Sunday, February 7, 2010



ಮು೦ಬೈ ರಸ್ತೆ
ಬದಿಯ ಅತಿಥೇಯ… ಈ “ಬೆ೦ಚ್ ಮೆನ್”….!



ಎಲ್ಲ ಕಾಲಕ್ಕೂ ಜನ ನಿರಂತರವಾಗಿ ನಡೆಸಿಕೊಂಡು ಬಂದಿರುವ ಒಂದು ಕೆಲಸವೆಂದರೆ ಕಾಲ ಕೆಟ್ಟುಹೊಯಿತೆಂದು ಆಡಿಕೊಳ್ಳುತ್ತಾ ಬಂದಿರುವುದು. ನಡುವೆ ಇವ್ಯಾವುದಾರ ಪರಿವೆಯೂ ಇಲ್ಲದೆ , ಕೆಟ್ಟು ಹೋಗುವ ಕಾಲದೊಂದಿಗೆ ಕೆಡದೆ ಬದುಕಿನ ಸಾಫಲ್ಯಕ್ಕೆ , ಅರ್ಥವಂತಿಕೆಗೆ ,ಕಾರಣವಾಗುತ್ತಾ , ಬದುಕುವವರು ಕೆಲವರು. ತಮ್ಮ ಇರವಿಗೆ , ತಮಗೆ ದೊರೆತ ಅರಿವಿಗೆ , ತಾವು ಕಂಡು ತಮ್ಮ ವ್ಯಕ್ತಿತ್ವದಲ್ಲಿ ಅರಗಿಸಿಕೊಂಡ ಮನುಷ್ಯತ್ವಕ್ಕೆ ಇಂಬು ನೀಡುವ ಇಂತವರು ಸಂಖ್ಯೆಯಲ್ಲಿ ಕಡಿಮೆ ಇರಬಹುದು , ಆದರೆ ಇವರು ಮಾಡುವ ಕೆಲಸ ದೊಡ್ಡದು. . ಇವರೆಂದೂ ಕಾಲದ ಬಗೆಗೆ ಗೊಣಗಿದ್ದನ್ನಾಗಲೀ, ಬದಲಾಗುತ್ತಿರುವ ವೌಲ್ಯಗಳ , ಮನುಷ್ಯರ ಕುರಿತು , ಆಡಿದ್ದನ್ನಾಗಲೀ ನೀವು ಕೇಳಲಾರಿರಿ. ತಮ್ಮ ಕೆಲಸ ಮುಗಿಯುತ್ತ ಲೇ ಸದ್ದಿಲ್ಲದೆ ಅಲ್ಲಿಂದ ಬದಿಗೆ ಸರಿದು ನಿಲ್ಲುತ್ತಾರವರು..

ಕೊಡು ಪಡೆದುಕೊಳ್ಳುವವರಿಬ್ಬರೂ ಹೆಚ್ಚುತ್ತಿರುವ ಕಾಲವಿದು . ಕೊಟ್ಟವನಿಗೆ ಕೊಟ್ಟದ್ದನ್ನು ಹೇಳಿ ಕೊಳ್ಳುವ ಚಪಲ ಹೆಚ್ಚಿರುವಂತೆಯೇ ಪಡೆದವನಿಗೂ ಕೊಟ್ಟವನ ಬಗೆಗೆ ತಾರೀಪು ಮಾಡಿದಷ್ಟೂ ಸಾಕೆನಿಸುತ್ತಿಲ್ಲ. ಕಾರಣ ಅದರಿಂದ ಅವನ ಮುಂದಿನ ದಿನಗಳ "ಹಸಿವೆ" ಗೂ ನಿರಂತರ ದಾರಿಯಾಗುತ್ತದೆ. ಈ ಮಧ್ಯೆ ನಿಜಾರ್ಥದಲ್ಲಿ , ಡಿವಿಜಿ ಹೇಳಿದಂತೆ "ಬೆಳಕೀವ ಸೂರ್ಯ ಚಂದ್ರರದೊಂದು ಸದ್ದಿಲ್ಲ, ಇಳೆಯಿಂದ ಮೊಳಕೆವೊಡೆವಂದು ತುತ್ತೂರಿ ದನಿಯಿಲ್ಲ.." ಎಂಬಂತೆ ಸದ್ದಿಲ್ಲದೆ, ಸುದ್ದಿ ಮಾಡದೆ ಬೆಳಕಿತ್ತವರು ಯಾರ ಗಮನಕ್ಕೂ ಬರುತ್ತಿಲ್ಲ, ಅಥವಾ ಬಂದರೂ ನಮಗದು ಅಷ್ಟಾಗಿ ಮುಖ್ಯವೆನ್ನಿಸುತ್ತಿಲ್ಲವೇನೋ..
