಯಾಪಾರ ನಡೆಸುತ್ತಾನೆ...ಉತ್ತರದ ಎಲ್ಲೋ ಹಳ್ಳಿಗಾಡಿನ ತನ್ನ ಕುಟುಂಬದ ಹೆಣ್ಣು ಮಕ್ಕಳ ಮದುವೆ ಮುಂಜಿ ನಡೆಸುತ್ತಾನೆ.. .
ಎಲ್ಲ್ಲರಿಗೂ ಇಲ್ಲಿ ಒಂದೇ ಮಂತ್ರ..ಬದುಕು..ಬದುಕು ಮತ್ತು ಬದುಕು!

'ಹುಲಿಮುಖ' ದ ನಾಯಕ . . .

ಒಂದೊಮ್ಮೆ , ಭಾರತದ ಅತಿ ಪುರಾತನ ಇಂಗ್ಲೀಷ್ ಪತ್ರಿಕೆಯಲ್ಲೊಂದಾದ "ಫ್ರೀ ಫ್ರೆಸ್ ಜರ್ನಲ್ " ಯಲ್ಲಿ ಕಾರ್ಟೂನಿಸ್ಟ್ ಆಗಿ ಕೆಲಸ ಮಾಡುತ್ತಾ, "ಭೂಮಿ ಪುತ್ರ" ರಿಗೆ ಅವರದೇ ನಾಡಲ್ಲಿ, ದ್ವಿತೀಯ ದರ್ಜೆಯ ಸ್ಥಾನಮಾನ ನೀಡಲಾಗುತ್ತಿದೆ.. ಅವರನ್ನು ಮುಖ್ಯವಾಹಿನಿಯಿಂದ ದೂರವಿಡಲಾಗುತ್ತಿದೆ ಎಂಬುದೊಂದು ವಾದವನ್ನು ಮುಂದಿಟ್ಟು ..ಅದಕ್ಕೆ ಮಧ್ಯಮ , ಕೆಳಮಧ್ಯಮ ಮರಾಠಿ ಮಂದಿಯ ಸ್ಪಂದನವಿದೆ ಎಂಬುದನ್ನು ಮನಗಂಡು , ಮುಂಬಯಿ ರಾಜಕಾರಣದ ಪುಂಡು ನಾಯಕನಾಗಿ ಬೆಳೆದು, ಬಳಿಕ ತನ್ನ ಮರಾಠಿ ದಂಡಿಗೆ "ಹುಲಿಮುಖ"ದ ನಾಯಕನಾದವರು ಈ ಠಾಕ್ರೆ !
"ಮಾರ್ಮಿಕ್" ಎಂಬ ಕಾರ್ಟೂನ್ ಪತ್ರಿಕೆಯಲ್ಲಿ ತಮ್ಮ ವ್ಯಂಗ್ಯ ರೇಖೆಗಳನ್ನು (ಕಾರ್ಟೂನ್) ಎಳೆದು , ಕೆಳಗೆ ಅಷ್ಟೇ ವ್ಯಂಗ್ಯ ಅಡಿನಾಮೆಗಳ ಮೂಲಕ ಮರಾಠಿ ಮನಸ್ಸುಗಳನ್ನು ಮುಂಬಯಿಗೆ ಅನ್ಯ ರಾಜ್ಯಗಳವರ ವಲಸೆಯ ವಿರುದ್ದ ತೊಡಗಿಸಿ ಬೆಳೆದ ಠಾಕ್ರೆ ,ಮುಂದೆ ತನ್ನನ್ನು ರಾಜ್ಯಗಳ ಉಸಾಬರಿಯಿಂದ ಮತೀಯತೆಯತ್ತ ತಿರುಗಿಸಿಕೊಂಡದ್ದು ಈಗ ಇತಿಹಾಸ.

ಆದರೆ ವಾಣಿಜ್ಯವೇ ಜೀವಾಳವಾಗಿ, ಬದುಕು ಎಲ್ಲಕ್ಕಿಂತ ಮುಖ್ಯವಾದ ನಗರಕ್ಕೆ ಸದ್ಯ "ದೊಣೆ ನಾಯಕರ ಅಪ್ಪಣೆ" ಬೇಕಾಗಿಲ್ಲವೆಂಬುದು ಇತ್ತೀಚಿನ ಎರಡೂ ಚುನಾವಣೆಗಳು ಶ್ರುತಪಡಿಸಿವೆ. ಹಾಗಾಗಿಯೇ ಈ ಹೊಸ ವರಾತ !

..ಇನ್ನೊಂದೆಡೆ , ತಾನು ಬೆಳೆದ ಗವಿಯಲ್ಲಿ "ಹುಲಿ"ಯಾಗುವ ಪ್ರಯತ್ನ ವಿಫಲವಾದಾಗ ತನ್ನದೇ ದಂಡು ಕಟ್ಟಿ , ಅದೇ ಮುದಿ ಹುಲಿಯನ್ನನುಸರಿಸ ಹೊರಟ "ಮರಿ ಹುಲಿ" ಗೆ ತನ್ನ ಪುಂಡಾಟಿಕೆಯಿಂದ ಮರಾಠಿ ಮಾನುಸ್ ನ ಮನಗೆಲ್ಲುವ ತವಕ.ಒಟ್ಟಾರೆಯಾಗಿ ಎರಡೂ ಕಡೆಯ ಮತಗಟ್ಟೆ (ಮತಿಗೆಟ್ಟ ?)ರಾಜಕಾರಣಕ್ಕೆ ಬಲಿ ಪಶು ಇದೇ "ಕಾಸ್ಮೋ" ಸ್ವರೂಪದ ಅಮ್ಚೀ ಮುಂಬೈ!
ಆದರೆ , ತಾವೇ ಸೃಷ್ಟಿಸಿದ ಇತಿಹಾಸದಿಂದಲೂ ಪಾಠ ಕಲಿಯದ ಈ "ಶಿವ ಸೇನೆ -ನವ ನಿರ್ಮಾಣ ಸೇನೆ" ಯ ಮಂದಿ, ಮತ್ತೆ ಅದೇ ಚಾಳಿಗಿಳಿದು ಭಾರತದ ಮಾದರಿ ನಗರದ ಅಂದಗೆಡಿಸಲು ಹೊರಟಿದ್ದಾರೆ. , ಪ್ರಾಂತವಾದದ ಚಳವಳಿಯಿಂದ ಹುಟ್ಟುವಡೆದು , ಕೋಮುವಾದದ ಪಂಚಾಂಗದಲ್ಲಿ ತಮ್ಮನ್ನು ಪ್ರತಿಷ್ಟಾಪಿಸಿಕೊಂಡು, ಈ "ಮುದ್ದಾ"ಗಳು ಕಾಲದ ಅ ವಾಹಿನಿಯಲ್ಲಿ ತರಗೆಲೆಗಳಾಗಿ ಬಿದ್ದು ಹೋದಾಗ , ಮತ್ತೆ "ಪ್ರಾಂತ ದ್ವೇಷ" ದ ತಳಹದಿಯಲ್ಲಿ ಎದ್ದು ನಿಲ್ಲ ಹೊರಟಿರುವುದು ಅದೇ ಇತಿಹಾಸದ ಅತಿ ದೊಡ್ಡ ವ್ಯಂಗ್ಯ!