ಹತ್ತಿರದ ಸಂಬಂಧಿಕರೊಬ್ಬರು ಮೃತರಾಗಿದ್ದ ವೇಳೆ ಅವರ ಅಂತ್ಯಕ್ರಿಯೆಗಾಗಿ ದುಃಖ ತಪ್ತರಾಗಿ ಸ್ಮಶಾನಕ್ಕೆ ಹೋದದ್ದನ್ನು ನೆನಪಿಸಿಕೊಳ್ಳಿ. ದೇಹದ ಅಂತಿಮ ಕ್ರಿಯೆಯನ್ನು ಪೂರ್ತಿ ಗೊಳಿಸುವ ಮುನ್ನ , ತೀರಾ ಬಂಧುವಿನ ಆಗಮನಕ್ಕಾಗಿ ಕಾದು ಸುಸ್ತಾಗಿರುತ್ತೀರಿ . ಆಗ ಅಲ್ಲೆರಡು ಕಂದು ಬಣ್ಣದ ಬೆಂಚುಗಳು ನಿಮ್ಮ ಸುಸ್ತಾದ ಬೆನ್ನೆಲುಬಿಗೊಂದು ಕ್ಷಣದ ಆರಾಮ ನೀಡಲು ಕಾಯುತ್ತಿರುತ್ತದೆ. ಕ್ರಿಯೆಗಳೆಲ್ಲ ಮುಗಿದು ಮನ ಭಾರವಾಗಿ,ಇನ್ನೇನು ಮನೆಯತ್ತ ಮುಖ ಮಾಡುವ ಮೊದಲು ಕೈ ಕಾಲಿಗೊಂದಿಷ್ಟು ನೀರ ಸಿಂಚನ ನೀಡಲು ಅತ್ತಿತ್ತ ನೋಡಿದರೆ ಅಲ್ಲೊಂದು ನೀರಿನ ಟ್ಯಾಂಕಿ. ಮುಖ ತೊಳೆದು ಒಂದು ಜೀವದ ಯಾತ್ರೆ ಮುಗಿಯೆತೆಂದು , ಆ ಜೀವಕ್ಕೆ ಮನದಲ್ಲೇ ನಮಿಸಿ ಹೊರಡುತ್ತೀರಿ. ಇತ್ತ ರೈಲು ಹತ್ತಲು ರೈಲ್ವೇ ನಿಲ್ದಾಣಕ್ಕೆ ಬಂದರೆ ಆಗ ತಾನೇ ಹೊರಟ ಬಂಡಿಯ ಬಾಲ ಕಾಣಿಸುತ್ತದೆ. ಸರಿ ಇನ್ನೊಂದಕ್ಕೆ ಕಾಯೋಣವೆನ್ನುತ್ತ ಆತ್ತಿತ್ತ ನೋಡುವರೇ ಅದೇ , ಅದೇ ಕಂದು ಬಣ್ಣದ ಸಿಮೆಂಟಿನ ಬೆಂಚು ಬೆನ್ನಿಗಾಸರೆ.

ಹದಿನೈದು ವರ್ಷಗಳ ಹಿಂದೊಮ್ಮೆ ಸಯನ್‌ ಸ್ಟೇಶನ್ನಿನ ಪ್ಲಾಟ ಫಾರಂ ನಂಬರ್‌ ೧ ರಲ್ಲಿ ಒಂದಷ್ಟು ಜನ ಸುತ್ತ ಜಮಾಯಿಸಿದಂತೆ ಕಂಡು ಬಂದಿತ್ತು. ಪಕ್ಕದ ರೈಲ್ವೇ ಕ್ವಾರ್ಟರ್ಸ್‌ ನಲ್ಲೇ ಇದ್ದ ವಸತಿಯಿಂದ ಇಳಿದುಬಂದು ನೋಡಿದರೆ ಕೆಲ ರೈಲ್ವೇ ಯಾತ್ರಿ ಹೆಂಗಸರು ಬಸುರಿ ಹೆಣ್ಣೊಬ್ಬಳಿಗೆ ನೆರವಾಗುತ್ತ್ತಿದ್ದರು . ಅದು ಸುಮಾರು ಬೆಳಗ್ಗಿನ ೬ ರ ವೇಳೆ . ಹೆರಿಗೆಗೆಂದು ವಿದ್ಯಾವಿಹಾರದಿಂದ ಸಯನ್‌ ಆಸ್ಪತ್ರೆಗೆ ದಾಖಲಾಗಲು ಹೊರಟಿದ್ದ ಜೋಪಡಾ ನಿವಾಸಿ ಹೆಣ್ಣು ಮಗಳು ರೈಲಿಂದ ಇಳಿಯುತ್ತಲೇ ಬಸಿರ ಭಾರ ತಾಳಲಾರದೆ ಕುಸಿದು ಬಿಟ್ಟಿದ್ದಳು. ಬಳಿ ಇದ್ದ ಪ್ರಯಾಣಿಕರು ಆಕೆಯನ್ನು ಎತ್ತಿ ಜತನದಿಂದ ಸಿಮೆಂಟಿನ ಬೆಂಚಿನ ಮೇಲೆ ಮಲಗಿಸಿದರು. ಪ್ರಸವದ ಬಳಿಕ ಈ ಹಠಾತ್‌ ಹೆರಿಗೆಗೆ ನೆರವಾದ ಆ ಹೃದಯವಂತರಲ್ಲೊಬ್ಬ ಹೆಂಗಸು ಪಕ್ಕದಲ್ಲೇ ತಂಪು ನೀರಿನ ನಳ್ಳಿಯಿಂದ ನೀರನ್ನು ತಂದು ಬೆಂಚನ್ನು ನೆಲವನ್ನು ತೊಳೆದದ್ದು ಮೊನ್ನೆ ನಡೆದಂತೆ ಕಣ್ಣೊಳಗೆ ಕಟ್ಟಿದೆ. ಆಗಲೇ ಕಂಡದ್ದು, ಮುಂಬಯಿಯ ಜನ ಸಾಮಾನ್ಯನ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಈ ಕಂದು ಬಣ್ಣದ ಬೆಂಚು ಮತ್ತು ನೀರಮನೆ (ಪೀಯೂಸ್‌) ಯ ಅರ್ಥಪೂರ್ಣ ಅನುಸಂಧಾನ .ಜೊತೆಗೆ ಇದರ ಹಿಂದಿರುವ ಒಂದು ಹೂ ಮೊಗ್ಗೆಯಂತಾ ಮನಸ್ಸು.
ಹಾಗೆ ನೋಡಿದರೆ ಇದು ಒಂದು ಬೆಂಚು ನೀರ ಮನೆ ಯ ಕಥೆಯಲ್ಲ. ಮುಂಬಯಿ ಎಂಬ ಮಹಾ ಶಹರದಲ್ಲಿ ನಿರಂತರವಾಗಿ ಕಳೆದ ಅರ್ಧಶತಮಾನದಿಂದ (೧೯೫೯-2009) ನಡೆದುಬಂದ ಮಹಾ "ದಾನ ಯಜ್ಞ ' ವೊಂದರ ಯಶೋಗಾಥೆ...