***
ಇಷ್ಟಕ್ಕೂ, ಮುಂಬಯಿ ಯಾರದ್ದು ..?
ಇದು ಪ್ರಶ್ನೆ. ಮುಂಬಯಿ, . ಮುಂಬಯಿಯಲ್ಲಿ ಬದುಕು ನಡೆಸುವ , ಮುಂಬಯಿ ಸಲಹಿದ, ಮುಂಬಯಿಯನ್ನು ಸಲಹುವ ಎಲ್ಲ ಮುಂಬಯಿಗರದ್ದು ..ಇದು ಉತ್ತರ!
*******
ಹೆಸರೇ ಹೇಳುವಂತೆ ಮುಂಬಯಿ ಎಂಬ ಈ ಮಹಾ ಮಾಯೆ ಯೊಳಗೂ ಒಬ್ಬ "ಆಯಿ" ಇದ್ದಾಳೆ...ಬಿದ್ದವರ ಎತ್ತಿ ಸಲಹುವ, "ಕೆಟ್ಟು, ಊರು ಬಿಟ್ಟು" ಬಂದವರ ಎತ್ತಿ ತಳ್ಕೈಸುವ ಈ "ಆಯಿ"ಯನ್ನು ನಮ್ಮದು ಮತ್ತು "ನಮ್ಮದು ಮಾತ್ರಎಂದು " ಹೊಲಬು ಗೆಡಿಸುವವರ ವಿರುದ್ದವೇ ಆಂದೋಲನವಾಗಬೇಕು...
ಪೊರೆವ ಆಯಿಯ ಹೊಟ್ಟೆ ತಣ್ಣಗಿರುವಂತೆ ನೋಡಿಕೊಳ್ಳಬೇಕು..
ಅಮ್ಚೀ ಮುಂಬಯಿ" ಯ ಹೆಮ್ಮೆಯ ಸಚಿನ್ ತೆಂಡೂಲ್ಕರ್ ನಂತಹಾ ಕ್ರಿಕೆಟ್ಟಿನ ದೇವತೆ, ಆಶಾ ಭೋಂಸ್ಲೆಯಂತಾ ಸಂಗೀತ ಸಾಮ್ರಾಜ್ಞಿ ಯವರಿಂದ ಈಗಾಗಲೇ ಇಂತಾ ಧ್ವನಿ ಬಂದಿದೆ..ಇವು ಒಂದೆರಡಾಗದೆ ನೂರಾಗಬೇಕು...ನೂರು ಸಾವಿರವಾಗಬೇಕು.
***
ಶ್ರಮ ಸಂಸ್ಕ್ರುತಿಯ ಪ್ರತೀಕ...

ಬದುಕನ್ನರಸಿ ವಲಸೆ ಬಂದ ಕನ್ನಡಿಗ , ವಿಶೇಷವಾಗಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಕರಾವಳಿಯಿಂದ ಬಂದ ಕನ್ನಡಿಗ ಮಹಾರಾಷ್ಟ್ರದ "ಕಣ್ಣು"..ದೇಶದ ವಾಣಿಜ್ಯದ ಎದೆಬಡಿತವೇ ಆಗಿರುವ ಮುಂಬಯಿಯ ಮಣ್ಣಲ್ಲಿ ಹುಲುಸಾದೊಂದು ಬೆಳೆ ತೆಗೆದಿದ್ದಾನೆ. ಕರಾವಳಿಯ ಮಣ್ಣಲ್ಲಿ ಬೇಸಾಯವಿದ್ದಂತೆ, ಇಲ್ಲಿ ಹೊಟೇಲು ಉದ್ಯಮವೇ ಅವನ " ಗದ್ದೆ' ಯಾಯಿತು. ಪರಿಶ್ರಮವನ್ನೇ ಬಂಡವಾಳವಾಗಿಟ್ಟು, ಬೆವರಿನ ಬೀಜ ಬಿತ್ತಿ, ಹೋರಾಟ, ಛಲ ಮತ್ತು ಅನುಭವಗಳ ನೀರೆರೆದು ಭರ್ಜರಿ ಫಸಲನ್ನೇ ತೆಗೆದು, ತಾನು ತಲೆ ಎತ್ತಿ ನಿಂತು, ದುಡಿಮೆ ಗೆ ಸಾಥಿ ಯಾದ ನೌಕರ, ಸೇರಿಕೊಂಡ ಪಾಲುದಾರ, ಹೀಗೆ ಎಲ್ಲ ರನ್ನೂ ಏಕಕಾಲದಲ್ಲಿ ಒಟ್ಟೊಟ್ಟಿಗೇ ಪೊರೆದ ಉದ್ಯಮವಿದು.
ಪರಊರಿನ ಮಣ್ಣಲ್ಲಿ ತೋರಿದ ಸಾಹಸಕ್ಕೆ ಒಲಿದು ಬಂದ ಸಿರಿ, ದಾನಧರ್ಮಾ-ಗಳ ಮೂಲಕ, ಅರಸಿ ಬಂದ ಕೀರ್ತಿ ಈ ಎಲ್ಲವೂ ಮರಾಠಿ ಮಣ್ಣಲ್ಲಿ ಕನ್ನಡಿಗನ ವರ್ಚಸ್ಸು , ಸ್ಥಾನಮಾನವನ್ನ್ನು ಮೇಲ್ಮಟ್ಟದಲ್ಲಿರಿಸಿದೆ. ಇದೇ ಶಹರಕ್ಕೆ ಬಂದ ಇತರೆಲ್ಲರಿಗಿಂತಲೂ ಮುಂಚೂಣಿಯಲ್ಲೇ ಇರಿಸಿದೆ.