...ಅನಾಥ ಮಕ್ಕಳು , ನೊಂದ ಮಹಿಳೆಯರು ,ಬದುಕಿನ ಸಂಜೆಯಲ್ಲಿರುವ ವೃದ್ದರು ,ಅಶಕ್ತ ವಿಕಲಾಂಗರು , ಬಿದ್ದ ಬದುಕಿನ ಜಟಕಾಬಂಡಿಯನ್ನೆತ್ತಿ ಮತ್ತೆ ಜೀವನದ ಓಟದಲ್ಲಿ ಸಾಗಲೆತ್ನಿಸುವವರು....ಓಹ್‌..!!! ನೂರು ಸಾವಿರ ಬಗೆಯಲ್ಲಿ , ವಿಧದಲ್ಲಿ ಲಕ್ಷೋಪಲಕ್ಷ ಜನರ ಬದುಕಿಗೆ ಆಸರೆಯಾದ ಕಥೆ... ಇಲ್ಲ , ಇನ್ನೇನು ಬೆಳಕು ನಂದಿಯೇ ಹೋಯಿತು ಎಂದು ನಿಡುಸುಯ್ದಾಗ ಜೀವದ ಬೆಂಕಿ ಆರದಂತೆ ತೈಲ ಎರೆದ, ಎರೆಯುತ್ತಲೇ ಇರುವ ಕೈಯ ಕಥೆ.. !


ಸಮುದ್ರದ ಬದಿಯ ಕೊಲಬಾದಿಂದ ಹಿಡಿದು ಪಶ್ಚಿಮದಲ್ಲಿ ಮುಂಬಯಿ ಶಹರದ ಕೊನೆಯ ಉಪನಗರ ದಹಿಸರ್‌ ವರೆಗೆ ಇತ್ತ ವಿಟಿ ಯಾನೆ ಛತ್ರಪತಿ ಶಿವಾಜಿ ನಿಲ್ದಾಣದಿಂದ ಥಾಣೆ ಯ ವರೆಗೆ ರೈಲ್ವೇ ನಿಲ್ದಾಣಗಳು , ಪಾರ್ಕುಗಳು, ಸಾರ್ವಜᅵನಿಕ ಆಸ್ಪತ್ರೆಗಳು, ಜಿಲ್ಲಾ ಕಚೇರಿ, ಕೋರ್ಟು ಆವರಣಗಳು, ಶ್ಮಶಾನಗಳು, ಶಾಲೆ ಕಾಲೇಜು ಬಯಲುಗಳು, ಮಂದಿರಗಳು, ನಗರ ಪಾಲಿಕೆಗಳ, ಎಲ್ಲ ಬಸ್‌ ನಿಲ್ದಾಣಗಳು ಹೀಗೆ ಜನ ಸಾಮಾನ್ಯ ಭೇಟಿ ನೀಡುವ ಎಲ್ಲೆಡೆ ೨೧ ಸಾವಿರಕ್ಕೂ ಹೆಚ್ಚು ಕಂದು ಬಣ್ಣದ 'ತ್ರೀ ಸೀಟರ್‌ " ಸಿಮೆಂಟಿನ ಬೆಂಚುಗಳು ೧೨೫ ಕ್ಕೂ ಮಿಕ್ಕಿದ ತಂಪು ನೀರ ಮನೆ (ಪೀಯೂಸ್‌) ಗಳು....

ಆರೋಗ್ಯ ವಿಭಾಗದಲ್ಲಿ, ನಗರದ ವಿ ಎನ್‌ ದೇಸಾಯಿ , ನಾನಾವಟಿ , ಬೊಯಿಸರ್‌ , ತಾರಾಪುರ್‌ ಮತ್ತು ಅಮರಾವತಿ ಸೇರಿದಂತೆ ೮ ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಬೆಂಕಿ ಅವಘಡ ಮತ್ತು ನೇತ್ರ ಚಿಕಿತ್ಸಾ ವಾರ್ಡ್‌ ಗಳು... ೨೭ ಆಸ್ಪತ್ರೆಗಳಿಗೆ ಅಂಬುಲೆನ್ಸ್‌ ಗಳು.. ೫೫ ನೇತ್ರ ಚಿಕಿತ್ಸಾ ಶಿಬಿರಗಳು, ೬ ಸಾವಿರ ಉಚಿತ ಕನ್ನಡಕಗಳು, ಕಾಲಿಲ್ಲದವರಿಗೆ ಗಾಗಿ ೬೦೦ ಜೈಪುರ ಕಾಲುಗಳು, ವಿಕಲಾಂಗರಿಗಾಗಿ ೧೭೫೪ ತ್ರಿಚಕ್ರ ಸೈಕಲ್‌ ಗಳು.. ೪೮೦ ಪಿ ಸಿ ಓ (ಟೆಲಿಫೋನ್‌ ಬೂತು) ಗಳು..ಕಣ್ಣಿಲ್ಲದವರಿಗಾಗಿ ೩೫೦ ಬ್ರೈಲ್‌ ವಾಚುಗಳು..ಕುರುಡರ ಆರೋಗ್ಯ ತಪಾಸಣೆಗಾಗಿಯೇ ವಿಶೇಷ ಟ್ರಸ್ಟ್‌ , ಆಸ್ಪತ್ರೆಯ ಸ್ಥಾಪನೆ..
ಆರ್ಥಿಕ ದುರ್ಬಲᅵ ಮಕ್ಕಳ ವಸತಿ ಕಲಿಕೆಗಾಗಿ ೫೦ ಕ್ಕೂ ಮಿಕ್ಕಿದ ಬಾಲಮಂದಿರ , ಬಾಲವಾಡಿ, ಎಲ್ಲರ ಮರುಕಕ್ಕೆ ಪಾತ್ರರಾದರೂ ಯಾರ ನೆರವೂ ದೊರಕದ ಕೊಳೆಗೇರಿಯಲ್ಲಿ ಮತ್ತು ವೇಶ್ಯಾ ಗಲ್ಲಿಗಳಲ್ಲಿ ಜನಿಸಿದ ಮಕ್ಕಳನ್ನು ಹುಡುಕಿ ಶಾಲೆಗೆ ತರುವುದಕ್ಕಾಗಿಯೇ ಹತ್ತಾರು ಮೊಬೈಲ್‌ ವ್ಯಾನುಗಳು, ೧೧ ಹಾಸ್ಟೆಲುಗಳು , ವಾರಕ್ಕೊಮ್ಮೆ ನಡೆಯುವ ೭೦ ಕ್ಕೂ ಹೆಚ್ಚಿನ ವೈದ್ಯಕೀಯ ತಪಾಸಣಾ ಶಿಬಿರಗಳು...
ಮಹಿಳೆಯರ ಪುನರ್ವಸತಿ ಮತ್ತು ಕಲ್ಯಾಣಕ್ಕಾಗಿ "ಶೆಲ್ಟರ್‌" ಎಂಬ ವಿಶೇಷ ಯೋಜನೆ, ೧೭ ಪುನರ್ವಸತಿ ಉಚಿತ ಹಾಸ್ಟೆಲ್‌ ೩೪೦೦ ಕ್ಕೂ ಮೀರಿದ ಹೊಲಿಗೆ ಯಂತ್ರ ವಿತರಣೆ.. ಪ್ರತಿ ವಾರ ವೃತ್ತಿ ಕಲಿಕೆ ಮತ್ತು ಅನುಭವ ಕಾರ್ಯಾಗಾರ, ಮಹಿಳೆಯರಿಗಾಗಿಯೇ ೩೧ ವೃದ್ದಾಶ್ರಮ ಮತ್ತು ಅನಾಥಾಶ್ರಮ ಗಳು...
ಉಪನಗರ ಮಲಾಡ್‌ ನಲ್ಲಿ ಸರಾಫ್‌ ಗರ್ಲ್ಸ್‌ ಕಾಲೇಜು, ಹೈಸ್ಕೂಲು, ಘನಶಾಮ್‌ ದಾಸ್‌ ಪಾರ್ಕ್‌ , ನಗರ ಪಾಲಿಕೆ ವ್ಯಾಪ್ತಿಯಲ್ಲಿ ೪೭ ಸಾರ್ವಜᅵನಿಕ ಶೌಚಾಲಯಗಳು, ಬಡವರ ಮದುವೆ ಸಮಾರಂಭಗಳಿಗಾಗಿಯೇ ಮೀಸಲಾದ ೧೧ ಕಮ್ಯೂನಿಟಿ ಹಾಲ್‌ ಗಳು..೮೫ ಶಾಲೆಗಳಿಗೆ ಉಚಿತ ಗ್ರಂಥಾಲಯಗಳು...!