ಒಂದಷ್ಟು ಹಣದ ಬೆಂಬಲವಿದ್ದ ಮಾತ್ರಕ್ಕೇ, ಮುಂಬಯಿಯಂತಾ ಶಹರದಲ್ಲ್ಲಿ ಹೊಟೇಲು ಮಾಲಕನಾಗುವುದು ಕಷ್ಟದ ಮಾತು. ಹೊಟೇಲು ಉದ್ದಿಮೆಗಿಳಿಯ ಹೊರಟವನಿಗೆ ಇಡೀ ಉದ್ಯಮ ಪೂರ್ತಿ ಜ್ಞಾನವಿರಬೇಕಾಗುತ್ತದೆ. ಆರಂಭಿಕ ಬಂಡವಾಳವೇನೋ ಬೇಕು, ಅದಕ್ಕಿಂತಲೂ ಮುಖ್ಯವಾಗಿ, ವೈವಿಧ್ಯಮಯ ರುಚಿಯ ಗ್ರಾಹಕರ ಮನಗೆಲ್ಲಲು ಬಹುತೇಕ ಎಲ್ಲ ತಿಂಡಿ ತಿನಿಸುಗಳ ತಯಾರಿ, ಪರಿಶುದ್ದತೆ, ಮತ್ತು ಶುಚಿತ್ವದ ಅರಿವಿರಬೇಕು. ಗ್ರಾಹಕ ಸಂಬಂಧ, ಸ್ಥಳೀಯರೊಡನೆ ಉತ್ತಮ ಹೊಂದಾಣಿಕೆ, ಒಡನಾಟ ಇರಬೇಕು. ಅಷ್ಟೇ ಮುಖ್ಯ ತನ್ನ ಉದ್ಯಮದ ಯಶಸ್ಸಿನ ಹಿಂದೆ ನಿಲ್ಲುವ ನೌಕರರು . ಅದರಲ್ಲೂ ಮುಖ್ಯವಾಗಿ, ವಿವಿಧ ಭಕ್ಷ್ಯಗಳನ್ನು ತಯಾರಿಸುವ ಬಹು ಡಿಮ್ಯಾಂಡಿನ "ಮಾಲ್ ವಾಲ" ರು, "ಕೊಲ್ಲಿವಾಲ" ಎಲ್ಲರನ್ನೂ ಸಂಭಾಳಿಸಬೇಕು. ಧಣಿ - ಸಂಬಂಧದ ವ್ಯಾಖ್ಯೆ ತೆಳುವಾಗಿ ಹೊಂದಾಣಿಕೆಯೇ ಜೀವಾಳವಾಗಿರುವ ಈ ದಿನಗಳಲ್ಲಿ , ನೌಕರರರನ್ನು, ಜೊತೆಯಾಗಿ ಪ್ರೀತಿ ವಿಶ್ವಾಸದಿಂದಲೇ ಒಯ್ಯಬೇಕು. ಒಟ್ಟಾರೆಯಾಗಿ ಹೊಟೇಲು ಉದ್ಯಮಿಯೊಬ್ಬ , ಉದ್ಯಮದ ಒಳಹೊರಗನ್ನು ಬಲ್ಲ, ಪರಿಶ್ರಮಿ, ವ್ಯವಹಾರ ಕುಶಲಿಗ ಮತ್ತು ಅಪಾರ ನಾಯಕತ್ವ ಹಾಗೆಯೇ ಉದ್ಯಮಕ್ಕೆ ಹಲವು ವಿಧಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಿ ಬದುಕುವ ಸಾಹಸಿಯೂ ಆಗಿರಬೇಕು.

ಇನ್ನು ಮಂಬಯಿಯ ಸಾಮಾಜಿಕ - ಸಾಂಸ್ಕೃತಿಕ ಹೆಚ್ಚುಗಾರಿಕೆಯಾದರೂ ಅಷ್ಟೇ ..ಬೆರಳೆಣಿಕೆಯ ಮಂದಿಯನ್ನು ಬಿಟ್ಟ ಎಲ್ಲ ರಂಗಗಳಲ್ಲಿ ಮೂಡಿ ಬಂದ , ರಾಜ್ಯಕ್ಕೆ ಆ ಮೂಲಕ ದೇಶಕ್ಕೆ ಕೋಡು ಮೂಡಿಸಿದವರು ಅನ್ಯ ರಾಜ್ಯಗಳವರೇ!
ಕಲಾವಿದ ಕೆ. ಕೆ. ಹೆಬ್ಬಾರ್, ಮಹಾನ್ ಪತ್ರ ಕರ್ತ ಎಂವಿ ಕಾಮತ್, ಮಕ್ಕಳ ಲೋಕದ ಕಥಾಗುಗುಚ್ಚ ಅಂಕಲ್ ಪೈ, ಕ್ರಿಕೆಟಿಗ ರವಿ ಶಾಸ್ತ್ರಿ. ರಾಜಕಾರಣದ ಹಿರಿಯ ಜಾರ್ಜ್ ಫೆರ್ನಾಂಡೀಸ್, ಸಿನಿಮಾ ಕ್ಷೇತ್ರದ ಸಾಟಿ ಇಲ್ಲದ ಪ್ರತಿಭೆ ಮೆರೆದ ಗುರುದತ್ ಇವರು ಮರಾಠಿ ಮಣ್ಣಿಗೆ ರಾಷ್ಟ್ರ ಮಟ್ಟದ ಖ್ಯಾತಿ ತಂದವರು.