ಸುಮಾರು ಮುನ್ನೂರಕ್ಕೂ ಹೆಚ್ಚಿನ ವಿಭಾಗಗಳಲ್ಲಿ ಪ್ರತಿ ವರ್ಷ ಪ್ರತಿ ದಿನ ಪ್ರತಿ ತಾಸು ಎಂಬಂತೆ ನಡೆಯುತ್ತಿರುವ ಈ ಚತುರ್‌ ವಿಧದ ದಾಸೋಹವನ್ನು ಎಷ್ಟು ಲೆಕ್ಕ ಹಾಕುತ್ತೀರಿ..ಹೇಗೆ ಲೆಕ್ಕ ಹಾಕುತ್ತೀರಿ..?
****
ಆಗ ತಾನೇ ಅವರು ಎಸ್‌ ಎಸ್‌ ಸಿ ಮುಗಿಸಿ ಕೈಗಾರಿಕಾ ಡಿಪ್ಲೊಮಾವೊಂದನ್ನು ಪೂರೈಸಿ ವರ್ಲಿಯᅵಲ್ಲಿ ಸುಪರ್‌ ಟೆಕ್ಸ್‌ ಸರೆಕ್ಸ್‌ ಗ್ರೂ ಪ್‌ ಆರಂಭಿಸಿದ್ದರು. ಅವರ ಹೆಸರು ಮಹಾವೀರ್‌ ಸರಾಫ್‌ , ವಯಸ್ಸು ಇನ್ನೂ ಇಪ್ಪತ್ತೈದು !ಉದ್ಯಮದ ಜೊತೆಗೇ ಅದೇ ವರ್ಷ ಜನತಾ ಜನಾರ್ದನನ ಸೇವೆಗೂ ನಾಂದಿ . ತಂದೆ ಘನ ಶ್ಯಾಮ್‌ ದಾಸ್‌ ಮತ್ತು ದುರ್ಗಾದೇವಿ ಸರಾಫ್‌ ಇವರ ಹೆಸರಲ್ಲಿ ೧೯೫೯ ರಲ್ಲಿ ಆರಂಭವಾದ ಈ ಬೃಹತ್‌ ಸೇವಾ ಕೈಂಕರ್ಯಕ್ಕೆ ಮುಂದೆ ಮಹಾವೀರ ಪ್ರಸಾದ್‌ ಟ್ರಸ್ಟ್‌ , ಕಿರಣ್‌ ದೇವಿ ಹಾಗೂ ಸುಪರ್‌ ಟೆಕ್ಸ್‌ ಫೌಂಡೇಶನ್‌ ಗಳೂ ಸೇರಿ ಪಂಚ ಮುಖಗಳಿಂದ ಸೇವಾ ಯಜ್ಞ ನಡೆದಿದೆ. ಆದರೆ ಈ ಐದೂ ಮುಖಗಳ ಹಿಂದಿನ ಮನುಷ್ಯ ಮುಖವೊಂದೇ ... ಮಹಾವೀರ್‌ ಸರಾಫ್‌ !
****
ಕೋರ್ಪೊರೇಟ್‌ ಜಗತ್ತಿನಲ್ಲಿ ಅವರ ಉದ್ಯಮಕ್ಕೆ ಒಳ್ಳೆಯ ಹೆಸರಿದ್ದರೂ ಅದೇನೂ ಅಂಬಾನಿ, ಟಾಟಾ ಬರುವಂತಾದ್ದಲ್ಲ. ಆದರೆ ದಾನ ಕಾರ್ಯದ ಹಣದ ವೌಲ್ಯ ೪೦೦ ಕೋಟಿಗೂ ಹೆಚ್ಚು . ಬದಲಿಗೆ ಯಾವನಾದರೂ ರಾಜಕಾರಣಿಗೆ ಒಂದೆರಡು ಕೋಟಿ ಕೊಡುತ್ತಿದ್ದರೆ ಅವರು ಮಲ್ಯ ಬಜಾಜ್‌ ಗಳಂತೆ ಸಂಸತ್ತಿಗೆ ಹಿಂಬಾಗಿಲ ಪ್ರವೇಶ (ರಾಜ್ಯ ಸಭಾ ಸದಸ್ಯತ್ವ) ಪಡೆಯಬಹುದಿತ್ತು. ಸ್ವಂತದ ಹಡಗು , ವಿಮಾನಗಳಲ್ಲಿ ಪಿಕ್‌ ನಿಕ್‌ ಮಾಡಬಹುದಿತ್ತು.