ಕನ್ನಡಕ್ಕೆ ವರವಾಗಿ ಒಲಿದ ಮುಂಬೈ.....

ಕನ್ನಡದ ಮಟ್ಟಿಗಾದರೂ ಮುಂಬಯಿಯಲ್ಲಿ ದೊರೆತ ಫಸಲು ಸಾಮಾನ್ಯವಾದುದಲ್ಲ. ಕನ್ನಡ ಸಾಹಿತ್ಯ ಲೋಕದ ಮೇರು ಕಥೆಗಾರ, "ಶಿಕಾರಿ" ಯ ಯಶವಂತ ಚಿತ್ತಾಲ, "ಬಂಡಾಯ" ದ ಬಲ್ಲ್ಲಾಳ, ಹೊಸ ತಲೆಮಾರಿನ ಮುಂಚೂಣಿಯಲ್ಲಿ ನಿಲ್ಲುವ ಜಯಂತ್ ಕಾಯ್ಕಿಣಿ, ಬಿ ಎ. ಸನದಿ, ಕಲಾವಿದರಾದ ದಿವಾಕರ್ ಶೆಟ್ಟಿ , ಸುದರ್ಶನ್ ಶೆಟ್ಟಿ, ಬಾಲಿವುಡ್ ನ ಯಜ್ಞೆಶ್ ಶೆಟ್ಟಿ, ಖ್ಯಾತಿವೆತ್ತ ರಂಗ ಕರ್ಮಿ ಸದಾನಂದ ಸುವರ್ಣ..ಈ ಎಲ್ಲರ ಪ್ರತಿಭೆಯ ಮೊಗ್ಗು ಚಿಗುರಿ ಹೂವಾದದ್ದು ಈ ಮುಂಬಯಿ ನೆಲದಲ್ಲಿ.

ಬ್ಯಾಂಕಿಂಗ್ ಕ್ಷೇತ್ರಕ್ಕೆ "ಸಹಕಾರ" ದ ಭಾಷ್ಯ ಬರೆದ ಶಾಮರಾಯ ವಿಠಲ್ .ನ್ಯಾಚುರಲ್ ಐಸ್ ಕ್ರೀಮಿನ ಕಾಮತರು, ಚಿತ್ರ ನಿರ್ಮಾಪಕ , ಉದ್ಯಮಿ ಮನಮೋಹನ್ ಶೆಟ್ಟಿ, ಆಲ್ ಕಾರ್ಗೋ ಓಬಲ್ ಶಶಿ ಕಿರಣ್ ಶೆಟ್ಟಿ, ಇವರೆಲ್ಲ ತಮ್ಮ ನೆಲೆ - ಬೆಲೆ ಕಂಡುಕೊಂಡದ್ದ್ದು ಇದೇ ಮುಂಬಯಿಯಲ್ಲಿ! ಖ್ಯಾತ ಪತ್ರಕರ್ತ ಸಂತೋಷಕುಮಾರ ಗುಲ್ವಾಡಿ, ಪ್ರಸಿದ್ದ ಛಾಯಾಗ್ರಾಹಕ, ಶಿವರಂಜನ್ ಗುಲ್ವಾಡಿ ತಮ್ಮ ಪ್ರತಿಭೆಯ ಪರದೆ ಸರಿಸಿದ್ದು ಇಲ್ಲಿಂದಲೇ.
ಮೊನ್ನೆ ಮೊನ್ನೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಸಿನಿಮಟೋಗ್ರಾಫರ್ ವಿಕೆ ಮೂರ್ತಿ ಎಲ್ಲರೂ ಇಲ್ಲಿಯವರೇ.

ಕನ್ನಡದ "ಇನ್ನೊಂದು ನಾಡು". . .

ಹಾಗೆ ನೋಡಿದರೆ, ಕಳೆದೊಂದೂವರೆ ಶತಮಾನದಲ್ಲಿ ಕನ್ನಡಕ್ಕೆ ಆರ್ಥಿಕ, ಸಾಮಾಜಿಕ ಸಾಮುದಾಯಿಕ ಏಳ್ಗೆ ಗೆ ವರದಾನವಾಗಿ ನಾಡು ಮುಂಬೈ ಎಂದರೂ ಅತಿಶಯೋಕ್ತಿಯಿಲ್ಲ. ಕನ್ನಡದ ಒಳನಾಡಿನಲ್ಲಿ ಶತಮಾನಗಳಿಂದ ಸಾಮಾಜಿಕ ಮೇಲು -ಕೀಳಿನ ಹಂದರದಲ್ಲಿ ಪ್ರಗತಿಯಿಂದ ವಂಚಿತವಾಗಿದ್ದ ಶೋಷಿತ ಸಮುದಾಯಗಳು ಅಭಿವೃದ್ದಿಯ ಬೆಳಕನ್ನು ಕಾಣುವಲ್ಲೂ ಮುಂಬಯಿ ಒಂದು ಬಲವಾದ ಹೇತು. ಹೀಗಾಗಿಯೇ ಇರಬೇಕು ಅಂತಾ ಸಮುದಾಯದಿಂದಲೇ ಇವತ್ತು ಖ್ಯಾತಿ ಪಡೆದ ಭಾರತ್ ಕೋಪರೇಟಿವ್ ಭ್ಯಾಂಕ್ -ಮೊಗವೀರ ಬ್ಯಾಂಕ್ ಹುಟ್ಟಿ ಉಚ್ರಾಯದಲ್ಲಿ ಸಾಗಿದೆ. ಕನ್ನಡದ ಮೊದಲ ನಾಟಕ ವೆಂದು ತಿಳಿಯಲಾಗುವ "ಇಗ್ಗ್ಗಪ್ಪ ಹೆಗ್ಗಡೆ ವಿವಾಹ ಪ್ರಸಂಗವು " ವನ್ನು ಕೊಟ್ಟ ಹೆಗ್ಗಳಿಕೆ ಮುಂಬಯಿಯದ್ದು !ಯುಗದಮಾನವ ಕಾರಂತರ ಬಹಳಷ್ಟು ಸಾಹಿತ್ಯ ಸೃಷ್ಟಿ --ಯಕ್ಷಗಾನದ ಬ್ಯಾಲೆಗೆ , ಕಾದಂಬರಿ ಕ್ಷೇತ್ರದ ದೈತ್ಯ ಬೈರಪ್ಪನವರ ಕೃತಿ ಸೃಷ್ಟಿಗೆ ಇದು ವೇದಿಕೆಯಾಗಿದೆ.

ಪಾರಸ್ ರೋಡಿನ "ಪಾನ್ ಬೀಡಿ" ವಾಲ..
ಪೆರ್ಮುದೆಯ ಅಡಿಕೆ ತೋಟಗಾರ..

ಮುಂಬಯಿಯ ಗ್ರಾಂಟ್ ರೋಡ್ ರೈಲ್ವೇ ನಿಲ್ದಾಣದ ಪಕ್ಕದಲ್ಲಿ ಡ್ರೀಮ್ ಲ್ಯಾಂಡ್ ಥಿಯೇಟರ್ . ಸಮೀಪದ ಪಾರಸ್ ರೋಡ್ ಬದಿಯ ಲ್ಲೊಂದು ಪಾನ್ ಬೀಡಿ ಶಾಪ್. ಅಳೆದು , ಎಳೆದು ನೋಡಿದರೂ ನಾಲ್ಕು ಫೀಟು - ಏಳು ಫೀಟು ಉದ್ದಗಲವನ್ನು ಮೀರದ ಈ ಶಾಪಿನ ಮಾಲಕ ಯೋಗೀಶ್ ಶೆಟ್ಟಿ ಮುಂಬಯಿ ಭಾಷೆಯಲ್ಲಿ "ಯೋಗೀ ಶೇಟ್" . ದಿನವೊಂದಕ್ಕೆ ಇಪ್ಪತ್ತು ಸಾವಿರಕ್ಕೆ ಮಿಕ್ಕಿದ ವ್ಯಾಪಾರವಿರುವ ಈ ಸಣ್ಣ ಪೆಟ್ಟಿಗೆಯಾಕಾರದ ಅಂಗಡಿಯ ಮಾಲಿಕ ಒಂದರ್ಥದಲ್ಲಿ ಶೇಟ್ ಹೌದು.ಬಾಡಿಗೆ ಕಳೆದು ತಿಂಗಳ ಎರಡು ಲಕ್ಷದ "ಕಮಾಯಿ" ಯಿಂದಾಗಿ, ಅವರು ತನ್ನ ಹುಟ್ಟೂರು ಪೆರ್ಮುದೆಯಲ್ಲಿ ಖಂಡಿಗಟ್ಲೆ ಅಡಿಕೆ ಬೆಳೆವ ತೋಟದ ಸೇಠ್!

ಚೋರ್ ಬಜಾರ್ ಎಂಬ ಮಾಯಾ ಬಜಾರ್!

ಮುಂಬಯಿಗೆ ಭೇಟಿ ಕೊಟ್ಟವರು, ಭೇಟಿ ಕೊಡದವರೂ , ಕೂಡಾ ನೋಡಬಯಸುವ ಒಂದು ಜಾಗ ಚೋರ್ ಬಜಾರ್...ಇಲ್ಲಿ ,ಏನುಂಟು ಏನಿಲ್ಲ ಹೇಳಿ? ಹೇಳಿ ಕೇಳಿ ಇದು ಚೋರ್ ಬಜಾರ್. ನಿಮ್ಮ ಮನೆ, ಅದರ ಒಳ ಶೃಂಗಾರ , ಹೂರಣ ---ಓರಣ ಹೆಚ್ಚಿಸುವ ಎಲ್ಲ ಡೆಕೊರೇಟಿವ್ ವಸ್ತುಗಳು, ಎಲ್ಲ ಹೊಸ -ಹಳೆಯ ವಸ್ತುಗಳ,ಬಿಡಿ ಭಾಗಗಳು , ವಿಶೇಷವಾಗಿ ಹಳೆಯ ಉಪಕರಣಗಳ , ಪ್ರಸ್ತುತ ಮಾರುಕಟ್ಟೆಯಲ್ಲಿ ದೊರೆಯದ ವಸ್ತು ದೊರಕುವುದೇ ಚೋರ್ ಬಜಾರಿನ ವಿಶೇಷತೆ. ಅದು ಬ್ರಿಟೀಷರ ಕಾಲದ ಹಾರ್ಮೋನಿಯಂ ನ ಕೀ ಬೋರ್ಡು ತಂತಿಗಳಿರಬಹುದು, ಗ್ರಾಮೋಫೋನ್ ನ ಪ್ಲೇಟುಗಳಿರಬಹುದು! ಹಾಗಂತ ಇದು ಕಂಪೆನಿಯ ಲೇಬಲ್ ಇದ್ದು ದೊರಕುವ ವಸ್ತುಗಳಲ್ಲ. ಎಲ್ಲ್ಲೋ , ಯಾರೋ ಹಾರಿಸಿದ - ಎಗರಿಸಿದ ಮಾಲು ಗಳೂ ಇರಬಹುದು. ಚೋರ್ ಬಜಾರ್ ನಲ್ಲಿ ಬಹಳಷ್ಟು "ಚೌಕಾಶಿ" ಮಾಡಿ, ಅತಿ "ಅಗ್ಗ"ಕ್ಕೆ ಖರೀದಿಸಿದ ಒಂದು ಚೆಂದದ ಬೆಳ್ಳಿಯ ಫೋಟೋ ಪ್ರೇಮ್ ನ್ನು ಒಬ್ಬರು ಹೆಂಡತಿಗೆ ತೋರಿಸಿ ಕೇಳಿದರು, ಹೇಗಿದೆ ಕಣೇ? "" ಅಬ್ಬಾ, ..ಎಲ್ಲ್ಲಿ ಸಿಕ್ತು ರೀ..ಎಷ್ಟು ವರ್ಷ ಆಯ್ತಲ್ಲಾ ನಮ್ಮ ಮದುವೆ ಫೋಟೋದ ಬೆಳ್ಳಿ ಫ್ರೇಮು ಕಳೆದು ಹೋಗಿ... ಮನೆಯಿಂದಲೇ ಕಳ್ಳರು ಕದ್ದೊಯ್ದರಲ್ಲಾ.. ಕಳ್ಳನೂ ಸಿಕ್ಕಿದ್ನೇನ್ರೀ..? ಅಂದಳಂತೆ ಹೆಂಡತಿ! ಇದು ಚೋರ್ ಬಜಾರ್ ಮಹಿಮೆ ! ಮುಂಬಯಿಯ ವಿಟಿ ಸಮೀಪ ಶಾಫಿ ಮಸ್ಜಿದ್ ಬಳಿ ಈ ಚೋರ್ ಬಜಾರ್ ಇದೆ. "ಹಳೆಯ ಸಾಮಾನುಗಳ ತಿಜೋರಿ" ಎಂದು ಕರೆಯಲ್ಪಡುವ ಈ ಬಜಾರಿಗೊಮ್ಮೆ ಭೇಟಿಕೊಡಲೇ ಬೇಕು, ನಿಮ್ಮ ಬ್ಯಾಗು , ಮೈ ಕೈಗಳ ಆಭರಣಗಳ ಮೇಲೆ "ನಿಗಾ" ಇರಿಸಿ !