ಆದರೆ ಅವರು ಮುಂಬಯಿಯ ಉದ್ದಗಲದ ಜನ ಸಾಮಾನ್ಯನೆಡೆಗೆ ಹೊರಳಿದರು.ಉಕ್ಕುವ ಯೌವನದ ದಿನಗಳಲ್ಲಿ ಐಶಾರಾಮದ ಬದುಕಿನ ಬದಲು ನಗರದ ಆಸ್ಪತ್ರೆ ಸಾರ್ವಜᅵನಿಕ ಕಚೇರಿಗಳ ಸ್ತಿತಿಗತಿಯನ್ನು ಅಧ್ಯಯನ ಮಾಡಿದರು.ಶಾಲೆ ಗಳ ಆವರಣ ಸುತ್ತಿದರು. ವೃದ್ದರನ್ನು ಅಶಕ್ತರನ್ನು ಕಂಡರು. ಇವರೆಲ್ಲರ ಆರೈಕೆಗಾಗಿಯಾದರೂ ತನ್ನ ಬಳಿ ಸಂಪತ್ತು ಬೇಕೆಂದು ಭಾವಿಸಿದರು. ಉದ್ಯಮದಲ್ಲಿ ಪರಿಶ್ರಮ ಬುದ್ದಿಮತ್ತೆ ಎರಡನ್ನೂ ಪ್ರಯೋಗಿಸಿ ಬೆಳೆದರು. ಜೊತೆಗೆ ತನ್ನ ಕನಸನ್ನೂ ಕೂಡ..!

ಕೆಲ ವರ್ಷಗಳ ಹಿಂದೆ ಲಿಮ್ಖಾ ಬುಕ್‌ ಅಫ್‌ ಗಿನ್ನೆಸ್‌ ರೆಕಾರ್ಡ್ಸ್‌ ಗೆ ಆಯ್ಕೆಯಾಗುವಾಗ ಈ ಮಹಾನುಭಾವನಿಗೆ . ಆ ಸಂಸ್ಥೆ ಕೊಟ್ಟ ಬಿರುದು ಭಾರತದ "ರಸ್ತೆ ಬದಿಯ ಅತಿಥೇಯ "! ಇನ್ನೊಂದು ಸಂಸ್ಥೆ ಪ್ರೀತಿಯಿಂದ ಕರೆದದ್ದು ಭಾರತದ " ಬೆಂಚ್‌ ಮ್ಯಾನ್‌" . ತಾನು ಆರ್‌ ಸಿ ಸಿ ಬೆಂಚು, ನೀರಮನೆಗಳಿಂದ ಹಿಡಿದು ದಾನ ಕೊಟ್ಟ ಎಲ್ಲ ಪರಿಕರಗಳನ್ನು ಆಗಾಗ ಗಮನಿಸಿ ತಾನೇ ರಿಪೇರಿ ಮಾಡುವುದು ಇಲ್ಲ ಹೊಸತನ್ನೇ ಅಲ್ಲಿ ಹಾಕಿ ಬಿಡುವುದು ಅವರ ಇನ್ನೊಂದು ವೈಖರಿ.


ಇಷ್ಟಕ್ಕೂ ಸರಾಫ್‌ ಅವರ ದುಡ್ಡೇನೂ ಮಠ ಮದಿರಗಳಿಗೆ ಬರುವಂತೆ ಭಕ್ತರ ಹರಿಕೆಯ ಹಣವೋ , ಸಂತರೆಂದು ಹೇಳಿಕೊಳ್ಳುವವರ ಪಾದಕ್ಕೆ ಬಿದ್ದ ಕಾಣಿಕೆಯೋ ಅಲ್ಲವಲ್ಲಾ... ನಮ್ಮ ನಿಮ್ಮಂತೇ ಬೆಳಗ್ಗೆ ಎದ್ದು ದುಡಿವ , ೭೬ ರ ಇಳಿ ಹರಯದಲ್ಲೂ ತಪ್ಪದೆ ಕಚೇರಿಗೆ ಹೋಗುವ , ದುಡಿಮೆಯ ಫಲ. ಅದಕ್ಕಾಗಿಯೇ , ಅವರ ಸೇವೆಯೂ ಅಷ್ಟೇ ,.. ನೇರವಾಗಿ ಜನತಾ ಜನಾರ್ಧನನಿಗೆ, ಮಧ್ಯೆ "ಮಧ್ಯವರ್ತಿ" ಗಳಿಲ್ಲ. .ಹಾಗಾಗಿಯೇ ಅವರು ಸಮಾಜದ ಕಟ್ಟಕಡೆಯ ಮನುಷ್ಯನ ಗೆಳೆಯ!!
ಬಡಬಗ್ಗರ ಸೇವೆಯಲ್ಲಿ ಒಂದು ಸರಕಾರಕ್ಕೆ ಪರ್ಯಾಯᅵ ಹೆಸರು ಮಹಾವೀರ್‌ ಸರಾಫ್‌ . ಆದರೆ ಅಲ್ಲಿ ಪ್ರಜೆಯ ದುಡ್ಡು ಪ್ರಜೆಗೆ ಇಲ್ಲಿ ವ್ಯಕ್ತಿಯ ಮನೆಯ ದುಡ್ಡು ಪ್ರಜೆಯ ಹಿತಕ್ಕೆ . ತನ್ನ ಮೂವರು ಗಂಡು ಮಕ್ಕಳನ್ನೂ ಈ "ಬಹುಜನ ಹಿತಾಯ ಸುಖಾಯ" ಕೆಲಸದಲ್ಲಿ ತೊಡಗಿಸಿರುವ ಸರಾಫ್‌ ಸದಾ ತೆರೆಯ ಮರೆಯಲ್ಲುಳಿಯ ಬಯಸುತ್ತಾರೆ. ಗಿನ್ನೆಸ್‌ ರೆಕಾರ್ಡ್‌ ವ್ಯವಸ್ಥಾಪಕರು ಬಹು ಒತ್ತಾಯ ಮಾಡಿದ ಬಳಿಕವಷ್ಟೇ ಅವರು ತನ್ನ ಪ್ರಸಿದ್ದ ತ್ರೀ ಸೀಟರ್‌ ಬೆಂಚಿನ ಮೇಲೆ ಕುಳಿತು ಛಾಯಾಚಿತ್ರಕ್ಕೆ ಅವಕಾಶ ನೀಡಿದರು. ಇಷ್ಟೆಲ್ಲ ಕೆಲಸದ ಬಗೆಗೆ ಕೇಳಿದರೆ ಅವರು ಹೇಳುವ ಮಾತೇನು ಗೊತ್ತಾ..."" ಕುಟುಂಬ ಬಹಳ ಕಷ್ಟದ ದಿನಗಳಲ್ಲಿದ್ದಾಗಲೂ ನನ್ನ ಅಮ್ಮ ನೆರಯ ಬಡ ಮಕ್ಕಳ ಶಾಲೆಯ ಫೀ ಕಟ್ಟುತ್ತಿದ್ದಳು..ನನಗವಳು ಏನೂ ಹೇಳಿಲ್ಲ...ಆದರೆ ನಾನವಳು ಹೇಳದೆಯೇ ಕಾಯಕವನ್ನು ಮುಂದುವರಿಸುತ್ತಿದ್ದೇನೆ, ಇನ್ನು ಜನರ ಕೃತಜ್ಞತೆಯ ಚಿಂತೆ ನನಗೇಕೆ....""
****
ಇನ್ನೆಂದಾದರೂ ರೈಲು ನಿಲ್ದಾಣದಲ್ಲೋ, ಪಾರ್ಕುಗಳಲ್ಲೋ ಆ ಕಂದು ಬಣ್ಣದ ಬೆಂಚಲ್ಲಿ ಕೂತಾಗ ಸರಾಫ್‌ ಟ್ರಸ್ಟ್‌ ನ ಹೆಸರು ಕಂಡಲ್ಲಿ , ಆಪ್ತವಾಗೊಮ್ಮೆ ಸವರಿ ಕೊಳ್ಳಿ.. ..ಬೆರಳ ತುದಿಗಂಟಿದ ಪ್ರೀತಿಯ ಹುಡಿಯನ್ನು ಎದೆಗೊತ್ತಿಕೊಳ್ಳಿ..

******