ಯಕ್ಷಕಲಾವಿದರ 'ಮನಿ ಬ್ಯಾಂಕ್"..

ಈ ಮುಂಬಯಿ ಯಕ್ಷಗಾನ ಮೇಳಗಳ "ತಿರುಗಾಟ "ಕ್ಕೆ ಶತಮಾನೋತ್ತರ ಇತಿಹಾಸವಿದ್ದ್ದರೂ ನಮ್ಮ ಕರಾವಳಿಯ ಯಕ್ಷ ಕಲಾವಿದರ ಅರ್ಥಿಕ ಬದುಕು ತವರಲ್ಲಿ ಎಂದೂ ಸಮೃದ್ದಿಯನ್ನು ಕಂಡದ್ದಿಲ್ಲ. ಬೇಸಿಗೆ ಪೂರ್ತಿ ಊರು - ಹಳ್ಳಿ ಸುತ್ತಿ , ರಾತ್ರಿ ಪೂರ್ತಿ ಕುಣಿದ ಯಕ್ಷ ಕಲಾವಿದರ ನಿಜದ ದಣಿವಾರಿದ್ದು , ಆರೇಳು ದಶಕಗಳಿಂದ ಮುಂಬಯಿ ಕನ್ನಡಿಗನ ಅಕ್ಕರೆ - ಅಭಿಮಾನ , ಆದರ ದೊರೆತ ಮೇಲೆಯೇ.. ಮಳೆಗಾಲ ಪೂರ್ತಿ ಊರಿನ ಬಹುತೇಕ ಎಲ್ಲ ಮೇಳಗಳನ್ನು ಬರಮಾಡಿಕೊಂಡು, ಇಲ್ಲಿ ನ ಹವಾ ನಿಯಂತ್ರಿತ ಹಾಲುಗಳಲ್ಲಿ ಪ್ರದರ್ಶನ ಏರ್ಪಡಿಸಿದ ಮುಂಬಯಿ ಕನ್ನಡಿಗರು, ನಿಜಕ್ಕೂ ಯಕ್ಷಗಾನದ ಉಳಿವಿಗೆ, ಬೆಳೆವಿಗೆ , ಮುಖ್ಯವಾಗಿ ಕಲಾವಿದರ ಉಳಿವಿಗೆ ಕಾರಣ ಕರ್ತರು. ಪ್ರದರ್ಶನದ ವೀಳ್ಯ ಕೊಟ್ಟು , ಕಲಾವಿದ ಪ್ರತಿಭೆ ಗುರುತಿಸಿ ,ಸನ್ಮಾನದ ಶಾಲುತೊಡಿಸಿ, ಕೈಗೆ ಚಿನ್ನದುಂಗುರ ಕೊಡಿಸಿ ತಾವೂ ಧನ್ಯತಾಭಾವ ಪಡೆದುಕೊಂಡ , ಕಲಾವಿದರ ಮಕ್ಕಳ ಮದುವೆ ಮುಂಜಿಗೆ ಲಕ್ಷಗಟ್ಟಳೆ ನೀಡಿದ ಹೊಟೇಲು ಉದ್ಯಮಿಗಳೆಷ್ಟೋ ...ಎಲ್ಲ ಸಂಶೋಧನೆಗೆ ಆಹಾರವಾಗಬಲ್ಲ ಸಂಗತಿಗಳು. ಸಂಶೋಧನಾತ್ಮಕವಾಗಿಯೂ ಯಕ್ಷಗಾನದ ಕುರಿತಾಗಿ ಘನ ಸಮ್ಮೇಳನಗಳು, ವಿಚಾರ ಮಂಥನಗಳು , ಇಲ್ಲಿ ನಿರಂತರ ನಡೆಯುತ್ತಲೇ ಇವೆ.ಪ್ರಸಂಗ, ಪೀಠಿಕೆ ಸಾಹಿತ್ಯಗಳು ಬೆಳಕು ಕಾಣುತ್ತಲೇ ಇವೆ. ಕನ್ನಡ ಸ್ನಾತಕೋತ್ತ್ತರ ಶಿಕ್ಷಣಕ್ಕೆ ಸಂಬಂ-ಸಿ ಅರ್ಧ ಶತಮಾನಕ್ಕೂ ಮಿಕ್ಕಿದ ಇತಿಹಾಸ ಹೊಂದಿರುವ ಮುಂಬಯಿ ವಿಶ್ವ ವಿದ್ಯಾಲಯವೂ ಕನ್ನಡದ ಕೈಂಕರ್ಯದಲ್ಲಿ ಹಿಂದೆ ಬಿದ್ದಿಲ್ಲ. ಕನ್ನಡ ಚಿಂತನ , ಸಂಶೋಧನ, ಪುಸ್ತಕ ಪ್ರಕಾಶನ ಇಲ್ಲಿ ನಡೆದೇ ಇದೆ.

ಬದಲಾಗುತ್ತಿದೆ ಧಾರಾವಿ ...!

ಎಲ್ಲೆಂದರಲ್ಲಿ ಹರಿವ ಕೊಳಚೆ ... ಮಾಂಸಕ್ಕಾಗಿ ಕಡಿದ ಅಡು, ದನಗಳ ಕಿವಿ , ಮೂಗು , ಅವಯವಗಳ ಹೊತ್ತು ರಸ್ತೆಯಲ್ಲೇ ಸಾಗುವ ರಾಡಿ ಕರಿ ನೀರು...ಮುಖಕ್ಕೆ ರಾಚುವ ಧೂಳು... ಕಣ್ಣಿಗೆ ಕವಿಯುವ ಹೊಗೆ "ರಸ್ತೆ "ಎಂಬ ತೋಡುಗಳ ಬದಿಯಲ್ಲೇ ಎಮ್ಮೆ ಯ ಚರ್ಬಿಯನ್ನು ಕಬ್ಬಿಣದ ಸಲಿಕೆಗೆ ಸುತ್ತಿ ಬೆಂಕಿಯಲ್ಲಿ ಕಾಯಿಸಿ ಮಾರುವ ತಮಿಳು ಹುಡುಗರು...ಅವರ ಮೈ ಮುತ್ತುವ ಸೊಳ್ಳೆಗಳ ಸೈನ್ಯ...ಮೈಗೆ ಚೊಣ್ಣದ ಹಂಗೂ ಇಲ್ಲದೆ ಓಡಾಡುವ ಗುಡಿಸಲ ಮಕ್ಕಳು....ಹೀಗೆ ಧಾರಾವಿಯೊಳಗೊಂದು ಮನೆಯನು ಮಾಡಿ ಕೊಳಚೆಗಂಜಿದೊಡೆಂತಯ್ಯ...ಇದು ದಶಕದ ಹಿಂದಿನ ಮಾತು. ಹೌದು, ಏಶ್ಯಾದಲ್ಲೇ ಅತಿ ದೊಡ್ಡ ಕೊಳೆಗೇರಿ ಎಂಬ ಕುಖ್ಯಾತಿ ಪಡೆದಿದ್ದ ಮುಂಬಯಿಯ ಕರುಳ ಬಳ್ಳಿ ಧಾರಾವಿ ಬದಲಾಗುತ್ತಿದೆ. ಪ್ರಧಾನಿಯಾಗಿದ್ದ ಕಾಲಕ್ಕೆ ರಾಜೀವ್ ಗಾಂ- ಘೋಷಿಸಿದ್ದ ಎಂಟುನೂರು ಕೋಟಿ ಗಳ ಧಾರಾವಿ ಡೆವೆಲೊಪ್ ಮೆಂಟ್ ಪ್ಲಾನ್ ಮೂಲೆ ಸೇರಿದರೂ , ಇದೀಗ ಸ್ಥಳೀಯ ಸರಕಾರ ಮತ್ತೆ ಹೊಸದಾಗಿ ಧಾರಾವಿಯ ಮುಖ ಬದಲಿಸುವ ಯೋಜನೆಯಲ್ಲಿ ಕೆಲಸ ಮುಂದುವರಿಸಿದೆ. ಸಯನ್ , ಮಾಟುಂಗಾ ಮಾಹಿಮ್ ಮತ್ತು ಬಾಂದ್ರಾ ಎಂಬ ಮುಂಬಯಿಯ ಎದೆಬಡಿತವಿರುವ ನಾಲ್ಕು ನಗರ ಸಮುಚ್ಚಯದ ನಡುವೆ ಹಲವು ವರ್ಷ ತಣ್ಣಗೆ ಕೊಳಚೆಯಾಗಿ ಮಲಗಿದ ಧಾರಾವಿ ಯತ್ತ ಹೊಸ ಬೆಳಕು ಹರಿದಿದೆ. ಈಗ ಬಿಲ್ಡರುಗಳ ಪಡೆ ಅತ್ತ ಸಾಗಿದೆ. ಬೆಂಕಿ ಪೊಟ್ಟಣದಾಕಾರದ ಕೊಳಚೆಗಳೂ ಹತ್ತು ಲಕ್ಷಕ್ಕೆ ಕಮ್ಮಿ ಇಲ್ಲದಂತೆ ಬಿಕರಿಯಾಗುತ್ತಿವೆ. ಒಮ್ಮೆ "ಬಿಲ್ಡಿಂಗ್" ಎದ್ದು ನಿಂತರೆ ಅವುಗಳ ಬೆಲೆ ಕೋಟಿಯ ಲೆಕ್ಕಕ್ಕೇರಿ ಬಿಡುತ್ತದೆ.

ಮುಂಬಯಿ ಕೇವಲ ಮರಾಠಿಗನಿಗಾದರೆ....

1930 -40 ರ ದಶಕದ ವರೆಗೂ ಭಾಕ್ರಿ , ಉಸಳ್ ಪಾವ್, ಮಿಸಳ್ ಪಾವ್, ಪೂರಣ್ ಪೋಳಿ ಗೆ ಸೀಮಿತವಾಗಿದ್ದ ಮುಂಬಯಿ ಹೊಟೇಲು ಉದ್ಯಮಕ್ಕೆ ಬಗೆ ಬಗೆಯ ದಕ್ಷಿಣ - ಉತ್ತರದ ಖಾದ್ಯ , ವೈವಿದ್ಯವಾದ ಖಾರ , ಸಿಹಿ ತಿಂಡಿ ತಿನ್ನಿಸುಗಳು,ದೋಸೆ, ಇಡ್ಳಿ, ಎಲ್ಲಕ್ಕೂ ಮಿಗಿಲಾದ ಸ್ವಚ್ಚ -ನಿರ್ಮಲವಾದ ಉಪಾಹಾರ ಪದ್ದತಿಯನ್ನು ಪರಿಚಯಿಸಿದವರೇ ಕರಾವಳಿಯ ಕನ್ನಡಿಗರು ! ಇವತ್ತು ಮಹಾರಾಷ್ಟ್ರದ ಬಹುತೇಕ ಮರಾಠಿ ಮಂದಿಯ ಆಹಾರ ಇದೇ ನಮ್ಮ ಹೊಟೇಲಿನ ಆಹಾರ ವೈವಿದ್ಯಗಳು.

ಇನ್ನು ಸರಕಾರದ ಬೊಕ್ಕಸ ನಿಂತಿರುವುದೇ ಈ ಹೊಟೇಲಿಗರು , ಬಾರು , ಫಾಸ್ಟ್ ಫುಡ್ ಮಾಲಕರು ಪಾವತಿಸುವ ವಿವಿಧ ರೀತಿಯ ಭಾರೀ ಮೊತ್ತದ ತೆರಿಗೆಯಲ್ಲಿ. ಲೈಸೆನ್ಸ್ ದರ ಹೆಚ್ಚಾಗುವ ಭೀತಿಯಲ್ಲಿ ತನ್ನನ್ನು ಭೇಟಿಯಾದ ಹೊಟೇಲಿಗರ ನಿಯೋಗಕ್ಕೆ ಅಂದಿನ ಮುಖ್ಯ ಮಂತ್ರಿ ಮನೋಹರ್ ಜೋಷಿಯವರೊಮ್ಮೆ, ಹೇಳೇ ಬಿಟ್ಟಿದ್ದರು, "ನೀವು ಹೆದರದೆ ವ್ಯಾಪಾರ ಮುಂದುವರಿಸಿ, ಹೊಟೇಲುಗಳು ಮುಚ್ಚಿದರೆ ನಾನೇ ಮುಖ್ಯಮಂತ್ರಿಯಾಗಿರುವುದು ಸಾಧ್ಯವಿಲ್ಲ, ಸಾಲದ ಹೊರೆಯಲ್ಲಿರುವ ರಾಜ್ಯದ ಬೊಕ್ಕಸಕ್ಕೆ ನೀವು ಕೊಡುವ ಮೂವತ್ತು ಸಾವಿರ ಕೋಟಿಗೂ ಮಿಕ್ಕಿದ ತೆರಿಗೆಯೇ ಆಧಾರ". ಮುಂಬಯಿಯಲ್ಲಿ ನಡೆಯುವ ಪ್ರತಿ ನೂರಕ್ಕೆ 98 ಹೊಟೇಲುಗಳೂ ಕನ್ನಡಿಗರದ್ದು ಅರ್ಥಾ ಕರಾವಳಿಯ ತುಳು ಕನ್ನಡಿಗರದ್ದು! ಪ್ರತಿ ಉಪನಗರಕ್ಕೆ ಆರರಿಂದ -ಏಳು ನೂರಕ್ಕೆ ಕಡಿಮೆ ಇಲ್ಲದ ಹೊಟೇಲುಗಳಿವೆ ಎಂದಾದರೆ, ಅಂತಾ ಉಪ ನಗರಗಳು, ಸಾವಿರಾರು ಹೊಟೇಲುಗಳು, ರೆಸ್ಟೋರೆಂಟುಗಳು ನಡೆಯುವ ಮುಖ್ಯ ಮುಂಬಯಿ ಪಟ್ಟಣ...ಅನ್ಯ ಭಾಷಿಕರು ಮುಂಬಯಿ ಬಿಡುವ ಮಾತಂಟಿರಲಿ, ಒಂದು ವಾರ ಕನ್ನಡಿಗರ ಹೊಟೇಲುಗಳು ಬಾಗಿಲು ಮುಚ್ಚಿಕೊಂಡರೂ ಮುಂಬಯಿ ಉಪವಾಸ ಮಲಗಬೇಕಾದೀತು!

***
ಮಹಾರಾಷ್ಟ್ರಕ್ಕೆ ಅಲ್ಲ, ಇಡಿಯ ರಾಷ್ಟ್ರದ ಬೊಕ್ಕಸಕ್ಕೆ ಗರಿಷ್ಟ ತೆರಿಗೆ ಸಂಗ್ರಹಿಸಿ ಕೊಡುವ ನಗರ ಮುಂಬಯಿ. ಉದ್ಯಮಗಳಿಗೆ ಮುಂಬಯಿ ಹೆಸರಾಗಿದ್ದರೂ ಅತಿ ಹೆಚ್ಚು ವ್ಯಾಪಾರ ವಹಿವಾಟು ತೆರಿಗೆ ಸಂಗ್ರಹವಾಗುವುದು ಲಕ್ಷೋಪಲಕ್ಷ ಸಂಖ್ಯೆಯ ಹೊಟೇಲುಗಳಿಂದ! ಒಂದೊಮ್ಮೆ , ಮುಂಬಯಿ ಕೇವಲ ಮರಾಠಿಗ ಮುಂಬಯಿಗನಿಗೆ ಮಾತ್ರ "ಅನ್ಯರು ಸಲ್ಲ" ಎಂದಾದರೆ ಉಳಿಯುವುದು ಬರಿದೆ ಸೊನ್ನೆ , ಅದು "ಎಕ್ಕ "ಎದ್ದು ಹೋದ ಇಸ್ಪೀಟೆಲೆಗಳಂತೆ!!
ಈಗ ಯೋಚಿಸಿ, ಮುಂಬಯಿ ಮರಾಠಿ ಮಾತಾಡುವ , ಮಹಾರಾಷ್ಟ್ರದಲ್ಲೇ ಜನಿಸಿದ ಪ್ರಜೆಗೆಂದಾದರೆ .. .
ಅದು,
ಚಿತ್ರ ಕಳಚಿ ಬಿದ್ದ್ದ ಚೌಕಟ್ಟು!!
*******